
ಅಂಬೇಡ್ಕರ್ ಮತ್ತು ಪತ್ರಿಕೋದ್ಯಮ
“ಭಾರತದ ಇಂದಿನ ಪತ್ರಿಕೋದ್ಯಮ ತಮಗೆ ಬೇಕಾದ ಹಾಗೂ ತಮಗೆ ಬೇಕಾದವರ ತುತ್ತೂರಿ ಊದಲು ಇರುವ ಪತ್ರಿಕೋದ್ಯಮ” ಎಂದು ಅಂಬೇಡ್ಕರ್ ದಶಕಗಳ ಹಿಂದೆಯೇ ಸಾರಿದ್ದರು.
ಹಲವು ದಶಕಗಳ ಹಿಂದಿನ ಈ ಅಂಬೇಡ್ಕರ್ ವಾಣಿ ಇಂದಿಗೂ ಅದೆಷ್ಟು ಪ್ರಸ್ತುತ!. ಅಂಬೇಡ್ಕರ್ ಅವರ ವಿಶೇಷವೇ ಈ ಮುಂಗಾಣ್ಕೆ.
ಭಾರತ ಇಂದು ಹೊರಳು ದಾರಿಯಲ್ಲಿ ನಿಂತಿದೆ. ರಾಜಕೀಯ ಹಾಗೂ ಸಾಮಾಜಿಕ ಏರುಪೇರುಗಳ ಅಂಚಿನಲ್ಲಿರುವ ದೇಶಕ್ಕೆ ಪತ್ರಿಕೋದ್ಯಮ ಕಣ್ಣಾಗಬೇಕಾಗಿತ್ತು. ನಾಡಿನ ನಾಡಿ ಬಡಿತವನ್ನು ಮುಂಚೆಯೇ ಕಂಡು ಹಿಡಿದು ಅದರ ಓರೆಕೋರೆಗಳತ್ತ ಭೂತಗನ್ನಡಿ ಹಿಡಿದು ಸರಿದಾರಿಯಲ್ಲಿ ಮುನ್ನಡೆಸಬೇಕಾಗಿತ್ತು. ಭಾರತೀಯ ಪತ್ರಿಕೋದ್ಯಮ ಈ ನಿಟ್ಟಿನಲ್ಲಿ ವಿಫಲವಾಗಿದೆ. ಕಟು ವಾಸ್ತವವನ್ನು ಮುಂದೆ ಹರಡಿಕೊಂಡು ಕೈ ಚೆಲ್ಲಿ ಕುಳಿತಿದೆ. ಪತ್ರಿಕೋದ್ಯಮವಿನ್ನೂ ಅಂಬೆಗಾಲಿಕ್ಕುತ್ತಿದ್ದಾಗ ಅಂಬೇಡ್ಕರ್ ಅವರು ಆಡಿದ ಆ ಮಾತು ಇಂದಿಗೂ ಪದಶಃ ಅನ್ವಯಿಸುತ್ತಿರುವುದು ಪತ್ರಿಕೋದ್ಯಮದ ಕಟು ವಿಮರ್ಶೆಯೇ ಸರಿ.
ಪತ್ರಿಕೋದ್ಯಮಕ್ಕೆ ಅಂಬೇಡ್ಕರ್ ಕೊಡುಗೆ ಅಪಾರವಾದದ್ದು. ಭಾರತದ ಪ್ರತಿಯೊಬ್ಬ ಹಿರಿಯ ನಾಯಕರೂ ಪತ್ರಿಕೆ ಆರಂಭಿಸಿ ಅದನ್ನು ಕೈಹಿಡಿದು ನಡೆಸಿದ್ದಾರೆ. ತಾವು ನಂಬಿದ ಸತ್ಯಗಳನ್ನು ಪ್ರಚುರಪಡಿಸಲು ಈ ಪತ್ರಿಕೆಗಳು ಅವರ ಮುಖವಾಣಿಯಾಗಿ ನಿಲ್ಲುತ್ತಿದ್ದವು. ಸಾಮಾಜಿಕ ಹಾಗೂ ರಾಜಕೀಯ ಹೋರಾಟಗಳಲ್ಲಿ ನಾಯಕರುಗಳಂತೆಯೇ ಈ ಪತ್ರಿಕೆಗಳೂ ಪ್ರಧಾನ ಪಾತ್ರ ವಹಿಸುತ್ತಿದ್ದವು.
