ಮಾನವೀಯತೆ

ಮನುಷ್ಯತ್ವ ಇನ್ನೂ ಸತ್ತಿಲ್ಲ

Spread the love

ಅಂದು ಬಳ್ಳಾರಿಯ ಮಧ್ಯಾಹ್ನ 2 ರ ಬಿರು ಬಿಸಿಲು. ಬೆನ್ನು ನೋವಿನ ಚಿಕಿತ್ಸೆಗೆ ವೈದ್ಯರನ್ನು ಭೇಟಿ ಮಾಡಿದ್ದೆ.

ಬ್ಲಡ್ ಟೆಸ್ಟ್ ರಿಪೋರ್ಟ್ ಸಂಜೆ 5.30 ಗೆ ಬರುತ್ತದೆ ಆಗ ಬನ್ನಿ ಅಂದ್ರು. ಸರಿ ಸಿಟಿನಲ್ಲಿ ಎಲ್ಲಾದರೂ ತಂಪಾಗಿರುವ ಜಾಗದಲ್ಲಿ ಸ್ವಲ್ಪ ಸುಧಾರಿಸಿಕೊಂಡು‌ ಬರೋಣ ಅಂತ ಆಸ್ಪತ್ರೆಯಿಂದ ಹೊರಗೆ ಬಂದೆ.

ಕಾರ್ ಕೀ ಹಾಕ್ತೀನಿ ಸ್ಟಾರ್ಟ್ ಆಗ್ತಿಲ್ಲ.. ಒಂದು ನಿಮಿಷ ಕಾರ್ ಒಳಗೆ ಕೂಡಲು ಆಗುತ್ತಿಲ್ಲ ಅಷ್ಟೊಂದು ಬಿಸಿಲು, ಸೆಖೆ.. ನಾನು ಕಾರ್ ಸ್ಟಾರ್ಟ್ ಮಾಡುವ ಪ್ರಯತ್ನದಲ್ಲಿದ್ದರೆ ನನ್ನ ಶ್ರೀಮತಿ ತಲೆಯ ಮೇಲೆ ದುಪ್ಪಟ್ಟ ಹಾಕಿಕೊಂಡು ಗಾಬರಿಗೊಂಡು ನೋಡುತ್ತಾ ನಿಂತಿದ್ದಾರೆ.

ನನಗೆ ಕಾರ್ ನಲ್ಲಿ ಏನಾದರೂ ಸಮಸ್ಯೆ ಆದರೆ ಒಂಚೂರು ಗೊತ್ತಿಲ್ಲ. ಏನು ಮಾಡುವುದು ಅಂತ ಚಿಂತೆಯಾಯ್ತು.

ಇದು ಯಾಕೋ ಸರಿ ಹೋಗಲ್ಲ ಅಂತ ಷೋ ರೂಮ್ ನವರಿಗೆ ಕಾಲ್ ಮಾಡಿ ವಿಷಯ ತಿಳಿಸಿದೆ. ನೀವು ಮರೆತು ಪಾರ್ಕಿಂಗ್ ಲೈಟ್ ಹಾಕಿರ್ತಿರಿ ಬ್ಯಾಟರಿ ಡೌನ್ ಆಗಿರ್ತದೆ ಮೆಕಾನಿಕ್ ಗೆ ತೋರಿಸಿ ಅಂದರು..

ಗೊತ್ತಿಲ್ಲದ ಊರಲ್ಲಿ ಮೆಕಾನಿಕ್‌ನ ಎಲ್ಲಿ ಹುಡುಕೋದು.. ಮತ್ತೆ ರಸ್ತೆ ಪಕ್ಕ ಬಂದು ನಿಂತು ನನ್ನ ಶ್ರೀಮತಿಯನ್ನು ಆಸ್ಪತ್ರೆ ಒಳಗೆ ಕೂಡಲು ಸೂಚಿಸಿದೆ.. ಥತ್, ಇದೇನು ಬಂತಪ್ಪ ಅಂತ ಯೋಚಿಸುತ್ತಿದ್ದೆ ಸ್ವಲ್ಪ ದೂರದಲ್ಲಿ ಗೂಡ್ಸ್ ಆಟೋ ಬಂತು. ಕೈ ಮಾಡಿದೆ, ಪಾಪ ಡ್ರೈವರ್ ನಿಲ್ಲಿಸಿದರು.

