ಇತಿಹಾಸ

ರೇವಣಸಿದ್ದನನ್ನು ಹೈಜಾಕ್ ಮಾಡಿಕೊಂಡಿರುವ ವೀರಶೈವರು

Spread the love

ಕುರುಬರ ರೇವಣ ಸಿದ್ದನನ್ನು ಹೈಜಾಕ್ ಮಾಡಿಕೊಂಡು ರೇಣುಕಾಚಾರ್ಯನನ್ನಾಗಿಸಿದ ವೀರಶೈವರು

 

ಕುರುಬ ಸಮುದಾಯ ಮೂಲದ ರೇವಣಸಿದ್ದೇಶ್ವರನನ್ನು ರೇಣುಕಾಚಾರ್ಯ ಎಂಬ ಹೆಸರಿನಲ್ಲಿ ಹೈಜಾಕ್ ಮಾಡಿಕೊಂಡಿರುವ ವೀರಶೈವರು, ರೇಣುಕಾಚಾರ್ಯನಿಗೆ ಬಸವಣ್ಣನವರಿಗಿಂತಲೂ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿದ್ದಾರೆ. ವೀರಶೈವರು ರೇವಣಸಿದ್ದೇಶ್ವರನನ್ನೇ ತಮ್ಮ ಗುರುವೆಂದು ಸ್ವೀಕರಿಸಿದ ಪಕ್ಷದಲ್ಲಿ ಸಮಾಜದಲ್ಲಿ ತಮಗೆ ಸಿಗುವ ಗೌರವಾಧರಗಳು ಕಮ್ಮಿಯಾಗುತ್ತವೆಂಬ ಭೀತಿ ವೀರಶೈವರಿಗಿದೆ. ಬಸವಣ್ಣನವರನ್ನು ಕೂಡಾ ವೀರಶೈವರು ತಮ್ಮ ಗುರುವೆಂದು ಸ್ವೀಕರಿಸಲು ಹಿಂದೇಟು ಹಾಕುತ್ತಾರೆ. ಬಸವಣ್ಣನವರು ವೇದೋಪನಿಷತ್ತು, ಜ್ಯೋತಿಷ್ಯ ಮತ್ತು ಧರ್ಮಶಾಸ್ತ್ರಗಳನ್ನು ನಿರಾಕರಿಸಿದ್ದಾರೆ. ಇವುಗಳನ್ನು ನಂಬಿಕೊಂಡೇ ಜೀವನ ನಡೆಸುವ ವೀರಶೈವರಿಗೆ ಬಸವಣ್ಣನವರ ಸಿದ್ಧಾಂತ ಬಹುದೊಡ್ಡ ಪೆಟ್ಟು ನೀಡುತ್ತದೆ. ವೀರಶೈವರು ಅಯೋನಿಜನೂ ಲಿಂಗೋದ್ಭವನೂ ಆದ ಕಾಲ್ಪನಿಕ ಪುರುಷ ರೇಣುಕಾಚಾರ್ಯನನ್ನು ಮುನ್ನೆಲೆಯಲ್ಲಿರಿಸಿಕೊಂಡು ಸಾಮಾಜಿಕವಾಗಿ ಬ್ರಾಹ್ಮಣರ ನಂತರದ ಸ್ಥಾನದಲ್ಲಿ ತಮ್ಮನ್ನು ಸ್ಥಾಪಿಸಿಕೊಳ್ಳುತ್ತಿದ್ದಾರೆ. ಆದುದರಿಂದಲೇ ಬಸವಣ್ಣನವರ ಜಯಂತಿಯನ್ನು ಆಚರಿಸುವುದಕ್ಕಿಂತಲೂ ಹೆಚ್ಚಿನ ಗಮನವನ್ನು ರೇಣುಕಾಚಾರ್ಯನ ಜಯಂತಿ ಆಚರಿಸುವ ಕಡೆಗೆ ನೀಡಿದ್ದಾರೆ. ಇದು ಪರೋಕ್ಷವಾಗಿ ಏಕಕಾಲದಲ್ಲಿ ರೇವಣಸಿದ್ದೇಶ್ವರ ಮತ್ತು ಬಸವಣ್ಣನವರ ಮಹತ್ವವನ್ನು ಕುಗ್ಗಿಸುವ ಸಂಚು ಎಂಬುದನ್ನು ಲಿಂಗಾಯತರು ಮತ್ತು ಕುರುಬ ಸಮುದಾಯದ ಜನ ಮನಗಾಣಬೇಕಿದೆ.

