ಪ್ರಚಲಿತ ಸಂಗತಿ

ಬಿದರಿಯವರ ಮಾತು ಲಿಂಗಾಯತರನ್ನು ರೊಚ್ಚಿಗೆಬ್ಬಿಸಿದೆ

Spread the love

ಬಿದರಿಯವರ ಮಾತು ಲಿಂಗಾಯತರನ್ನು  ರೊಚ್ಚಿಗೆಬ್ಬಿಸಿದೆ

ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆ ಪಾಸಾಗಿ, ಕರ್ನಾಟಕದ ಡಿ. ಜಿ. ಪಿ.ಯಾಗಿ ಸೇವೆ ಸಲ್ಲಿಸಿದ ವ್ಯಕ್ತಿಯೊಬ್ಬರು ಕರ್ನಾಟಕ ವೀರಶೈವ ಮಹಾಸಬೆಯ ಅಧ್ಯಕ್ಷರಾಗಿ ಚುನಾಯಿತರಾಗಿದ್ದು ನನಗೆ ಸಂತಸ ತಂದಿತ್ತು. ಇನ್ಮುಂದೆ ವೀರಶೈವ ಮಹಾಸಭೆಯುಲ್ಲಿ ಮೌಢ್ಯಾಚರಣೆಗಳನ್ನು ನಿಲ್ಲಬಹುದೆಂದು ಒಳ ಮನಸ್ಸು ಆಶಿಸಿತ್ತು.

https://youtu.be/o_TXA4LOCHo?si=IC-iTzKKGFi_LE_x

ವೀರಶೈವ ಮಹಾಸಬೆಯೆಂಬ ನೆಚ್ಚಿದ ಎಮ್ಮೆ ಮತ್ತೊಮ್ಮೆ ಕೋಣ ಹಾಕಿತು. ಸುಳ್ಳನ್ನೆ ಸತ್ಯವೆಂದು ತಿಳಿದ ಮಹಾಸಭೆಯ ನೂತನ ರಾಜ್ಯಾಧ್ಯಕ್ಷರು “ಬಸವ ಜಯಂತಿಯೊಂದಿಗೆ ಕಾಲ್ಪನಿಕ ರೇಣುಕ ಜಯಂತಿಯನ್ನೂ ಮಾಡಬೇಕು” ಎಂದು ಫರ್ಮಾನು ಹೊರಡಿಸಿದ್ದಾರೆ. ಇದನ್ನು ಕೇಳಿ ನಿಜಲಿಂಗಾಯತರು ಕಂಗಾಲಾಗಿದ್ದಾರೆ.

ಹಿಂದೊಮ್ಮೆ ಇದೆ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರು “ಲಿಂಗಾಯತರನ್ನು ಬಸವಣ್ಣ ಮಾಡಿದ್ನಾ” (ವಿವರಕ್ಕಾಗಿ ಲಿಂಗಾಯತ ಚಳುವಳಿ ೨೦೧೭-೧೮ ಓದಿ) ಎಂದು ಕೇಳಿದ್ದರು. ಅದೆ ಸಮಯದಲ್ಲಿ “ವೀರಶೈವ- ಲಿಂಗಾಯತರು ಬೇರೆ ಅಲ್ಲ ಸ್ವತಂತ್ರ ಧರ್ಮಕ್ಕೆ ಎಷ್ಟೇ ಹೋರಾಟ ಮಾಡಿದರೂ ಯಾವುದೇ ಕಾರಣಕ್ಕೂ ಲಿಂಗಾಯತ ವೀರಶೈವ ವಿಘಟನೆ ಆಗಲು ಬಿಡುವುದಿಲ್ಲ. ಲಿಂಗಾಯತರು ಕೆಟ್ಟರೆ ಕರ್ನಾಟಕವೆ ಕೆಡುತ್ತದೆ” (ವಿವರಕ್ಕೆ ಅದೆ ಪುಸ್ತಕ ಓದಿ) ಎಂದಿದ್ದರು ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆಯವರು.