ಮಹಾತ್ಮಗಾಂಧಿ ‘ಯಂಗ್ ಇಂಡಿಯಾ’ ‘ಹರಿಜನ’ ಪತ್ರಿಕೆಯನ್ನು ಆರಂಭಿಸಿದರು. ಲೋಕಮಾನ್ಯ ತಿಲಕ್ ‘ಕೇಸರಿ’ ಪತ್ರಿಕೆಯನ್ನು ಲಾಲಾ ಲಜಪತ್ ರಾಯ್ ‘ದಿ ಪೀಪಲ್’ ಪತ್ರಿಕೆಯನ್ನು ಜವಹರಲಾಲ್ ನೆಹರೂ ‘ದಿ ನ್ಯಾಷನಲ್ ಹೆರಾಲ್ಡ್’ ಪತ್ರಿಕೆಯನ್ನೂ ನಡೆಸುತ್ತಿದ್ದರು.ಅಂಬೇಡ್ಕರ್‌ರವರಿಗೆ ಪತ್ರಿಕೋದ್ಯಮ ಅತ್ಯಗತ್ಯ ಸಾಧನವಾಗಿತ್ತು. ಹಾಗೆಯೇ ಸಾಹಸದ ದಾರಿಯೂ ಆಗಿತ್ತು. ಅಂಬೇಡ್ಕರ್ ತಲುಪಬೇಕಾಗಿದ್ದುದು ತೀರಾ ಹಿಂದುಳಿದ, ತುಳಿತಕ್ಕೊಳಗಾದ, ಅಕ್ಷರ ಜಗತ್ತಿಗೆ ಅಪರಿಚಿತರಾದ, ಹೊಸ ಬೆಳಕಿನ ಲೋಕವನ್ನು ಕಾಣದ ಜನರನ್ನು. ಹೀಗಾಗಿ ಅಂಬೇಡ್ಕರ್‌ರವರು ಸಾಗಬೇಕಾದ ದಾರಿ ಬಹು ದೂರದ್ದೂ ಹಾಗೂ ಕಠಿಣತಮವಾದದ್ದೂ ಆಗಿತ್ತು.
ಅಂಬೇಡ್ಕರ್ ಅವರು ಪತ್ರಿಕೆಗಳನ್ನು ತಾವು ತಲುಪಬೇಕಾಗಿದ್ದವರನ್ನು ಮುಟ್ಟುವುದಕ್ಕಿಂತ ತಲುಪಬೇಕಾದವರ ಸ್ಥಿತಿಯತ್ತ ಇತರರ ಕಣ್ಣು ತೆರೆಸಲು ಬಳಸಿಕೊಂಡರು. ಮೂಕ ಜಗತ್ತಿನ ಸಂಕಷ್ಟಗಳಿಗೆ ಬಾಯಾಗಲು ಪತ್ರಿಕೆಗಳನ್ನು ಬಳಸಿಕೊಂಡರು. ೧೯೨೦ರ ಜನವರಿ ೩೧ರಂದು ಅಂಬೇಡ್ಕರ್ ‘ಮೂಕನಾಯಕ’ ವಾರಪತ್ರಿಕೆಯನ್ನು ಆರಂಭಿಸಿದರು. ತಮ್ಮ ಮೊದಲ ಸಂಪಾದಕೀಯದಲ್ಲಿ “ಬಹೆತೇಕ ಪತ್ರಿಕೆಗಳು ಕೆಲವೊಂದು ಜಾತಿಗಳ ಹಿತಾಸಕ್ತಿಯನ್ನು ಮೆರೆಸುತ್ತವೆ. ಅವು ಇತರೆ ಜಾತಿಗಳ ಹಿತಾಸಕ್ತಿಯನ್ನು ಕಡೆಗಣಿಸುತ್ತದೆ” ಎಂದು ಬರೆದರು.