ಇತ್ತ ಕುರುಬರು ಕೂಡಾ
ರೇಣುಕಾಚಾರ್ಯನನ್ನೇ ತಮ್ಮ ಕುಲಗುರುವೆಂಬ ಸುಳ್ಳನ್ನೇ ನಂಬಿಕೊಂಡು ರೇಣುಕಾಚಾರ್ಯನ ಜಯಂತಿಯನ್ನು ಆಚರಿಸುತ್ತಾ ಬಂದಿದ್ದಾರೆ. ಗುರು ರೇವಣಸಿದ್ದೇಶ್ವರನ ಫೋಟೋ ಬಳಸುವ ಜಾಗದಲ್ಲಿ ರೇಣುಕಾಚಾರ್ಯನ ಫೋಟೋವನ್ನೇ ಬಳಸುತ್ತಿದ್ದಾರೆ. “ರೇಣುಕಾಚಾರ್ಯ ನಮ್ಮ ಗುರುವಲ್ಲ. ನಮ್ಮ ಗುರು ರೇವಣಸಿದ್ದೇಶ್ವರ. ಹುಸಿ ರೇಣುಕಾಚಾರ್ಯನ ಜಯಂತಿ ನಮಗೆ ಬೇಡ. ರೇಣುಕಾಚಾರ್ಯನ ಜಯಂತಿ ನಿಷೇಧವಾಗಲಿ. ರೇವಣಸಿದ್ದೇಶ್ವರನ ಜಯಂತಿ ಜಾರಿಗೆ ಬರಲಿ” ಎಂಬ ನಿರ್ಣಾಯಕ ಆಗ್ರಹ ಕುರುಬರಿಂದ ಕೇಳಿಬರುತ್ತಿಲ್ಲ. ಬಸವಾನುಯಾಯಿಗಳಿಂದಾಗಲೀ ಅಥವಾ ಲಿಂಗಾಯತರಿಂದಾಗಲೀ ಇದಕ್ಕೆ ಪ್ರತಿರೋಧ ವ್ಯಕ್ತವಾಗುತ್ತಿಲ್ಲ. ಇದನ್ನು ಅರಿತುಕೊಂಡೇ ವೀರಶೈವರು ರೇಣುಕಾಚಾರ್ಯನ ಜಯಂತಿ ಆಚರಣೆಯನ್ನು ಹೆಚ್ಚು ವ್ಯಾಪಕಗೊಳಿಸುತ್ತಿದ್ದಾರೆ. ಕಾಲ್ಪನಿಕ ಪುರುಷ ರೇಣುಕಾಚಾರ್ಯನ ಜಯಂತಿ ಆಚರಿಸಲು ಸರ್ಕಾರ ಸಾರ್ವಜನಿಕ ರಜಾ ದಿನವನ್ನು ಘೋಷಿಸಿದೆ. ಅಷ್ಟು ಮಾತ್ರವಲ್ಲದೆ ಪತ್ರಿಕೆಗಳಲ್ಲಿ ಸರ್ಕಾರವೇ ಜಾಹೀರಾತುಗಳ ಮೂಲಕ ಪ್ರಚಾರ ಕೊಡುತ್ತಿದೆ. ರೇಣುಕಾಚಾರ್ಯನ ಜಯಂತಿ ಆಚರಣೆಯು ಸನಾತನಿಗಳ ರಾಜಕೀಯ ಸಿದ್ಧಾಂತಕ್ಕೆ ಹೆಚ್ಚು ಪೂರಕವಾಗಿರುವುದರಿಂದ ಮನುವಾದಿ ಮಾಧ್ಯಮಗಳು ಅತ್ಯಂತ ಮುತುವರ್ಜಿಯಿಂದ ಪ್ರಚಾರ ಮಾಡುತ್ತಿವೆ. ಇಂತಹ ಅಪನಡೆಗಳು ಕಾಲ್ಪನಿಕ ರೇಣುಕಾಚಾರ್ಯನನ್ನು ಜನಪ್ರಿಯಗೊಳಿಸುವುದಷ್ಟೇ ಅಲ್ಲದೆ ಬಸವಣ್ಣ ಮತ್ತು ರೇವಣಸಿದ್ದೇಶ್ವರನ ಹೆಸರುಗಳನ್ನು ಮಸುಕುಗೊಳಿಸುವ ವಾತಾವರಣ ಸೃಷ್ಟಿಸುತ್ತವೆ.

