ಸಂಬಳ ಹಾಗೂ ಭತ್ಯೆಗಳನ್ನು ಹೆಚ್ಚಿಸಿಕೊಂಡ ಜನಪ್ರತಿನಿಧಿಗಳು

ಸಂಬಳ ಹಾಗೂ ಭತ್ಯೆಗಳನ್ನು ಹೆಚ್ಚಿಸಿಕೊಂಡ ಜನಪ್ರತಿನಿಧಿಗಳು
ಕರ್ನಾಟಕ ರಾಜ್ಯ ವಿಧಾನ ಮಂಡಲದ ಶಾಸಕ/ಮಂತ್ರಿ ಇತ್ಯಾದಿಗಳ ಸಂಬಳ ಹಾಗೂ ಇತರ ಭತ್ಯೆಗಳು ೨೦೨೨ ನೇ ವರ್ಷದ ಆರಂಭದಲ್ಲಿಯೆ ದ್ವಿಗುಣಗೊಂಡಿರುವುದು ನಮ್ಮ ನೆನಪಿನಿಂದ ಅಳಿದುಹೋಗಿಲ್ಲ. ಕೇವಲ ಮೂರು ವರ್ಷಗಳ ಅಂತರದಲ್ಲಿ ಮತ್ತೆ ಇವರ ಸಂಬಳ ಹಾಗೂ ಭತ್ಯೆಗಳು ದ್ವಿಗುಣಗೊಳ್ಳುತ್ತಿರುವುದು ಆಶ್ಚರ್ಯವನ್ನಷ್ಟೆ ಅಲ್ಲದೆ ಆತಂಕವನ್ನೂ ಉಂಟುಮಾಡುತ್ತದೆ. ಮೂರೇ ವರ್ಷಗಳಲ್ಲಿ ಜನಪ್ರತಿನಿಧಿಗಳ ಸಂಬಳ ಹಾಗೂ ಭತ್ಯೆಗಳ ಏರಿಕೆಯ ಹಿಂದಿನ ಔಚಿತ್ಯ ನಿಜವಾಗಿಯೂ ವಿಚಿತ್ರ ಹಾಗೂ ವಿಲಕ್ಷಣ. ೨೦೨೨ ರ ಪೂರ್ವಾರ್ಧದಲ್ಲಿ ಕರ್ನಾಟಕ ರಾಜ್ಯ ಹಿಜಾಬ್ ಮುಂತಾದ ಕೋಮುವಾದಿ ಅಜೆಂಡಾಗಳ ದಳ್ಳುರಿಯಲ್ಲಿ ಬೇಯುತ್ತಿತ್ತು. ಶಿವಮೊಗ್ಗೆಯಲ್ಲಿ ಧರ್ಮಾಂಧ ಯುವಕನೊಬ್ಬನ ಕೊಲೆ ನಡೆದಿತ್ತು. ಅದನ್ನೆ ನೆಪವಾಗಿಟ್ಟುಕೊಂಡು ಹೆಣ ರಾಜಕೀಯದ ಹೀನ ಪ್ರದರ್ಶನ ರಾಜ್ಯದಲ್ಲಿ ನಡೆಯುತ್ತಿತ್ತು. ಆ ದುರಿತ ಕಾಲದಲ್ಲಿ ರಾಜ್ಯದ ವಿಧಾನ ಮಂಡಲದ ಉಭಯ ಸದನಗಳಲ್ಲಿ ಯಾವ ಸದ್ದೂ ಇಲ್ಲದೆˌ ಚರ್ಚೆಯೂ ಇಲ್ಲದೆ ನಮ್ಮ ಜನಪ್ರತಿನಧಿಗಳು ತಮ್ಮ ಸಂಬಳ ಹಾಗೂ ಅದಕ್ಕೆ ಸಂಬಂಧಿಸಿದ ಭತ್ಯೆಗಳನ್ನು ವೃದ್ಧಿಸಿಕೊಳ್ಳುವ ಮಸೂದೆಯನ್ನು ಅಂಗೀಕರಿಸಿದ್ದರು. ರಾಜ್ಯದಲ್ಲಿ ಶಾಸಕ/ಮಂತ್ರಿಗಳ ಸಂಬಳ ಹೆಚ್ಚಿಸುತ್ತಿದ್ದಂತೆ ಸಂಸತ್ತಿನಲ್ಲಿ ಸಂಸದರು ಹಾಗೂ ಸಚಿವರ ಸಂಬಳ ಕೂಡ ಏರಿಕೆಯಾಗುವ ಸುದ್ದಿ ಬರುತ್ತಿದೆ.