“ಈಗಿನ ಪತ್ರಿಕೆಗಳ ಹಿತಾಸಕ್ತಿಯೇ ಬೇರೆ. ಈ ರಾಷ್ಟ್ರ ಅಸಮಾನತೆಯ ತವರೂರು. ಬ್ರಾಹ್ಮಣೇತರರು ಹಾಗೂ ತುಳಿತಕ್ಕೊಳಗಾದ ವರ್ಗಗಳು ಯಾವುದೇ ರೀತಿ ಮುಂದುವರೆಯಲು ಸಾಧ್ಯವಿಲ್ಲ. ಬಡತನ, ಅಸಹಾಯಕತೆ ತುಳಿತಕ್ಕೊಳಗಾದ ಸಮಾಜದಲ್ಲಿ ತುಂಬಿಹೋಗಿದೆ” ಎಂದು ಬರೆದರು.
ತುಳಿತಕ್ಕೊಳಗಾದ ವರ್ಗಗಳ ಜನತೆಯ ಸಮಸ್ಯೆಯನ್ನು ಚರ್ಚಿಸಲು ೧೯೨೪ರಲ್ಲಿ ಅಂಬೇಡ್ಕರ್ ಅವರು ಮುಂಬೈನಲ್ಲಿ ಸಭೆಯೊಂದನ್ನು ಕರೆದರು.
ಚರ್ಚೆ ನಂತರ ‘ಬಹಿಷ್ಕೃತ ಹಿತಕಾರಿಣಿ ಸಭಾ’ ರಚಿಸಲಾಯಿತು. ಅಂಬೇಡ್ಕರ್ ಈ ಸಭಾದ ಆಡಳಿತ ಸಮಿತಿಯ ಅಧ್ಯಕ್ಷರಾದರು. ೧೯೨೭ ಎಪ್ರಿಲ್ ೩ ರಂದು ‘ಬಹಿಷ್ಕೃತ ಭಾರತ’ ಪತ್ರಿಕೆಯನ್ನು ಆರಂಭಿಸಿದರು.
‘ಬಹಿಷ್ಕೃತ ಭಾರತ’ ಆಯುಧದಂತೆ ಕೆಲಸ ಮಾಡಿತು. ಅಂಬೇಡ್ಕರ್ ತಾವು ನಂಬಿದ್ದ ಧೋರಣೆಗಳತ್ತ ಜನರ ಗಮನ ಸೆಳೆಯುವುದೇ ಅಲ್ಲದೆ ಸರ್ಕಾರಕ್ಕೆ ಎಚ್ಚರಿಕೆಗಳನ್ನು ನೀಡಲು ಈ ಪತ್ರಿಕೆಯನ್ನು ಬಳಸಿದರು. ದೇವಸ್ಥಾನಗಳಿಗೆ ಪ್ರವೇಶ, ಸಾರ್ವಜನಿಕ ಬಾವಿಯಲ್ಲಿ ದಲಿತರು ನೀರು ತರುವಂತಾಗುವುದು, ಕೆಳವರ್ಗಕ್ಕೆ ಉನ್ನತ ಶಿಕ್ಷಣವನ್ನು ನೀಡುವುದು, ಬ್ರಾಹ್ಮಣರು ಮಾತ್ರವೇ ಶಿಕ್ಷಣದ ಗುತ್ತಿಗೆ ಹಿಡಿಯುವುದನ್ನು ತಪ್ಪಿಸಲು ‘ಬಹಿಷ್ಕೃತ ಭಾರತ’ ವೇದಿಕೆಯಾಯಿತು. ಪತ್ರಿಕೆಗಳ ಮೂಲಕ ಸಂಪಾದಕೀಯದಲ್ಲಿ ಎಚ್ಚರಿಕೆ ನೀಡುತ್ತಿದ್ದುದು ಮಾತ್ರವೇ ಅಲ್ಲದೆ ಸಕ್ರಿಯವಾಗಿ ಆ ಬಗ್ಗೆ ಚಳವಳಿ ಹಮ್ಮಿಕೊಳ್ಳುತ್ತಿದ್ದುದು ಅಂಬೇಡ್ಕರ್ ಅವರ ವಿಶೇಷ.
“ಸೇವಕನಿಗೆ ಆತ ಸೇವಕ ಎಂಬುದನ್ನು ಹೇಳು, ಆಗ ಆತ ದಂಗೆಯೇಳುತ್ತಾನೆ” ಎಂಬ ಘೋಷಣೆಯೊಂದಿಗೆ ಅಂಬೇಡ್ಕರ್ ೧೯೩೦ರಲ್ಲಿ ‘ಜನತಾ’ ಪತ್ರಿಕೆ ಆರಂಭಿಸಿದರು. ನಾಗಪುರದಲ್ಲಿ ನಡೆದ ತುಳಿತಕ್ಕೊಳಗಾದವರ ಸಮ್ಮೇಳನದಲ್ಲಿ ಈ ಪತ್ರಿಕೆಯ ರೂಪುರೇಷೆಗಳನ್ನು ನಿರ್ಧರಿಸಲಾಯಿತು.
