ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿಗಳಿಗೆ ಈಗ ಸಂದಿಗ್ದ ಸಂದರ್ಭ ಬಂದಿದೆ. ಆರಂಭದಲ್ಲಿ ಬಸವಣ್ಣನವರ ವಿಚಾರಗಳೊಂದಿಗೆ ಗುರುತಿಸಿಕೊಂಡಿದ್ದ ಸ್ವಾಮೀಜಿಯ ಆ ಖದರೆ ಬೇರೆ ಇತ್ತು. ತಮ್ಮ ಪೀಠ ಶ್ರಮಿಕ ವರ್ಗದವರ ಪೀಠ ಒಕ್ಕಲಿಗರ ಪೀಠ ಎಂದಾಗಲೂ ಇಡಿ ಸಮುದಾಯ ಜೊತೆಗೆ ಇತ್ತು.

ಉಳುವ ಯೋಗಿಯ ಸಾಂಕೇತವನ್ನು ಪ್ರತಿನಿಧಿಸುವ ನೇಗಿಲಿನ ಪ್ರತಿಕೃತಿ ಹಾಗೂ ಹಸಿರು ಶಾಲನ್ನು ಹೊದ್ದುಕೊಂಡಿರುವಾಗಲು ಪ್ರಗತಿಪರರು ಅವರ ಬೆನ್ನಿಗೆ ನಿಂತುಕೊಂಡಿದ್ದರು.
ಲಿಂಗಾಯತ ಧರ್ಮದ ಹೋರಾಟದಲ್ಲಂತೂ ಅಗ್ರಗಣ್ಯ ಮಠಾಧೀಶರಲ್ಲಿ ಒಬ್ಬರಾಗಿದ್ದರು.ವಚನ ಸಾಹಿತ್ಯದ ಮತ್ತು ಬಸವಣ್ಣನವರ ಬಗೆಗೆ ಅದಮ್ಯ ಪ್ರೀತಿ ಇರುವ ಮಠಾಧೀಶ ಸಮಾಜಕ್ಕೊಂದು ಕಾಣ್ಕೆ ಎಂದು ಭಾವಿಸಲಾಗಿತ್ತು.
ಪಂಚಮಸಾಲಿಯ ಇನ್ನೊಂದು ಪೀಠದ ಸ್ವಾಮೀಜಿಯ ವರ್ತನೆಗಳು, ವೈದಿಕ ಆಚರಣೆಗಳು ಕಸಿವಿಸಿ ಉಂಟು ಮಾಡಿದ್ದವು.ಆಗ ಆಶಾಕಿರಣವಾಗಿ ಕಂಡವರು ಜಯ ಮೃತ್ಯುಂಜಯ ಸ್ವಾಮೀಜಿ.
ಬಹುಶಃ ಇನ್ನೊಂದು ಪೀಠವನ್ನು ಹಿಂದಿಕ್ಕಿ ಮುಂದು ಹೋಗುವ ತವಕವೋ ಅಥವಾ ಪಂಚಮಸಾಲಿ ಜನಾಂಗದ ಬಗೆಗಿನ ಪ್ರೀತಿಯೊ ಕಾಣೆ. ಆದರೆ ಅದೆಲ್ಲವನ್ನು ಮನ ಮುಟ್ಟಿ ತನು ಮುಟ್ಟಿ ಮಾಡಿದರು. ಮಠದಲ್ಲಿ ಕುಳಿತು ಕೊಳೆತು ಹೋಗುವ ಬದಲು ಜನ ಸಾಮಾನ್ಯರ ನಡುವೆ ಬೆರೆತು ಹೋಗಬೇಕೆಂಬ ಅವರ ಹಂಬಲ ಸರಿಯಾದುದೆ.
ಆದರೆ ಅವರು ಬರು ಬರುತ ರಾಜಕೀಯ ಜೇಡಬಲೆಯಲ್ಲಿ ಸಿಕ್ಕಿ ಹಾಕಿಕೊಳ್ಳಬಲ್ಲರು ಎಂದು ಯಾರೂ ಊಹಿಸಿರಲಿಲ್ಲ. ಪಂಚಮಶಾಲಿ ಜನಾಂಗದ ಶಕ್ತಿ ಪ್ರದರ್ಶನವನ್ನು ಸರಕಾರದ ಮುಂದೆ ಪಣಕ್ಕಿಟ್ಟು ನಿಲ್ಲಬೇಕಿರಲಿಲ್ಲ. ಶಕ್ತಿಗಿಂತ ಯುಕ್ತಿಯನ್ನು ಬಳಸಿಕೊಳ್ಳಬೇಕಾಗಿತ್ತು. ಚಳುವಳಿಯ ಮುಂಚೂಣಿಯ ನಾಯಕ ಹಠಕ್ಕೆ ಬೀಳಬಾರದು. ಒಂದೊಂದು ಸಲ ಸೋಲಬೇಕು.
ಇದೆಲ್ಲ ಅರಿತುಕೊಂಡ ನರಿ ಬುದ್ಸಿಯ ರಾಜಕಾರಣಿಗಳು ಇವರ ಧಾಡಸಿತನವನ್ನು ತಮ್ಮ ಬೆಳವಣಿಗೆಗಾಗಿ ಬಳಸಿಕೊಂಡರು. ಕನಿಷ್ಠ ಪಕ್ಷ ಆ ರಾಜಕಾರಣಿಗಳು ಬಸವಣ್ಣನವರ ಬಗೆಗೂ ಅನುಚಿತ ಮಾತನಾಡಿದಾಗ ಅದನ್ನು ಖಂಡಿಸದಷ್ಟು ನಿಸತ್ವವಾಗಿದ್ದರು, ಜಯ ಮೃತ್ಯುಂಜಯ ಸ್ವಾಮೀಜಿಗಳು.
ಸಹಜವಾಗಿಯೆ ರಾಜಕೀಯದಲ್ಲಿ ಜಿದ್ದಾಜಿದ್ದಿಯ ಪ್ರಶ್ನೆ ಇರುತ್ತದೆ. ತಮ್ಮ ಅಸ್ತಿತ್ವಕ್ಕೆ ದಕ್ಕೆ ಬಂದಾಗ ಹಿಂದೆ ಮುಂದೆ ನೋಡದೆ ತನ್ನ ಜೊತೆಗಿದ್ದವರನ್ನೆ ತುಳಿದು ಹೋಗುತ್ತಾನೆ. ಇದು ಇತಿಹಾಸ.
ಭಕ್ತರ ಬೃಹತ್ ಬಳಗವಿದ್ದೂ ಪಂಚಮಸಾಲಿ ಜಗದ್ಗುರು ಅಕಳಾಸಕಳಾ ಅನಿಸಿಕೊಳ್ಳುವ ಸ್ಥಿತಿಗೆ ತಮಗೆ ತಾವೆ ದೂಡಿಕೊಂಡಿದ್ದರೆ.
ಈ ಚಕ್ರವೂಹ್ಯದಿಂದ ಹೊರಬಂದು ಬಸವಾದಿ ಶರಣರನ್ನು ಅಪ್ಪಿಕೊಂಡು ಜನಪರವಾದ ನಿಲುವುಗಳೊಂದಿಗೆ ಸದಾ ಇರಲಿ ಎಂದು ಬಸವಮಾರ್ಗ ಬಯಸುತ್ತದೆ.
೦ ವಿಶ್ವಾರಾಧ್ಯ ಸತ್ಯಂಪೇಟೆ