https://youtu.be/o_TXA4LOCHo?si=IC-iTzKKGFi_LE_x

ಮಹಾಸಬೆಯ ಅಧ್ಯಕ್ಷರೇನೋ ಹಳೆಯ ಕಾಲದವರು, ಮೇಲಾಗಿ ವಯೋವೃದ್ಧರು. ಧಾರ್ಮಿಕ ಸಿದ್ಧಾಂತಗಳನ್ನಾಗಲಿ, ಧಾರ್ಮಿಕ ಸಾಹಿತ್ಯವನ್ನಾಗಲಿ ಓದದೆ ಇರಬಹುದೆಂದು ಭಾವಿಸಿ ಹಿರಿಯರ ಮಾತನ್ನು ನಿಜ ಲಿಂಗಾಯತರು ಮರೆತಿದ್ದರು. ಆದರೆ ವೀರಶೈವ ಮಹಾಸಭೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯವರು ಬಿ. ಇ. ಪದವಿದರರು. ಲಿಂಗಾಯತ ಸಂಸ್ಕಾರ ತಿಳಿದವರು. ಮೇಲಾಗಿ ಬಸವಣ್ಣನವರ ಕಾಯಕ ಭೂಮಿ ಬೀದರ್ ಜಿಲ್ಲೆಯವರು. ಇವರ ಮಾತು ಕೇಳಿ ದುಃಖವಾಗಿತ್ತು. ರಾಜಕೀಯಕ್ಕಾಗಿ ಧರ್ಮಸಿದ್ಧಾಂತ ಮರೆಯುತ್ತಿರುವರಲ್ಲ ಎಂದು ಮನಸ್ಸು ಮುದುಡಿತ್ತು. ಮೇಲಾಗಿ ಕರ್ನಾಟಕದಲ್ಲಿ ಕೇವಲ ಲಿಂಗಾಯತರೇ ಇದ್ದಾರೆಂದರೆ ಉಳಿದ ಧರ್ಮದವರು ಬಿಟ್ಟಾರೆಯೇ?

ವೀರಶೈವ ಮತಸ್ಥಾಪಕರಾದ ಪಂಚಪೀಠಾಧೀಶರ ಇತಿಹಾಸವನ್ನು ನಾಡಿನ ಸಂಶೋಧಕರು ಅತಿ ಸೂಕ್ಷ್ಮವಾಗಿ ಅವಲೋಕಿಸಿದ್ದಾರೆ. ವೀರಶೈವರ ಪ್ರಭಲ ಪ್ರತಿಪಾದಕರಾದ ಶ್ರೇಷ್ಠ ವಿದ್ವಾಂಸರೆಂದು ಹೆಸರುವಾಸಿಯಾದ ಡಾ. ಎಸ್. ಸಿ. ನಂದಿಮಠರು ಬರೆಯುತ್ತಾರೆ, “ಹನ್ನೆರಡನೆಯ ಶತಮಾನದ ನಂತರ ವೀರಶೈವ ಮತದ ಪ್ರಬಲತೆಯು ಹೆಚ್ಚಿದ ನಂತರ ಅಲ್ಲಿಯ ಕಾಳಾಮುಖರೆಲ್ಲರೂ ವೀರಶೈವರಾಗಿರಬೇಕೆಂಬ ಊಹಿಸಲು ಬಲವಾದ ಆಧಾರಗಳಿವೆ. ಮೊದಲು ಕಾಳಾಮುಖರಿದ್ದು ಈಗ ವೀರಶೈವರಾದ ಅನೇಕ ಮಠಗಳಿವೆ. ವೀರಶೈವದ ಬಗ್ಗೆ ಕ್ರಿ. ಶ. ಹನ್ನೊಂದನೆ ಶತಮಾನಕ್ಕೂ ಪೂರ್ವದಲ್ಲಿ ಉಲ್ಲೇಖವಿರದೆ ಇರುವುದರಿಂದ, ಮಲಕಾಪುರದ ಶಾಸನದಲ್ಲಿ ಮಾತ್ರ ಮೊದಲ ಬಾರಿಗೆ ‘ವೀರಶೈವ’ ಶಬ್ದ ಬರುವುದರಿಂದ ವೀರಶೈವ ಲಿಂಗವಂತ ಮೊದಲಾದ ಶಬ್ದಗಳು ಹನ್ನೆರಡನೇ ಶತಮಾನದಿಂದೀಚೆ ಬಂದಿರಬಹುದೆಂದು ಪ್ರಕೃತಕ್ಕೆ ಗ್ರಹಿಸುವಾ”ಎಂದು ಲೇಖನಿಸುತ್ತಾರೆ.