ಬಂಡವಾಳಶಾಹಿಗಳು ಮತ್ತು ಬ್ರಾಹ್ಮಣರ ಕೈಗೆ ರಾಜಕೀಯ ಅಧಿಕಾರ ನೀಡಿದರೆ ಆ ವರ್ಗಗಳ ಪ್ರತಿಷ್ಠೆ ಹೆಚ್ಚುತ್ತದೆ. ಆದರೆ ಅದೇ ಅಸ್ಪೃಶ್ಯರ, ಹಿಂದುಳಿದ ವರ್ಗದ ಜನತೆಗೆ ಈ ಅಧಿಕಾರ ನೀಡಿದರೆ ಇಡೀ ದೇಶದ ಪ್ರತಿಷ್ಠೆ ಹೆಚ್ಚುತ್ತದೆ ಎಂದು ಅವರು ‘ಜನತಾ’ದಲ್ಲಿ ಬರೆದರು.
ಜನತಾ ಪತ್ರಿಕೆ ಕೆಲವು ಕಾಲ ಸ್ಥಗಿತವಾಯಿತು. ೧೯೪೩ರಲ್ಲಿ ಮತ್ತೆ ಇದಕ್ಕೆ ಜೀವ ನೀಡುವ ಪ್ರಯತ್ನ ನಡೆಯಿತು. ನಂತರ ಜನತಾಗೆ ‘ಪ್ರಬುದ್ಧ ಭಾರತ’ ಎಂದು ಮರುನಾಮಕರಣ ಮಾಡಲಾಯಿತು. “ತ್ಯಾಗದಲ್ಲಿ ಮಾತ್ರವೇ ತುಳಿತಕ್ಕೊಳಗಾದ ಜನಾಂಗಕ್ಕೆ ಭವ್ಯ ಭವಿಷ್ಯವಿದೆ. ನಮ್ಮ ಗುರಿ ಆಡಳಿತ ನಡೆಸುವುದು. ಹುಲಿಗಳಂತಿರಿ, ಹೋರಾಟ ಮತ್ತೂ ಹೋರಾಟ ನಡೆಸಿ” ಎಂದು ಅವರು ಪ್ರಬುದ್ಧ ಭಾರತದಲ್ಲಿ ಕರೆ ನೀಡಿ ಯುವಕರನ್ನು ಹುರಿದುಂಬಿಸಿದರು.
ಅಂಬೇಡ್ಕರ್ ‘ಸಮತಾ’ ಆರಂಭಿಸಿ ಅಲ್ಲಿಯೂ ಸಾಕಷ್ಟು ಲೇಖನಗಳನ್ನು ಬರೆದರು.