ಜನಪ್ರತಿನಿಧಿಗಳ ಸಂಬಳ ಹಾಗೂ ಭತ್ಯೆ ಕಾಲಕಾಲಕ್ಕೆ ಏರಿಕೆ ಆಗಬಾರದು ಎಂದು ನಾನು ಹೇಳಲಾರೆ. ಆದರೆ ಸ್ವಾತಂತ್ರ್ಯೋತ್ತರ ಕಾಲದ ಆಡಳಿತದಲ್ಲಿ ಸಂಸತ್ತು ಹಾಗೂ ಶಾಸನ ಸಭೆಗಳಲ್ಲಿ ವಿಸ್ತ್ರತವಾದ ಚರ್ಚೆಗಳುˌ ವಾಗ್ವಾದಗಳುˌ ಅಪಸ್ವರಗಳು ಅಥವಾ ಯಾವುದೇ ಬಗೆಯ ವಿರೋಧಗಳಿಲ್ಲದೆ ಆಡಳಿತ ಮತ್ತು ವಿಪಕ್ಷದ ಸದಸ್ಯರು ಜೊತೆ ಸೇರಿ ಭಾರೀ ಒಮ್ಮತದಿಂದ ಅಂಗೀಕರಿಸುವ ಏಕೈಕ ಮಸೂದೆ ಎಂದರೆ ಜನಪ್ರತಿನಿಧಿಗಳ ಸಂಬಳ ಹಾಗೂ ಭತ್ಯ ಏರಿಕೆಯ ಸಂಸದೀಯ ಪ್ರಕ್ರಿಯೆ. ಕೂಲಿ ಕಾರ್ಮಿಕರುˌ ನೌಕರರುˌ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರುˌ ಪೌರ ಕಾರ್ಮಿಕರು ಇತ್ಯಾದಿ ಸಂಘಟಿತ ಮತ್ತು ಅಸಂಘಟಿತ ವಲಯದ ಉದ್ಯೊಗಿಗಳು ತಮ್ಮ ಸಂಬಳ ಮತ್ತು ಇತರ ಭತ್ಯೆಗಳ ಹೆಚ್ಚಳಕ್ಕಾಗಿ ಮಾಡಿಕೊಳ್ಳುವ ಮನವಿ ಅಥವಾ ಮುಷ್ಕರ್ ದ ಕುರಿತು ಈ ಜನಪ್ರತಿನಿಧಿಗಳ ಹೇಳಿಕೆ ಹಾಗೂ ಪ್ರತಿಕ್ರಿಯೆಗಳು ಎಷ್ಟೊಂದು ಕಠಿಣವಾಗಿರುತ್ತವೆ ಎನ್ನುವುದು ನಾವು ಬಲ್ಲೆವು. ಈ ದೇಶದ ದುಡಿಯುವ ವರ್ಗ ತಮ್ಮ ಸಂವಿಧಾನ ಬದ್ಧ ಹಕ್ಕುಗಳಿಗಾಗಿ ಬೇಡಿಕೆ ಇಟ್ಟಾಗ ಆರ್ಥಿಕ ಶಿಸ್ತು/ ಆರ್ಥಿಕ ಹೊರೆಗಳ ಕುರಿತು ಆಡಳಿತ ಪಕ್ಷದ ಶಾಸಕ ಹಾಗೂ ಮಂತ್ರಿಗಳು ವ್ಯಕ್ತಪಡಿಸುವ ಕಾಳಜಿ ತಮ್ಮ ಸಂಬಳ ಹಾಗೂ ಭತ್ಯೆಗಳ ಏರಿಕೆಯಲ್ಲಿ ಮರೆತು ಬಿಡುತ್ತಾರೆ.
