ಕಾಯಿಲೆ ಮತ್ತು ವೈದ್ಯಲೋಕ
ಹಣಕ್ಕಾಗಿ ಆರೋಗ್ಯ ತ್ಯಾಗ ಮಾಡಿದರೆ, ಅನಾರೋಗ್ಯದಿಂದ ಹಾಸಿಗೆ ಹಿಡಿದಾಗ ಅದೇ ಹಣ ಖರ್ಚು ಮಾಡಿದರೂ ಆರೋಗ್ಯ ವಾಪಸ್ ಬರಲಾರದು ಅಂತ ಮಾತೊಂದಿದೆ..
ಒಮ್ಮೆ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ಹೋದರೆ ಇರೋ ಬರೋ ಎಲ್ಲ ಪರೀಕ್ಷೆಗಳನ್ನು ( ರಕ್ತ, ಮೂತ್ರ, ಎಕ್ಸರೇ, ಇಸಿಜಿ, ಅಲ್ಟರಾಸೌಂಡ್, ಎಂ ಆರ್ ಐ ಇತ್ಯಾದಿ ಇತ್ಯಾದಿ ) ಮಾಡಿಸುವ ಅನಿವಾರ್ಯತೆ ನಿರ್ಮಾಣವಾಗಿಬಿಡುತ್ತದೆ. ಸಂಕಟದ ಸಂಗತಿ ಎಂದರೆ ಬಹುತೇಕ ಪರೀಕ್ಷೆಗಳ ವರದಿಗಳು ನಾರ್ಮಲ್ ಆಗಿರುತ್ತವೆ, ಆದರೆ ಸಾವಿರಾರು ರೂಪಾಯಿ ಖರ್ಚಾಗುವುದು ಸತ್ಯ.
ಇನ್ನೂ ಆಯುರ್ವೇದಿಕ್, ಹೋಮಿಯೋಪಥಿ, ಆ ಥೆರಪಿ ಈ ಥೆರಪಿ ಅಂತ ಆನ್ ಲೈನ್ ಗಳಲ್ಲಿ ಬರುವ ಸುದ್ದಿಗಳು ಮತ್ತಷ್ಟು ಗೊಂದಲದ ವಾತವಾರಣ ಸೃಷ್ಟಿಗೆ ಕಾರಣವಾಗುತ್ತವೆ. ಅತ್ತ ಅಲೋಪಥಿಯೂ, ಇತ್ತ ಹೋಮಿಯೋಪಥಿ, ಆಯುರ್ವೇದವೂ ಅಂತ ಮತ್ತಷ್ಟು ಖರ್ಚಾದರೂ ಕೂಡಾ ಖಾಯಿಲೆ ಅರ್ಧದಷ್ಟು ಕಡಿಮೆ ಆಗಿರಲ್ಲ.
ವೈದ್ಯರು ಆತ್ಮೀಯರು, ಸ್ನೇಹಿತರು, ಹಾಗೂ ಸಂಬಂಧಿಗಳಾಗಿದ್ದರೇ ಖರ್ಚು ಕಡಿಮೆ ಆಗಬಹುದು. ಅಥವಾ ಅನಾವಶ್ಯಕ ಪರೀಕ್ಷೆಗಳನ್ನು ಮಾಡಿಸದೆ ಇರಬಹುದು ಅದು ಅಲ್ಲಿಗೆ ಒಂಚೂರು ನಿರಾಳ. ಆದರೆ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಹೋದರೆ ಹಣ ನೀರಿನಂತೆ ಖರ್ಚಾಗುವುದನ್ನು ಸ್ವತಃ ವೈದ್ಯರು ಸಂಬಂಧಿಗಳಾಗಿದ್ದರು ತಪ್ಪಿಸಲಾಗುವುದಿಲ್ಲ..
ಈ ಮಧ್ಯೆ ಯೂಟ್ಯೂಬ್ ಗಳಲ್ಲಿ ಆರೋಗ್ಯದ ಬಗ್ಗೆ ಬರುವ ಯಾವ ವಿಡಿಯೋ ನೋಡಿದರೂ ಅದು ತಮಗೆ ಸಂಬಂಧಸಿರಬಹುದಾ ಅನ್ನುವ ಭ್ರಮೆ ಆವರಿಸುತ್ತದೆ.. ಅಂತ ವಿಡಿಯೋಗಳಲ್ಲಿ ಬರುವ ಮಾಹಿತಿಗಳ ಖಚಿತತೆ ಕಷ್ಟ!
ವಾಕಿಂಗ್ ವಿಚಾರದಲ್ಲಿ ವೈರುಧ್ಯಗಳಿವೆ. ಕೆಲವರು ಮನುಷ್ಯರಿಗೆ ವಾಕಿಂಗ್ ಅಗತ್ಯವಿಲ್ಲ ಅಂದರೆ ಮತ್ತೆ ಕೆಲವರು ಅರ್ಧಗಂಟೆ ಸಾಕು ಅಂತಾರೆ, ಇನ್ನೂ ಕೆಲವರು ಪ್ರತಿದಿನ ಹತ್ತು ಸಾವಿರ ಹೆಜ್ಜೆ ಹಾಕಬೇಕು, ಆದರೆ ರಾತ್ರಿ ವಾಕಿಂಗ್ ಅವಶ್ಯಕತೆ ಇಲ್ಲ ಊಟವೇ ಹೃದಯಕ್ಕೆ ಭಾರ ಎನಿಸುತ್ತದೆ ಅಂತರದಲ್ಲಿ ವಾಕಿಂಗ್ ನಿಂದ ಮತ್ತಷ್ಟು ಭಾರ ಮಾಡುವುದು ಬೇಡ ಅಂತಾರೆ.
ಆದರೆ, ಮಾನಸಿಕ ಆರೋಗ್ಯದ ಸದೃಢತೆ ದೈಹಿಕ ಆರೋಗ್ಯಕ್ಕೂ ಸಂಬಂಧಿಸಿದೆ. ನಮ್ಮ ಹಿಂದಿನ ಕಾಲದವರು, ದೈಹಿಕವಾಗಿ ಮಾಡಬಹುದಾದ ಕೆಲವನ್ನು ಮಾಡಿ ಸರಿಯಾಗಿ ಊಟ ಮಾಡಿ ಚೆಂದದ ನಿದ್ದೆ ಮಾಡುತ್ತಿದ್ದರು. ಇದರಿಂದ ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸದೃಢವಾಗಿರುತ್ತಿತ್ತು.
ಈಗ ಓಡುತ್ತಿರುವ ದುನಿಯಾದೊಂದಿಗೆ ಓಡಲೇಬೇಕು ಎನ್ನುವ ಅನಿವಾರ್ಯತೆ ನಿರ್ಮಾಣಗೊಂಡು ಮಾನಸಿಕ ಹಾಗೂ ದೈಹಿಕ ಆರೋಗ್ಯ ಹಾನಿಗೊಳಗಾಗುತ್ತಿವೆ.
ಏನೇ ಹೇಳಿದರೂ ಕೂಡಾ ” ಆರೋಗ್ಯವೇ ಭಾಗ್ಯ ” ಎನ್ನುವ ಮಾತು ಅಕ್ಷರಶಃ ಸತ್ಯ..
ರವಿಕುಮಾರ ನರಬೋಳಿ