ಅಂಬೇಡ್ಕರ್‌ರವರು ಎಷ್ಟು ಮೃದುವಾಗಿದ್ದರೋ ಅವರ ಭಾಷೆ ಅಷ್ಟೇ ಹರಿತವಾಗಿತ್ತು. ಲೇಖನಿಯನ್ನು ಅವರು ಖಡ್ಗವಾಗಿ ಬಳಸಿದರು. ತಾವು ನಂಬಿದ ಸಿದ್ಧಾಂತದ ಮುನ್ನಡೆಗಾಗಿ ಅಸಮಾನತೆಯ ವಿರುದ್ಧ ಲೇಖನಿ ಪ್ರಹಾರ ನಡೆಸಿದರು. ಅಂಬೇಡ್ಕರ್‌ರವರ ಮೊದಲ ಪತ್ರಿಕೆಯ ಭಾಷೆಗೂ ನಂತರದ ಪತ್ರಿಕೆಗಳ ಭಾಷೆಗೂ ಮಹತ್ತರ ಬದಲಾವಣೆಯಿದೆ. ಆರಂಭದಲ್ಲಿ ವಾಸ್ತವ ಮಾತ್ರ ಮಂಡಿಸುವುದು ಅಂಬೇಡ್ಕರ್ ಉದ್ದೇಶವಾಗಿತ್ತು. ಆದರೆ ಕ್ರಮೇಣ ದಲಿತ ಚಳವಳಿ ಹರಳುಗಟ್ಟುತ್ತಾ ಹೋದಂತೆ ಪತ್ರಿಕೆ ಅದರ ನಾಡಿ ಮಿಡಿತವಾಯಿತು. ಸಂಘಟನೆಯತ್ತ ಹೆಚ್ಚು ಜನರನ್ನು ಆಕರ್ಷಿಸಲು, ಅವರನ್ನು ಹುರಿದುಂಬಿಸಲು, ಸರಿಯಾದ ಮಾರ್ಗದಲ್ಲಿ ಮುನ್ನಡೆಸಲು ಅಂಬೇಡ್ಕರ್ ಪತ್ರಿಕೆಯನ್ನು ಒಂದು ಸಾಧನವಾಗಿ ಬಳಸಿದರು. ಭಾಷೆಯಲ್ಲಿ ಬದಲಾವಣೆ ಮಾಡಿದರು. ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಹರಿಯಲು ಆರಂಭಿಸಿದAತೆ ಅಂಬೇಡ್ಕರ್ ಲೇಖನಿ ಹೊಸ ಆಕಾರ ಪಡೆಯಿತು.
ಅಂಬೇಡ್ಕರ್ ಎಂದೂ ರಾಜಿ ಮನೋಭಾವದವರಾಗಿರಲಿಲ್ಲ. ಕಂಡದ್ದು ಕಂಡ ಹಾಗೆ ಹೇಳುವುದು ಅವರು ಮೈಗೂಡಿಸಿಕೊಂಡ ಗುಣ. ತಮ್ಮ ಸಮಕಾಲೀನ ನಾಯಕರು ಎಷ್ಟೇ ಆತ್ಮೀಯರಾಗಿದ್ದರೂ ಅವರ ದುರ್ಗುಣಗಳತ್ತ ತಮ್ಮ ಪತ್ರಿಕೆಯ ಮೂಲಕ ಬೊಟ್ಟು ಮಾಡದೆ ಬಿಡುತ್ತಿರಲಿಲ್ಲ.
ಲೋಕಮಾನ್ಯ ತಿಲಕ್‌ರವರ ಪತ್ರಿಕೆ `ಕೇಸರಿ’ ಅಂಬೇಡ್ಕರ್‌ರವರು ಆರಂಭಿಸಿದ ದಲಿತರ ಪತ್ರಿಕೆಯ ಬಗ್ಗೆ ಜಾಹಿರಾತು ಪ್ರಕಟಿಸಲು ನಿರಾಕರಿಸಿತು. ಜಾಹಿರಾತು ಹಣ ನೀಡಿದರೂ ಜಾಹಿರಾತನ್ನು ಪ್ರಕಟಿಸದ ಪತ್ರಿಕೆಯನ್ನು ಅಂಬೇಡ್ಕರ್ ತರಾಟೆಗೆ ತೆಗೆದುಕೊಂಡರು. ಪತ್ರಿಕೆಯ ನೀತಿ ನಿಯಮ ಧೋರಣೆಗಳನ್ನು ಒರೆಗೆ ಹಚ್ಚಿದರು.
ಅಂಬೇಡ್ಕರ್ ಚಳವಳಿಗಳ ಆಳದಲ್ಲಿದ್ದುದು ಅವರ ಪತ್ರಿಕೆಗೆ ಹೊಸ ಮುನ್ನೋಟಗಳನ್ನು ಒದಗಿಸಿತು. ಚಳವಳಿಯ ಗಟ್ಟಿತನ ಪತ್ರಿಕೆಯನ್ನು ಬೆಳೆಸಿತು. ಅಂಬೇಡ್ಕರ್ ಅವರು ದಶಕಗಳ ಕಾಲ ಪತ್ರಿಕೆಯ ಒಡನಾಟದಲ್ಲಿದ್ದದ್ದು ಅವರಿಗೆ ಮಾಗಿದ ಅನುಭವಗಳನ್ನು ನೀಡಿತು. ವಿಶ್ವದ ಪತ್ರಿಕೋದ್ಯಮ, ಭಾರತದ ಪತ್ರಿಕೋದ್ಯಮ, ಭಾಷಾ ಪತ್ರಿಕೋದ್ಯಮದತ್ತ ಸೀಳು ನೋಟ ಹರಿಸಲು ಸಹಾಯ ಮಾಡಿತು.
ಈ ಹಿನ್ನೆಲೆಯಲ್ಲಿಯೇ ಅಂಬೇಡ್ಕರ್ “ಲಾರ್ಡ್ ಸಾಲಿಸ್‌ಬರಿ ತಮ್ಮ ಪತ್ರಿಕೋದ್ಯಮವನ್ನು ಕಚೇರಿ ಕಾರಕೂನರು ಕಚೇರಿ ಕಾರಕೂನರಿಗೆ ಬರೆದ ಪತ್ರಿಕೋದ್ಯಮ ಎಂದು ವರ್ಣಿಸಿದರು. ಭಾರತೀಯ ಪತ್ರಿಕೋದ್ಯಮ ಇದಕ್ಕಿಂತ ಒಂದು ಕೈ ಹೆಚ್ಚಿನದು. ಇದು ತಮ್ಮ ನಾಯಕರನ್ನು ಹೊಗಳಲು ಹೊಗಳು ಭಟ್ಟರು ಬರೆದದ್ದು” ಎಂದು ಟೀಕಿಸಿದರು.
“ಪತ್ರಿಕೆಯನ್ನು ಕೈಯಲ್ಲಿಟ್ಟುಕೊಂಡು ಮಹಾನ್ ನಾಯಕರನ್ನು ಉತ್ಪಾದಿಸುವುದು ಅತ್ಯಂತ ಸುಲಭದ ಕೆಲಸ” “ವ್ಯಕ್ತಿ ಆರಾಧನೆ ಭಾರತದಲ್ಲಿ ಇಂದು ಕಾಣಿಸುವಷ್ಟು ಕುರುಡಾಗಿ ಇನ್ನೆಂದೂ ಇರಲಿಲ್ಲ” “ಚರಿತ್ರೆಯಲ್ಲಿ ನಾಯಕರು ಎಂದರೆ, ಕಾಲ್ಮೇಲ್ ಎಂಬಾತ ವರ್ಣಿಸಿದಂತೆ ಹಲವು ನೋಟುಗಳು” ಇಂತಹ ಅಗ್ರಗಣ್ಯ ನಾಯಕರು ಕಂಡಾಗ ಇಲ್ಲಿ ಅಗ್ರಗಣ್ಯ ನಾಯಕರಿದ್ದಾರೆ ಎಚ್ಚರಿಕೆ ಎಂಬ ಫಲಕ ತೂಗುಹಾಕಬೇಕು” ಎಂದು ಅವರು ವರ್ಣಿಸಿದರು.
ಕಾಲನ ತೆರೆ ಸರಿದ ಈ ದಿನಗಳಲ್ಲೂ ಅಂಬೇಡ್ಕರ್ ಮಾತು ಎಷ್ಟು ಪ್ರಸ್ತುತ!. ಅಂಬೇಡ್ಕರ್ ಬದುಕಿನಲ್ಲಿ ಆರ್ಥಿಕತೆಯ ಪ್ರಾಮುಖ್ಯವನ್ನು ಅರಿತಿದ್ದರು. ಸಮಾಜದ ಬದಲಾವಣೆ ಆರ್ಥಿಕ ಸಮಾನತೆಯ ಆಧಾರದಲ್ಲಿದೆ ಎಂಬುದೇ ನಾಯಕರನ್ನು ಅವರು ಹಲವು ನೋಟುಗಳಂತೆ ಕಾಣುವಂತೆ ಮಾಡಿತ್ತು.