ರೇಣುಕಾಚಾರ್ಯನನ್ನೇ ಕುರುಬರ ಮತ್ತು ಲಿಂಗಾಯತರ ಪರಮ ಶ್ರೇಷ್ಠ ಸಾಂಸ್ಕೃತಿಕ ನಾಯಕನೆಂದು ನಂಬಿಸುವ ಪ್ರಯತ್ನಗಳು ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿವೆ. ವೀರಶೈವರು ಹೇಳುವ ಪ್ರಕಾರ : “ಲಿಂಗಾಯತ ಮತ್ತು ವೀರಶೈವ ಬೇರೆ ಬೇರೆಯಲ್ಲ. ಲಿಂಗಾಯತವು ವೀರಶೈವದ ಅವಿಭಾಜ್ಯ ಅಂಗ. ವೀರಶೈವ ಧರ್ಮವನ್ನು ಪ್ರತಿಪಾದಿಸಿದ್ದು ರೇಣುಕಾಚಾರ್ಯನೇ ಹೊರತು ಬಸವಣ್ಣನಲ್ಲ. ಬಸವಣ್ಣ ವೀರಶೈವ ಧರ್ಮದ ಕೇವಲ ಒಬ್ಬ ಅನುಯಾಯಿ” ಎಂಬುದೇ ಆಗಿದೆ.

ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿದ ಬಳಿಕ ವೀರಶೈವರು ಮತ್ತು ಬ್ರಾಹ್ಮಣರು “ವಚನ ದರ್ಶನ” ಎಂಬ ಕೃತಿಯ ಮೂಲಕ ಬಸವಣ್ಣನವರನ್ನು ಸನಾತನ ಹಿಂದೂ ಧರ್ಮದ ಅನುಯಾಯಿಯನ್ನಾಗಿ ಚಿತ್ರಿಸಿ ಜನಸಾಮಾನ್ಯರಿಗೆ ಮುಟ್ಟಿಸುವ ಸಾಂಘಿಕ ಪ್ರಯತ್ನ ಮಾಡುತ್ತಿದ್ದಾರೆ.


ಬ್ರಾಹ್ಮಣರಿಗೆ ರೇಣುಕಾಚಾರ್ಯನ ಬಗ್ಗೆ ಯಾವುದೇ ಗೌರವವಿಲ್ಲದಿದ್ದರೂ ಬಸವಣ್ಣನವರ ಸಿದ್ಧಾಂತದ ಬಗ್ಗೆ ಹೆಚ್ಚು ಭಯವಿರುವುದರಿಂದ ವೀರಶೈವರನ್ನು ಮತ್ತು ಲಿಂಗಾಯತರನ್ನು ವೈದಿಕ ಪಾರಮ್ಯದ ಹಿಂದೂ ಧರ್ಮದಲ್ಲಿಯೇ ಉಳಿಸಿಕೊಳ್ಳುವ ಸಲುವಾಗಿ ವೇದೋಪನಿಷತ್ತು ಮತ್ತು ಮನುಸ್ಮೃತಿ ಆಧಾರಿತವಾಗಿಯೇ ವಚನಗಳನ್ನು ಕಟ್ಟಲಾಗಿದೆ ಎಂದು ಸಂಘಪರಿವಾರದ ರಾಜಕೀಯ ಸಿದ್ಧಾಂತಕ್ಕೆ ಅನುಗುಣವಾಗಿ ವಚನಗಳನ್ನು ವಿಶ್ಲೇಷಣೆ ಮಾಡಲಾಗುತ್ತಿದೆ.