ಇನ್ನೊಂದು ಇವರ ಮಹತ್ವದ ಹೇಳಿಕೆಯೊಂದಿಗೆ ಬರಹ ಮುಗಿಸುತ್ತೇನೆ. ಓದಬೇಕಲ್ಲ, ಎಂದು ಗಾಬರಿಯಾಗಬೇಡಿ!

“ವೀರಶೈವ ಧರ್ಮದ ಕೆಲವು ಗ್ರಂಥಗಳಲ್ಲಿ ಇದರ ಉಗಮವೂ ಐದು ಜನ ಆಚಾರ್ಯರಿಗೆ ಅನ್ವಯಿಸಿದೆ ಎಂದು ಉಲ್ಲೇಖವಿದೆ. ಇವರು ಪರಮೇಶ್ವರನ ಪಂಚಮುಖಗಳಿಂದುದ್ಭವಿಸಿದ ಪಂಚಗಣಾದೀಶ್ವರರೆಂದೂ, ಯುಗಯುಗಾಂತರಗಳಲ್ಲಿ ಬೇರೆಬೇರೆ ನಾಮಗಳಿಂದ ಭೂಮಿಯಲ್ಲವತರಿಸಿ ಶೈವಮಾರ್ಗವನ್ನು ಪ್ರಸ್ಥಾಪಿಸಿದರೆಂದೂ, ಕಲಿಯುಗದಲ್ಲಿ ಕೊಲ್ಲಿಪಾಕೆ, ವಟಕ್ಷೇತ್ರ, ಸುಧಾಕುಂಡ, ದ್ರಾಕ್ಷಾರಾಮ, ವಾರಣಾಸಿಗಳೆಂಬ ಭರತಖಂಡದ ಪ್ರಸಿದ್ಧ ಕ್ಷೇತ್ರಗಳಲ್ಲಿ ಲಿಂಗಗಳೊಳಗಿಂದುದ್ಭವಿಸಿ, ಸರ್ವತ್ರಸಂಚರಿಸಿ, ಬಾಳೆಹಳ್ಳಿ ಉಜ್ಜಯಿನಿ, ಶ್ರೀಶೈಲ, ಹಿಮವತ್ಕೇದಾರ ಮತ್ತು ಕಾಶೀ ಕ್ಷೇತ್ರಗಳಲ್ಲಿ ಮಠಗಳನ್ನು ಸ್ಥಾಪಿಸಿದರೆಂದು ಪ್ರತೀತಿಯಿದೆ. ಇವರಿಗೆ ಕಲಿಯುಗದಲ್ಲಿ ರೇವಣಸಿದ್ದ, ಮರಳುಸಿದ್ದ,ಪಂಡಿತಾರಾಧ್ಯ, ಏಕೋರಾಮ, ವಿಶ್ವಾರಾಧ್ಯರೆಂದು ಹೆಸರು. ಇವರಿಗೆ ಈಗ ಪಂಚಾಚಾರ್ಯರೆಂದು ಹೆಸರು. ಇವರಿಂದ ಸ್ಥಾಪಿಸಲ್ಪಟ್ಟವೆಂದು ಪ್ರತೀತಿಯಿದ್ದ ಮಠಗಳು ಈಗಲೂ ಅಸ್ತಿತ್ವದಲ್ಲಿವೆ. ಇಲ್ಲಿ ಮುಖ್ಯ ಮಾತೆಂದರೆ ಇದು ಕಟ್ಟುಕಥೆಯೋ ಅಥವಾ ಐತಿಹಾಸಿಕ ಸಂಗತಿಯೊ ಎಂಬುದನ್ನು ನಿರ್ಣಯಿಸುವುದು.