ಹೀಗೆಯೇ ಅವರು ಪತ್ರಿಕೋದ್ಯಮದಲ್ಲಿ ಆರ್ಥಿಕವಾಗಿ ಬಲಿಷ್ಠರಾದವರು ಕೈಗಳು ಆಡಲು ಆರಂಭಿಸುತ್ತಿದ್ದAತೇ ಅದರ ಪರಿಣಾಮ ಏನಾಗುತ್ತದೆ ಎಂಬುದನ್ನೂ ಅರಿತಿದ್ದರು. ಗುತ್ತೇದಾರಿ ಬಂಡವಾಳ ಹುಟ್ಟು ಹಾಕುವ ಪತ್ರಿಕಾ ಸರಣಿ ಹೇಗೆ ಕಿರುಪತ್ರಿಕೆಗಳನ್ನು, ಭಾಷಾಪತ್ರಿಕೆಗಳನ್ನು ನಿಧಾನವಾಗಿ ಮುಗಿಸುತ್ತದೆ. ಆ ಹಿನ್ನೆಲೆಯಲ್ಲಿ ತುಳಿತಕ್ಕೊಳಗಾದ ಜನಾಂಗಗಳ ಹೋರಾಟದ ದನಿ ಎಷ್ಟು ಕ್ಷೀಣವಾಗುತ್ತಾ ಬರುತ್ತದೆ ಎಂಬುದನ್ನು ಅರಿತಿದ್ದರು.
“ಭಾರತೀಯ ಪತ್ರಿಕೋದ್ಯಮದ ಇಂದಿನ ಚಿತ್ರ ಈ ಮಾತನ್ನು ಸಾಬೀತುಗೊಳಿಸಿದೆ. ಒಂದೊಂದೇ ಪತ್ರಿಕೆಗಳು ಸೆಣಸಲಾರದೆ ಸೋಲುತ್ತಿದ್ದಂತೆ ಅದನ್ನು ಕೊಳ್ಳಲು ಭಾರತದ ಮಹಾನ್ ಬಂಡವಾಳಗಾರರು ಮುಗಿಬೀಳುತ್ತಿದ್ದಾರೆ. ಇಂದಿನ ಭಾರತದಲ್ಲಿ ಕೆಲವು ಬೆರಳೆಣಿಕೆಯ ಪತ್ರಿಕೆಗಳನ್ನು ಬಿಟ್ಟರೆ ಇನ್ನುಳಿದ ಎಲ್ಲವೂ ಬಂಡವಾಳಗಾರರ ಮಡಿಲಲ್ಲಿ. ಈ ಬಂಡವಾಳಗಾರರು ಇಂದು ಜನಾಭಿಪ್ರಾಯ ರೂಪಿಸುವ ರೂವಾರಿಗಳೂ ಹೌದು. ಇವರ ತಾಳಕ್ಕೆ ತಕ್ಕಂತೆ ಹೆಜ್ಜೆಹಾಕಲು ಕಲಿಸುವುದು ಈ ಪತ್ರಿಕೆಗಳ, ಮಾಲೀಕರ ಉದ್ದೇಶ”.
“ಭಾರತದಲ್ಲಿ ಪತ್ರಿಕೋದ್ಯಮ ಹಿಂದೆ ವೃತ್ತಿಯಾಗಿತ್ತು. ಆದರೆ ಇಂದು ಅದು ವ್ಯಾಪಾರವಾಗಿದೆ” ಎಂದು ಅಂಬೇಡ್ಕರ್ ವಿಷಾದದಿಂದ ನುಡಿದಿದ್ದರು. “ಭಾರತದ ಪತ್ರಿಕೆಗಳು ತಮ್ಮನ್ನು ಜನತೆಯ ಹೊಣೆಗಾರಿಕೆಯ ಸಲಹೆಗಾರರಾಗಿ ಭಾವಿಸಿಲ್ಲ” ಎಂದರು. ಅಂದು ಅಂತೆಯೇ ಆ ಮುಂದೂ ಆ ಲಕ್ಷಣಗಳು ಪತ್ರಿಕೋದ್ಯಮದಲ್ಲಿ ಸ್ಥಾಯಿಯಾಗಿ ಉಳಿದುಕೊಂಡೇ ಬಂದಿವೆ.
