ಅಪ್ಪನಿಗೆ ಇದಾವುದರ ಪರಿವೆಯೆ ಇಲ್ಲ. ಆತನಿಗೆ ಬಿಸಿಲು ಬೆಳದಿಂಗಳು. ಪತ್ರಿಕೆಯ ಕೆಲಸಕ್ಕೆ ಆತ ಮನೆ ಬಿಟ್ಟು ಹೊರಟನೆಂದರೆ ಕಾಠೇವಾಡದ ಕುದುರೆಯಂತೆ ಥೈ ಥೈ ಅನ್ನುತ್ತಿದ್ದ.ಈ ರಾಜಕಾರಣಿಯ ಮನೆಯಲ್ಲಿ ಊಟವಾಯಿತು. ಬೇಸಿಗೆಯ ದಿನವಾದ್ದರಿಂದ ಮಜ್ಜಿಗೆ ಕುಡಿಯುವುದು ಮುಗಿಯಿತು. ಎಲ್ಲಾ ಮಾತು ಕತೆ ಮುಗಿದ ಮೇಲೆ ಅಪ್ಪ ಸಾವಕಾಶವಾಗಿ ಅಗ್ನಿ ಅಂಕುರ ಪತ್ರಿಕೆಯ ರಶೀದಿ ತೆಗೆದು ಅವರ ಬಾಕಿ ಚಂದಾ ಬರೆಯುತ್ತಿದ್ದ. ಆಗ ಒಮ್ಮಿದೊಮ್ಮೆ ಆ ವ್ಯಕ್ತಿ ‘’ ಸರ್, ನೀವು ಚಂದಾ ಮಾಡಿದಾಗ ನನಗೆ ಒಂದು ಪ್ರತಿ ಕೊಟ್ಟಿದ್ದೀರಿ. ಆ ನಂತರ ಇವತ್ತಿನವರೆಗೂ ನಮ್ಮ ಮನೆಗೆ ಪತ್ರಿಕೆಯ ಒಂದೆ ಒಂದು ಪ್ರತಿ ಬಂದಿಲ್ಲ’’ ಎಂದ. ಆಗ ಬೈಯಿಸಿಕೊಳ್ಳುವ ಸರದಿ ನನ್ನದಾಯಿತು. ಸದಾ ಪ್ರತಿ ಪಾಕ್ಷಿಕವೂ ನಾನೇ ಅವರ ಹೆಸರನ್ನು ಅಂಟಿಸಿ ಅಂಚೆಗೆ ಹಾಕುತ್ತಿದ್ದೆ. ಆದರೆ ಅವರು ತಲುಪಿಲ್ಲವೆಂದು ಹೇಳುತ್ತಾರಲ್ಲ ! ಎಂದು ಕ್ಷಣ ನನ್ನೊಳಗೆ ಆಲೋಚನೆಯಲ್ಲಿ ತೊಡಗಿಕೊಂಡೆ. ಆಗ ಅಪ್ಪ ಸಹ, ‘’ ಇಲ್ಲ , ಇಲ್ಲ ನಿಮ್ಮ ಅಡ್ರೆಸ್ ಕಂಪ್ಯೂಟರ್ ನಲ್ಲಿ ಫೀಡ್ ಆಗಿದೆ. ಪ್ರತಿ ಪಾಕ್ಷಿಕವೂ ಪತ್ರಿಕೆ ಕಳಿಸಿದೆ. ನೀವು ಗಡಿಬಿಡಿಯಲ್ಲಿ ನೋಡಿರಲಿಕ್ಕಿಲ್ಲ ! ‘’ ಎಂದ. ಅದಕ್ಕವರು : ‘’ ಇಲ್ಲ ಗುರುಗಳೆ ನಾನು ನಿಮಗೆ ಸುಳ್ಳು ಹೇಳುತ್ತೇನೆಯೆ ? ‘’ ಒಂದೇ ಒಂದು ಪತ್ರಿಕೆಯೂ ನನಗೆ ಬಂದಿಲ್ಲ ಎನ್ನುತ್ತಿದ್ದಂತೆ ದಿಢೀರನೆ ಪ್ರತ್ಯಕ್ಷö್ಯವಾದ ಅವರ ಹೆಂಡತಿ ನಮ್ಮ ಮಾತಿನ ನಡುವೆ ಬಂದು, ಆಕೆ ತನ್ನ ಗಂಡನನ್ನು ಉದ್ದೇಶಿಸಿ ‘’ ರೀ….. ಪ್ರತಿ ಹದಿನೈದು ದಿನಗಳಿಗೊಮ್ಮೆ ಅಗ್ನಿ ಅಂಕುರ ನಮ್ಮ ಮನೆಗೆ ಬಂದಿವೆ. ನೀವೇ ಓದಿ ಇಲ್ಲಿ ಇಟ್ಟಿದ್ದೀರಲ್ಲ !?’’ ಎಂದು ಒಂದೆರಡು ಪ್ರತಿಗಳನ್ನು ಹಿಡಿದುಕೊಂಡು ಬಂದಳು.ಆಗ ಈ ಮಹಾಶಯನ ಮುಖ ಹರಳೆಣ್ಣೆ ಕುಡಿದವರಂತೆ ಆಗಿ ಹೋಯಿತು. ಆದರೂ ಅದನ್ನು ತೋರಿಸಿಕೊಳ್ಳದೆ ತನ್ನ ಹೆಂಡತಿಯ ಮೇಲೆ ಏರಿ ಹೋಗಿ “ ಏ ಅರುವುಗೇಡಿ ಪ್ರತಿ ಸಂಚಿಕೆ ಬಂದಾದAತ ನನಗೆ ಹೇಳಬೇಕೋ ? ಬೇಡವೋ? ನಮ್ಮ ಗುರುಗಳ ಮುಂದೆ ಎಷ್ಟು ಅಸಹ್ಯ ? ಚಿನಾಲಿ, ರಂಡಿ ಎನ್ನುತ್ತ ಆಕೆಯ ಮೇಲೆ ಕೈ ಮಾಡುವ ಮಟ್ಟಕ್ಕೂ ಹೋದ. ಆಗ ಅಪ್ಪನೆ ಆ ವ್ಯಕ್ತಿಗೆ ಗದರಿಸಿ ಕೂಡಿಸಬೇಕಾಯಿತು.“ ಸರ್, ಈಗ ರೊಕ್ಕ ಇಲ್ಲ. ಇನ್ನೊಮ್ಮೆ ಬಂದಾಗ ಖಂಡಿತ ಚಂದಾ ಹಣ ಕೊಡುತ್ತೇನೆ” ಎಂದು ಆತ ಹೇಳಿದಾಗ ಅಪ್ಪ ಯಾವಾಗಲಾದರೂ ಕೊಡು ಆದರೆ ಈ ಕಾರಣಕ್ಕಾಗಿ ನೀನು ಎಂದಿಗೂ ನಿನ್ನ ಹೆಂಡತಿಯೊAದಿಗೆ ಜಗಳವಾಡಬೇಡ ಎಂದು ಹೇಳಿ ನಿರುಮ್ಮಳವಾಗಿ ಹೊರಬಂದರು. ನನಗೆ ಆಗ ಅಪ್ಪನ ಮೇಲೆಯೆ ಹೆಚ್ಚು ಸಿಟ್ಟು ಬಂತು. ಪ್ರಾಮಾಣಿಕವಾಗಿ ಪತ್ರಿಕೆ ನಡೆಸಿಕೊಂಡು ಹೋಗುವುದು ಎಷ್ಟು ಹೈರಾಣಾದ ಕೆಲಸ ! ಇಂಥ ಕೆಲಸ ನನ್ನಿಂದ ಸಾಧ್ಯವಾಗಲಿಕ್ಕಿಲ್ಲ ಎಂಬ ದುಗುಡ ನನ್ನನ್ನು ಮುತ್ತಿಕೊಂಡಿತು. ಆದರೆ ಅಪ್ಪ ಈ ಬಗ್ಗೆ ಕಿಂಚಿತ್ತು ಯೋಚಿಸದೆ ಮತ್ತೊಬ್ಬ ಚಂದಾದಾರನನ್ನು ಹುಡುಕಿ ಹೋಗುತ್ತಿದ್ದ.