ನಾನು ವಿಷಯ ಎಲ್ಲ ಹೇಳಿ,’ ಅಣ್ಣಾ ಇಲ್ಲಿ ಎಲ್ಲಾದರೂ ಮೆಕಾನಿಕ್ ಇದ್ದರೆ ಅಲ್ಲಿವರೆಗೆ ನನಗೆ ಡ್ರಾಪ್ ಮಾಡಿ’ ಅಂತ ಮನವಿ ಮಾಡಿದೆ.

‘ಬನ್ನಿ ಸರ್, ನನಗೆ ಗೊತ್ತಿರೋ ಮೆಕಾನಿಕ್ ಇದಾರೆ’ ಅಂತ ಅಲ್ಲಿಂದ ಎರಡು ಕಿಮಿ ದೂರದ ಗಾರೇಜ್ ಗೆ ಕರೆದುಕೊಂಡು‌ ಹೋದರು.

‘ಇವರು ನಮ್ಮ ಪರಿಚಯದವರು, ಕಾರ್ ಸ್ಟಾರ್ಟ್ ಆಗ್ತಿಲ್ಲ ರಿಪೇರಿ ಮಾಡಿಕೊಡು ಬಾ’ ಅಂತ ಮೆಕಾನಿಕ್ ಗೆ ಹೇಳಿದರು.

ನಾನು, ‘ ಅಣ್ಣಾ ತುಂಬಾ ಧನ್ಯವಾದ ನೀವು ಹೋಗಿ, ನಾನು ಅವರನ್ನ‌ ಕರ್ಕೊಂಡು ಹೋಗಿ ರಿಪೇರಿ ಮಾಡಿಸುತ್ತೇನೆ ‘ ಅಂದೆ.

ಇಲ್ಲ ಸಾರ್, ನಿಮ್ಮನ್ನ ಆ ಕಡೆ ಕಳಿಸಿ ನಾನು ಹೋಗ್ತೀನಿ ಅಂದರು..

ಹತ್ತು ನಿಮಿಷ ಆಗಿತ್ತು. ಮೆಕಾನಿಕ್ ಫ್ರೀ ಆದ ಮೇಲೆ ನಿಮ್ಮ ಗೂಡ್ಸ್ ಆಟೋದಲ್ಲೆ ಹೋಗೋಣ ಅಂತ ಡ್ರೈವರ್ ಗೆ ಹೇಳಿದ..

ನಾನು ‘ ಬೇಡ ಅಣ್ಣ ಅವರು ಬೇರೆ ಕಡೆ ಹೋಗೋರಿದಾರೆ ಅಂದೆ. ಆಗ ಮಧ್ಯೆ ಪ್ರವೇಶ ಮಾಡಿದ ಡ್ರೈವರ್ ಪರವಾಗಿಲ್ಲ ಬನ್ನಿ ಸರ್ ಹೋಗೊಣ ‘ ಅಂತ ಅವರ ಗೂಡ್ಸ್ ನಲ್ಲೇ ನಮ್ಮನ್ನೆಲ್ಲ ಕರ್ಕೊಂಡು ಮತ್ತೆ ಆಸ್ಪತ್ರೆ ಬಳಿಗೆ ಬಂದರು..

ಮೆಕಾನಿಕ್ ಗೂಡ್ಸ್ ಗಾಡಿಯ ಬ್ಯಾಟರಿ ಬಿಚ್ಚಿ ನನ್ನ ಕಾರಿನ ಬ್ಯಾಟರಿ ಗೆ ಶಾಕ್ ಕೊಟ್ಟು ಸ್ಟಾರ್ಟ್ ಮಾಡಿಸಿದರು..

ಐದು ನಿಮಿಷ ಆಕ್ಸಿಲರೇಟರ್ ಕೊಟ್ಟು ಮತ್ತೆ ಮಾಮೂಲಿನ ಸ್ಥಿತಿಗೆ ತಂದು ಕೊಟ್ಟರು.

ಆಗ ಡ್ರೈವರ್ ಅವರು ‘ ಸರ್, ನೀವು ಬಳ್ಳಾರಿಗೆ ಹೊಸಬರು ಅಂತೀರಿ ದೇವಿ ಜಾತ್ರೆ ಮೊನ್ನೆ ಮುಗಿದಿದೆ ದೇವಸ್ಥಾನ ಚೆನ್ನಾಗಿದೆ ನೋಡಿಕೊಂಡು ಹೋಗಿ.. ಮತ್ತೆ ನಿಮಗೇನಾದರೂ ತೊಂದರೆ ಆದರೆ ನನ್ನ ಮೊಬೈಲ್ ಗೆ ಕಾಲ್ ಮಾಡಿ ಮೆಕಾನಿಕ್ ನ ಕರ್ಕೊಂಡು ಬಂದು ರಿಪೇರಿ ಮಾಡಿಸಿಕೊಟ್ಟು ಹೋಗ್ತೀನಿ ಅಂತ ಅಂತ ಗೂಡ್ಸ್ ಆಟೋದಲ್ಲಿ ಕೈ ಬೀಸುತ್ತಾ ಹೋದರು..