ಚಿಕಿತ್ಸಕರಿಗೆ ಇದು ಐತಿಹಾಸಿಕ ಸಂಗತಿಯಂತೆ ಕಾಣುವುದಿಲ್ಲ; ಏಕೆಂದರೆ ಈಗಿನ ಮನ್ವಂತರದ ಚಿಕಿತ್ಸಕರು ಸ್ಥಾವರಲಿಂಗಗಳಿಂದಾದ ಆಚಾರ್ಯರ ಉದ್ಭವವನ್ನು ನಂಬುವುದಿಲ್ಲ. ಏಕೆಂದರೆ ಅದು ಸಾಮಾನ್ಯ ನಿಯಮ (Natural law) ಕ್ಕೆ ವಿರೋಧವಾವಾಗಿರುವುದು. ಅಸಾಮಾನ್ಯ ಅಥವಾ ಅಮಾನುಷವೃತ್ತಿಗಳಲ್ಲಿ ಈಗಿನ ಚಿಕಿತ್ಸಕರ ವಿಶ್ವಾಸವಿಲ್ಲ. ಆದರೂ ಇದರಲ್ಲಿ ಇತಿಹಾಸದ ಅಂಶವಿಲ್ಲೆಂದು ಅನ್ನಲು ಬರುವುದಿಲ್ಲ. ಸ್ವಲ್ಪ ಇತಿಹಾಸದ ಆಧಾರದ ಮೇಲೆ ಅಸಮಾನ್ಯ ಮತ್ತು ಅಮಾನುಷಕೃತಿಗಳನ್ನು ಪೋಣಿಸಿ ದೊಡ್ಡ ದೊಡ್ಡ ಕಟ್ಟುಕಥೆಗಳನ್ನು ಕಟ್ಟಿದ ಉದಾಹರಣೆಗಳು ನಮ್ಮ ಪುರಾಣಗಳಲ್ಲಿ ವಿಫಲವಾಗಿ ದೊರೆಯುವವು. ಮೇಲಿನ ಆಚಾರ್ಯರ ಸಂಗತಿಯು ಕೂಡ ಇಂಥ ಪೌರಾಣಿಕ ಕಥೆಗಳಲ್ಲೊಂದಾಗಿರಬೇಕೆಂದು ಅನಿಸುವುದು.”

ಈ ಮಾತುಗಳು ನನ್ನವಲ್ಲ. ಇವು ಡಾ. ಎಸ್. ಸಿ.ನಂದಿಮಠರ ಬರೆಹಗಳು. ಹಿರಿಯರಾದ ನಂದಿಮಠರು ಸಾಮಾನ್ಯರಲ್ಲ. “ಲಿಂಗಾಯತ ಫಂಡ್” ಸಹಾಯದಿಂದ ೧೯೨೮ ರಲ್ಲಿ ಲಂಡನ್ನಿಗೆ ತೆರಳಿ ಡಾ. ಎಲ್. ಡಿ. ಬಾರ್ನೆಟ್ ಎಂಬ ಮೇದಾವಿ ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ “Theology of the sivagamas: being a survey of the doctrines of the saivasiddhant and veerasaivism” ಎಂಬ ಮಹಾಪ್ರಬಂಧ ರಚಿಸಿ ಪಿ.ಎಚ್.ಡಿ. ಪದವಿ ಪಡೆದವರು. (ಹೆಚ್ಚಿನ ವಿವರಗಳಿಗಾಗಿ ಲಿಂಗಾಯತ ಚಳುವಳಿ ೨೦೧೭-೧೮ ಓದಿ).

ನಂದಿಮಠ ಸರ್ ಅಲ್ಲದೆ ಕರ್ನಾಟಕದ ಖ್ಯಾತ ವಿದ್ವಾಂಸರು ಈ ವಿಷಯದಲ್ಲಿ ಟನ್ ಗಟ್ಟಲೆ ಕಾಗದ ಉಪಯೋಗಿಸಿದ್ದಾರೆ. ಆದರೆ ಮಹಾಸಭೆಯವರಿಗೆ ಓದಲು ಬಿಡುವೆಲ್ಲಿದೆ? ರಾಜಕೀಯ ಬ್ರಿಡಿಂಗ್ ಕೇಂದ್ರವಾದ ವೀರಶೈವ ಮಹಾಸಭೆ ಧರ್ಮಕಾರ್ಯವನ್ನು ಮರೆತು ದಶಕ ದಶಕಗಳಾಗಿವೆಯಲ್ಲವೆ?

O ಜಿ.ಬಿ.ಪಾಟೀಲ

Related Articles

Leave a Reply

Your email address will not be published. Required fields are marked *

Back to top button