ತಮ್ಮ ಸಂಬಳ ಹಾಗೂ ಭತ್ಯೆಗಳ ಏರಿಕೆಯು ಆರ್ಥಿಕ ಶಿಸ್ತಿನ ಚೌಕಟ್ಟಿನಿಂದ ಹೊರಗಿಟ್ಟಿರುವ ರಾಜಕಾರಣಿಗಳ ದ್ವಿಮುಖ ನೀತಿ ಆತಂಕ ಉಂಟುಮಾಡುತ್ತದೆ. ಇವರ ಸಂಬಳಕ್ಕಿಂತ ಇವರು ಪಡೆಯುವ ಭತ್ಯೆ ಮತ್ತು ಇತರ ಸೌಲಭ್ಯಗಳು ಅತ್ಯಂತ ಹೆಚ್ಚಿನ ಭಯವನ್ನುಂಟುಮಾಡುತ್ತವೆ. ಜನಪ್ರತಿನಿಧಿಗಳು ತಮ್ಮನ್ನು ತಾವು ಜನಸೇವಕರು ಎಂದು ಕರೆದುಕೊಳ್ಳುತ್ತಾರೆ. ಇವರು ತಮ್ಮ ಕ್ಷೇತ್ರದಲ್ಲಿ ಮಾಡುವ ಪ್ರವಾಸವೂ ಕೂಡ ಸರಕಾರಿ ಖರ್ಚಿನಲ್ಲೆ ಆಗಬೇಕು. ಜನಪ್ರತಿನಿಧಿಗಳ ಸಂಬಳ ಹಾಗೂ ಭತ್ಯೆ ಹೆಚ್ಚಳ ಕಾಯ್ದೆ ಮಾತ್ರ ಈ ದೇಶದಲ್ಲಿ ಪೂರ್ಣ ಪ್ರಮಾಣದಲ್ಲಿ ಯಶಸ್ಸು ಕಂಡಿದೆ. ನಮ್ಮ ಜನಪ್ರತಿನಿಧಿಗಳು ಕೆಲವು ಖಾಸಗಿ ಕಾರ್ಯಕ್ರಮಗಳಿದ್ದಾಗ ತಮ್ಮ ಕ್ಷೇತ್ರದಲ್ಲಿ ಒಂದು ಅಧಿಕೃತ ಸರಕಾರಿ ಕಾರ್ಯಕ್ರಮವನ್ನು ನಿಯೋಜಿಸಿಕೊಂಡು ಪ್ರವಾಸ ಹೊರಡುತ್ತಾರೆ. ಇಂದಿನ ಖಾಸಗಿ ದೂರಸಂಪರ್ಕ ಸಂಸ್ಥೆಗಳ ಸ್ಪರ್ಧಾತ್ಮಕ ಕಾಲದಲ್ಲಿ ಸೆಲ್ ಫೋನ್ಗಳಿಗೆ ಗರಿಷ್ಟ ೩೦೦೦-೫೦೦೦ ರೂ. ರಿಚಾರ್ಜ್ ಗೆˌ ಒಂದು ವರ್ಷವಿಡಿ ಅನಿಯಮಿತವಾಗಿ ಮಾತನಾಡಬಹುದು ಮತ್ತು ಅಂತರ್ಜಾಲ್ ಸಂಪರ್ಕ ಹೊಂದಬಹುದುˌ ಆದರೆ ಶಾಸಕ/ಸಂಸದನಿಗೆ ಸಾವಿರಾರು ರೂಪಾಯಿಗಳ ದೂರವಾಣಿ ಭತ್ಯೆ ನೀಡುವುದು ನಿಜವಾಗಿಯೂ ಸೋಜಿಗದ ಸಂಗತಿ.