ನನಗೆ ಅಚ್ಚರಿ ಜೊತೆಗೆ ಖುಷಿ ಬೇರೆ.. ಎಂತ ಜನ ಇದ್ದಾರೆ.. ಬಹುತೇಕರು ಸಹಾಯ ಮಾಡಲು ಹಿಂದೆ ಮುಂದೆ ನೋಡುತ್ತಾರೆ. ಆದರೆ ಇವರು ತಮ್ಮ ಆಟೋದಲ್ಲೆ ನನ್ನನ್ನ ಗಾರೇಜ್ ಗೆ ಕರ್ಕೊಂಡು ಹೋಗಿ, ಮತ್ತೆ ಮೆಕಾನಿಕ್ ಜತೆ ಕಾರ್ ಇದ್ದಲ್ಲಿಗೆ ಬಂದು ತನ್ನ ಆಟೋದ ಬ್ಯಾಟರಿ ತೆಗೆದು ನಮ್ಮ ಕಾರ್ ರಿಪೇರಿ ಮಾಡಿಸಿಕೊಟ್ಟು ಹೋದರು.. ಅಬ್ಬಾ.. ಗ್ರೇಟ್.

ನಾನು ಅವರಿಗೆ ಧನ್ಯವಾದ ತಿಳಿಸಿದೆ.. ಕಲಬುರಗಿ ಕಡೆ ಬಂದರೆ ಕಾಲ್ ಮಾಡಿ ಅಂದೆ..

ಸಂಜೆ ಆರುವರೆಗೆ ಬ್ಲಡ್ ಟೆಸ್ಟ್ ವರದಿ ಬಂತು.. ಅದೆ ಸಮಯಕ್ಕೆ ಡ್ರೈವರ್ ಅಣ್ಣ ಕಾಲ್ ಮಾಡಿ.. ” ಇನ್ನೂ ಆಸ್ಪತ್ರೆ ಯಲ್ಲೇ ಇದ್ದೀರಿ ಸಾರ್ ? ನಿಮ್ಮ ಕಾರ್ ನಿಂತಿದೆ ನಾನು ಇಲ್ಲೇ ಇದ್ದೇನೆ ಏನಾದರೂ ಸಹಾಯ ಬೇಕಿತ್ತಾ, ನಾನು ನಮ್ಮೂರಿಗೆ ಹೋಗ್ತಾ ಇದಿನಿ’ ಎಂದರು.

ಏನು ತೊಂದರೆ ಇಲ್ಲ ಅಣ್ಣಾ ನಾವು ಡಾಕ್ಟರ್ ನ ಕಂಡು ಮೆಡಿಸಿನ್ ತಗೊಂಡು ಹೋಗ್ತೀವಿ.. ಹಾಗೇನಾದರೂ ಸಹಾಯ ಬೇಕಾದರೆ ಕಾಲ್ ಮಾಡ್ತೀನಿ.. ತುಂಬಾ ಧನ್ಯವಾದಗಳು ಅಂದೆ..

ಅಂದಹಾಗೆ ಅವರ ಹೆಸರು ರಾಮಕೃಷ್ಣ ಊರು ಬಳ್ಳಾರಿ ಜಿಲ್ಲೆಯ ಕರ್ನಾಟಕ ಹಾಗೂ ಆಂಧ್ರಪ್ರದೇಶದದ ಬಾರ್ಡರ್ ನಲ್ಲಿದೆ. ಎರಡು ಕಿಮಿ ಹೋದರೆ ಕರ್ನೂಲು ಜಿಲ್ಲೆ ಗಡಿ.

ಕಷ್ಟದಲ್ಲಿದ್ದಾಗ ಸಹಾಯ ಮಾಡುವ ಮನಸುಗಳು ತುಂಬಾ ಇರುತ್ತವೆ… ಆದರೆ, ನಮಗೆ ಅಂತವರು ಸಿಗುವುದು ಅಪರೂಪ.

ಬಳ್ಳಾರಿಯಲ್ಲಿ ಬಿಸಿಲಿದ್ದರೇನು, ಅಲ್ಲಿನ ಜನರ ಮನಸು ತಂಪು..!

ರವಿಕುಮಾರ ನರಿಬೋಳ

Leave a Reply

Your email address will not be published. Required fields are marked *

Back to top button