ಅಪ್ಪ ಗೆಲುವಾಗಿದ್ದಾಗ ಯಾವಾಗಲಾದರೂ ಈ ಬಗ್ಗೆ ಕೇಳಿದರೆ : “ ನಮ್ಮ ಜನರಿಗೆ ಪತ್ರಿಕೆ ನಮ್ಮ ಜೀವನದ ಅವಶ್ಯಕತೆಗಳಲ್ಲಿ ಒಂದು ಎಂದು ಗೊತ್ತಿಲ್ಲ. ತಾವು ಉಂಡ ತರಕಾರಿ, ಕುಡಿದ ಹಾಲಿನ ಬಗ್ಗೆಯೆ ತಕರಾರು ತೆಗೆಯುವ ಜನರು ಅವಶ್ಯಕವೆ ಅಲ್ಲದೆ ಪತ್ರಿಕೆಗಳ ಬಗ್ಗೆ ಸಹಜವಾಗಿ ಅವರಲ್ಲಿ ಅಸಡ್ಡೆ ಇರುತ್ತದೆ. ಅವರಿಗೆ ನಾವು ಓದಲು ಕಲಿಸಬೇಕು. ಪತ್ರಿಕೆಯ ಮೂಲಕ ಅವರಲ್ಲಿ ಪ್ರಜ್ಞೆ ಮೂಡಿದರೆ ನನ್ನ ಬರವಣಿಗೆ ಸಾರ್ಥಕ ” ಎಂದು ಬಿಡುತ್ತಿದ್ದರು. ಅವರ ಮಾತುಗಳನ್ನು ಕೇಳಿ ನನಗೆ ಚಕ್ಕರ ಬಂದು ಬಿಡುವುದೊಂದೆ ಬಾಕಿ ಇರುತ್ತಿತ್ತು.ಆಗ ಅಪ್ಪ ನಕ್ಕು ನಾನು ಹೈರಾಣಾದುದನ್ನು ನೋಡಿ ಅಪ್ಪ ಬಸವಣ್ಣನವರ ವಚನವನ್ನು ಹೇಳುತ್ತಿದ್ದರು.‘ಕರಗಿಸಿ ಎನ್ನ ಮನದ ಕಾಳಿಕೆಯ ಕಳೆಯಯ್ಯ,
ಒರೆಗೆ ಬಣ್ಣಕ್ಕೆ ತಂದೆನ್ನ ಪುಟವನಿಕ್ಕಿ ನೋಡಯ್ಯಾ,
ಕಡಿಹಕ್ಕೆ ಬಡಿಹಕ್ಕೆ ತಂದೆನ್ನ ಕಡೆಯಾಣಿಯ ಮಾಡಿ,
ನಿಮ್ಮ ಶರಣರ ಪಾದಕ್ಕೆ ತೊಡಿಗೆಯ ಮಾಡಿ ಸಲಹು
ಕೂಡಲಸಂಗಮದೇವಾ’
ಆಗ ಮನೆಯಲ್ಲಿ ಅವ್ವ, “ಊರೂರು ತಿರುಗಾಡಿಕೊಂಡು ನೀವು ಹೋದ್ರ ಮನೆಗೆ ಕಿರಾಣಿ ಸಾಮಾನು ತರೋರು ಯಾರು ? ಹೋದ ಸಲದ ಲೈಟ್ ಬಿಲ್ಲನ್ನು ಕಟ್ಟಿಲ್ಲ. ನಾಲ್ಕಾರು ತಿಂಗಳ ಹಿಂಗ್ಹ ಬಿಟ್ಟç ಅವ್ರು ಕನೆಕ್ಷನ್ ತೆಗದು ಹೋಗತಾರ. ಬಟ್ಟಿ ಒಗಿಯೋ ಸಾಬೂನು ಮುಗದ ಒಂದು ತಿಂಗಳ ಆಯ್ತು. ಇವತ್ತಾದರೂ ತಗೋಂಬರಿ” ಎಂಬ ಮಾತು ಕಾದ ಸೀಸದಂತೆ ನನ್ನ ಕಿವಿ ಅಪ್ಪಳಿಸುತ್ತಿದ್ದವು. ಅಪ್ಪ ನಗುತ್ತಿದ್ದ.