ಇದು ಬಡವರ ತೆರಿಗೆ ಹಣ ಹಾಗೂ ಸರಕಾರಿ ಖಜಾನೆಯ ಹಗಲು ದರೋಡೆ ಎನ್ನದೆ ಬೇರೆ ಹೇಗೆ ವ್ಯಾಖ್ಯಾನಿಸಬಹುದು? ನೌಕರರ ಅಥವಾ ಕಾರ್ಮಿಕರ ಸಂಬಳ ಏರಿಕೆಗೆ ಲೆಕ್ಕಾಚಾರ ಹಾಕುವ ನಮ್ಮ ಅರ್ಥ ವ್ಯವಸ್ಥೆ ಜನಪ್ರತಿನಿಧಿಗಳ ಸಂಬಳ ಹಾಗೂ ಭತ್ಯೆಗಳ ಏರಿಕೆಯಲ್ಲಿ ಜಾಣ ಮೌನ ತಾಳುತ್ತದೆ. ಇದರ ಜೊತೆಗೆ ಶಾಸಕ/ಮಂತ್ರಿಗಳಿಗೆ ರಾಜಧಾನಿಯಲ್ಲಿರುವ ಶಾಸಕರ ಭವನದಲ್ಲಿ ಐಷಾರಾಮಿ ವಸತಿ ಸೌಲಭ್ಯವಿರುತ್ತದೆ. ಸಾಲದಕ್ಕೆ ವಿಧಾನ ಸೌಧˌ ಸಂಸತ್ ಭವನ ಅಥವಾ ವಸತಿ ಸಮುಚ್ಛಯದ ಉಪಹಾರಗೃಹಗಳಲ್ಲಿ ರಿಯಾಯತಿ ದರದಲ್ಲಿ ಊಟˌ ತಿಂಡಿಯ ಸೌಲಭ್ಯವಿರುತ್ತದೆ. ವಿಧಾನ ಮಂಡಳದ ಅಧಿವೇಷನದಲ್ಲಿ ಹಾಜರಿ ಹಾಕಿದರೆˌ ಸದನದಲ್ಲಿ ಪ್ರಶ್ನೆ ಕೇಳಿದರೆ ಪ್ರತ್ಯೇಕ ಭತ್ಯೆಯಿದೆ. ಒಟ್ಟಾರೆ ನಮ್ಮ ಜನಪ್ರತಿನಿಧಿಗಳು ಎಲ್ಲೇ ಇರಲಿ ಇವರ ಅಂಗಿಗೆ ಕಿಸೆಯ ಅಗತ್ಯವಿರುವುದಿಲ್ಲ. ನಾಲ್ಕಾರು ವರ್ಷಗಳ ಹಿಂದೆ ರಾಜ್ಯದ ಸಂಸದನೊಬ್ಬ ತನಗೆ ಸಂಬಳ ಸಾಕಾಗುತ್ತಿಲ್ಲವೆಂದು ಸಾರ್ವಜನಿಕವಾಗಿ ಬಾಯಿ ಬಡಿದುಕೊಂಡಿದ್ದ. ಅದಕ್ಕೆ ಇನ್ನೊಬ್ಬ ಅದೇ ಪಕ್ಷದ ಯುವ ಸಂಸದ ಧನಿಗೂಡಿಸುತ್ತಾ ತನಗೆ ಕಾಣಲು ಬರುವ ಕ್ಷೇತ್ರದ ಜನರಿಗೆ ಚಹ ಕುಡಿಸಲು ದಿನಕ್ಕೆ ಸಾವಿರಾರು ರೂಪಾಯಿ ಖರ್ಚಾಗುತ್ತದೆ ಎಂದು ಅಳಲು ತೋಡಿಕೊಂಡಿದ್ದ. ಶಾಸಕ/ಸಂಸದರನ್ನು ಕಾಣಲು ಬರುವ ಆಯಾ ಕ್ಷೇತ್ರದ ಪ್ರಜೆಗಳ ಚಹ-ಪಾಣಿ ಖರ್ಚು ಕೂಡ ಸರಕಾರವೇ ನೋಡಿಕೊಳ್ಳಬೇಕು ಎನ್ನುವುದೇ ಇವರ ಇರಾದೆಯಾಗಿದೆ ಎನ್ನುವುದು ಇವರ ಮಾತಿನ ಅರ್ಥವೆ?