ಮೀಸಲಾತಿ ವಿಚಾರದಲ್ಲಿ ಭಾರತದ ಗಣ್ಯ ಪತ್ರಿಕೆಗಳು ನಡೆದುಕೊಂಡ ರೀತಿಯನ್ನು ಗಮನಿಸಿದರೆ ಸಾಕು ಈ ಅಂಶ ಹೊರಬೀಳುತ್ತದೆ. ಮೇಲ್ವರ್ಗದ ಕೆಲವೇ ಕೆಲವು ವಿದ್ಯಾವಂತರ ಕೈಯಲ್ಲಿ ಸಿಕ್ಕಿರುವ ಪತ್ರಿಕೆಗಳು ಜನತೆಯ ಅಭಿಪ್ರಾಯವನ್ನೇ ಬದಲು ಮಾಡುವ ಹಾದಿಗೆ ಇಳಿದವು. ಹಲವು ತುಳಿತಕ್ಕೊಳಗಾದ ಜೀವಗಳ ಬದುಕಿಗೆ ಭದ್ರತೆ ತರುವ ಮಂಡಲ್ ಆಯೋಗದ ವರದಿಯ ಜಾರಿ ಒಂದು ಜನಪರ ಸರ್ಕಾರದ ಭದ್ರತೆಗೇ ಆತಂಕವೊಡ್ಡುವ ರೀತಿಯಲ್ಲಿ ಪತ್ರಿಕೆಗಳು ನಡೆದುಕೊಂಡವು. ಅಕ್ಷರಗಳ ಬೆಳಕು ಸೃಷ್ಟಿಮಾಡುವ ಲೋಕ, ಉಂಟುಮಾಡುವ ಬದಲಾವಣೆಯನ್ನು ಅರಿತಿರುವುದರಿಂದಲೇ ಈ ವರ್ಗ ಸದಾ ಇತರರನ್ನು ಅಕ್ಷರದಿಂದ ವಂಚಿಸುವುದರಿAದಲೇ ದೊಡ್ಡವರಾಗುತ್ತವೆ.
“ಯಾವುದೇ ಉದ್ದೇಶಗಳಿಂದಲೂ ಬಣ್ಣ ಲೇಪಿಸಿಕೊಳ್ಳದ ಸುದ್ದಿಯನ್ನು ನೀಡುವುದು, ಸಮುದಾಯಕ್ಕೆ ಒಳಿತನ್ನುಂಟುಮಾಡುವ ದೃಷ್ಟಿಕೋನವನ್ನು ನೀಡುವುದು, ಎಷ್ಟೇ ದೊಡ್ಡದಾದರೂ ತಪ್ಪುದಾರಿಗಿಳಿದಿದ್ದನ್ನು ನಿರ್ಭಯವಾಗಿ ತಿದ್ದುವುದು ತನ್ನ ಪ್ರಥಮ ಕರ್ತವ್ಯ ಎಂದು ಭಾರತ ಪತ್ರಿಕೋದ್ಯಮ ಭಾವಿಸಿಲ್ಲ” ಎಂಬುದು ಅಂಬೇಡ್ಕರ್‌ರವರ ಕೊರಗಾಗಿತ್ತು.
ದಶಕಗಳ ಅಂಕದ ಪರದೆ ಸರಿದಾದ ಮೇಲೂ ಕಾಣಸಿಗುವ ಚಿತ್ರ ಭಾರತೀಯ ಪತ್ರಿಕೋದ್ಯಮದ ಸ್ಪಷ್ಟ ಆಕಾರ ವಿಕಾರಗಳನ್ನು ಪರಿಚಯಿಸುತ್ತದೆ. ದೇಶದ ಮನಸ್ಸು ಒಡೆದ ಸಂದರ್ಭದಲ್ಲಿ ಪತ್ರಿಕೆಗಳು ಸುರಿವ ಎಣ್ಣೆ ಪತ್ರಿಕೋದ್ಯಮದ ಇತಿಹಾಸಕ್ಕೆ ಕಪ್ಪು ಮೆತ್ತುತ್ತವೆ. ಪತ್ರಿಕೋದ್ಯಮದ ಸ್ಥಿತಿ ಬದಲಾಗಬೇಕಾದರೆ ಅಂಬೇಡ್ಕರ್ ಬಯಸಿದಂತೆ ಅಲ್ಲಿ ಹೊಸ ಉಸಿರಾಟ ಕೇಳಬೇಕು. ಅಕ್ಷರ ಕಾಣದ ಜಗತ್ತಿನಲ್ಲಿ ನಲುಗಿದ ಜೀವಗಳು ಅಕ್ಷರವೇ ಲೋಕವಾದ ಈ ಜಗತ್ತನ್ನು ಪ್ರವೇಶಿಸಬೇಕು. ಅಕ್ಷರಗಳೊಳಗೆ ಮಾನವೀಯತೆಯ ಸೆಲೆ ಚಿಮ್ಮಿ ಹರಿಯುವಂತಾಗಬೇಕು.
-ಜಿ ಎನ್ ಮೋಹನ್