ರೇಣುಕಾಚಾರ್ಯನ ಜಯಂತಿಯನ್ನು ನಿಷೇಧಿಸಿ ರೇವಣಸಿದ್ದೇಶ್ವರ ಜಯಂತಿಯನ್ನು ಆಚರಣೆಗೆ ತಂದಾಗ ಮಾತ್ರ ವೀರಶೈವರ ಹವಣಿಕೆಗಳಿಗೆ ಸ್ವಲ್ಪಮಟ್ಟಿಗೆ ಲಗಾಮು ಹಾಕಲು ಸಾಧ್ಯವಾಗುತ್ತದೆ. ರೇಣುಕಾಚಾರ್ಯನಿಗೆ ನೀಡಿರುವ ಪ್ರಾಶಸ್ತ್ಯಕ್ಕೆ ಭಂಗ ತಂದಾಗ ಮಾತ್ರ ರೇವಣಸಿದ್ದೇಶ್ವರ ಮತ್ತು ಬಸವಣ್ಣನವರು ಮತ್ತಷ್ಟು ಹೆಚ್ಚಾಗಿ ಪ್ರಕಾಶಿಸಲು ಸಾಧ್ಯವಾಗುತ್ತದೆ. ರೇಣುಕಾಚಾರ್ಯನ ಜಯಂತಿಯನ್ನು ಕುರುಡಾಗಿ ಆಚರಿಸುತ್ತಿರುವ ಲಿಂಗಾಯತರು ಮತ್ತು ಕುರುಬರು ಒಟ್ಟಿಗೆ ಸೇರಿ ವೀರಶೈವರ ಅಸಲಿ ಮುಖ ಮತ್ತು ಮುಖವಾಡಗಳನ್ನು ತೆರೆದು ತೋರಿಸುವಂತಾಗಲಿ…

 

ಸೂಚನೆ : ಮೇಲಿನ ಬರವಣಿಗೆ ವಿಶ್ವಾಸಾರ್ಹವಾಗಿದ್ದರೂ ಸಹ ಆಯಾ ಬರವಣಿಗೆಯ ಹೊಣೆ ಲೇಖಕರವೆ ಆಗಿತ್ತವೆ. ಆರೋಗ್ಯಕರ ಚರ್ಚೆಗೆ ಬಸವಮಾರ್ಗ ಸ್ವಾಗತಿಸುತ್ತದೆ.

– ಬಸವಮಾರ್ಗ.ಕಾಮ್

*ಡಾ.ವಡ್ಡಗೆರೆ ನಾಗರಾಜಯ್ಯ*
8722724174

Related Articles

One Comment

  1. ರೇವಣಸಿದ್ಧನನ್ನು ಹರಿಹರ ಕವಿಯು ಕಾಪಾಲಿಕನೆಂದು ಕರೆದಿದ್ದಾನೆ. ರೇವಣಸಿದ್ಧನನ್ನೇ ರೇಣುಕಾಚಾರ್ಯನೆಂದು ಅವನ ಹೆಸರಿನಲ್ಲಿ ಸಿಧ್ಯಾಂತಶಿಖಾಮಣಿಯೆಂಬ ಸಂಸ್ಕೃತದಲ್ಲಿ ಬರೆದು ಗದ್ದಲ ಎಬ್ಬಿಸಿದ್ದಾರೆ.

Leave a Reply

Your email address will not be published. Required fields are marked *

Back to top button