ಸಾಲದಕ್ಕೆ ಈ ಈರ್ವರು ತಮ್ಮನ್ನು ತಾವು ದೇಶಭಕ್ತರುˌ ಸಂಸ್ಕೃತಿ ರಕ್ಷಕರುˌ ರಾಷ್ಟ್ರೀಯವಾದಿಗಳು ಮತ್ತು ಧರ್ಮರಕ್ಷರರೆಂದು ಕರೆದುಕೊಳ್ಳುವ ಪಕ್ಷಕ್ಕೆ ಸೇರಿದವರು ಮತ್ತು ತಮ್ಮ ಮಾತುˌ ಭಾಷಣ ಹಾಗೂ ಲೇಖನಗಳ ಮೂಲಕ ನಾಡಿನ ಯುವ ಪೀಳಿಗೆಯನ್ನು ಕೋಮುವಾದದ ದಳ್ಳುರಿಗೆ ದೂಡಿದವರು. ಇವತ್ತಿನ ಬಹುತೇಕ ಜನಪ್ರತಿನಿಧಿಗಳಿಗೆ ಒಂದಕ್ಕಿಂತ ಹೆಚ್ಚು ಸ್ವಂತದ ಮನೆಗಳುˌ ಸೈಟುಗಳು ಇವೆ. ಅಷ್ಟಿದ್ದಾಗ್ಯೂ ಇವರು ಸಬ್ಸಿಡಿ ದರದಲ್ಲಿ ಸರಕಾರಿ ಸೈಟುಗಳನ್ನು ಪಡೆಯುತ್ತಾರೆ. ಮತ್ತೆ ಕೆಲವರು ಹೆಂಡತಿಯನ್ನು ತಂಗಿ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಸೈಟು ಪಡೆವರಿದ್ದಾರೆನ್ನುವ ಆರೋಪಗಳೂ ಇವೆ. ಜನಪ್ರತಿನಿಧಿಯೊಬ್ಬ ಒಂದು ಅವಧಿಗೆ ಶಾಸಕ ಅಥವಾ ಸಂಸದನಾದರೆ ಸಾಕು ಮೂರ್ನಾಲ್ಕು ತಲೆಮಾರು ಕೂತು ತಿನ್ನುವಷ್ಟು ಆಸ್ತಿ ಗುಡ್ಡೆ ಹಾಕುತ್ತಾನೆ. ಇವರನ್ನು ಆಯ್ಕೆ ಮಾಡಿನ ಮತದಾರನ ಸಮಸ್ಯೆಗಳು ಎಲ್ಲಿದ್ದವೊ ಅಲ್ಲೇ ಇರುತ್ತವೆ. ಇಂದಿನ ಶಾಸಕ/ಸಂಸದರ ಚಮಚಾಗಳೆ ಸಾವಿರಾರು ಕೋಟಿ ಮೌಲ್ಯದ ಆಸ್ತಿ ಮಾಡಿಕೊಂಡ ಉದಾಹರಣೆಗಳೂ ಕಾಣಸಿಗುತ್ತವೆ. ಮುಂದೆ ಈ ಚಮಚಾಗಳು ಯಾವುದಾದರೂ ಸುರಕ್ಷಿತ ಕ್ಷೇತ್ರಗಳನ್ನು ಹುಡುಗುತ್ತಾ ಶಾಸಕ/ಸಂಸದರಾಗಲು ಹೊಂಚು ಹಾಕುತ್ತಿರುತ್ತಾರೆ.
ಕರ್ನಾಟಕದ ಶಾಸಕರ ಸಂಪತ್ತಿನಲ್ಲಿ ೨೦೦೮ ರಿಂದ ಭಾರಿ ಪ್ರಮಾಣದ ಏರಿಕೆ ದಾಖಲಾಗಿದೆ. ದೇಶದ ಶ್ರೀಮಂತ ಶಾಸಕರ ಪಟ್ಟಿಯಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ. ೨೨೪ ಶಾಸಕರು ಮತ್ತು ೭೫ ಮೇಲ್ಮನೆ ಸದಸ್ಯರಲ್ಲಿ ಅರ್ಧಕ್ಕಿಂತ ಹೆಚ್ಚು ಶಾಸಕರು ಸಾವಿರಾರು ಕೋಟಿ ಮೌಲ್ಯದ ಸ್ಥಿರ ಹಾಗೂ ಚರಾಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದಾರೆ. ಅಘೋಸಿತ ಬೇನಾಮಿ ಆಸ್ತಿ ಇನ್ನೆಷ್ಟೊ? ಶಾಸಕರು ಕೋಟ್ಯಾಧಿಪತಿಗಳಾಗಬಾರದುಎನ್ನಲಾಗದು. ಏಕೆಂದರೆ ಅವರಿಗೆ ಅವರದೇಯಾದ ಸ್ವಂತದ ಉದ್ಯಮ/ವ್ಯಾಪಾರ/ವ್ಯವಹಾರಗಳಿರುತ್ತವೆ. ಆ ವ್ಯವಹಾರಗಳ ರಕ್ಷಣೆಗೆ ಅಧಿಕಾರ ಹೊಂದುವುದು ಅಥವಾ ರಾಜಕಾರಣ ಅವರಿಗೆ ಅನಿವಾರ್ಯ. ಆ ಕಾರಣಕ್ಕಾಗಿ ಅಂಥವರಿಗೆ ರಾಜಕಾರಣವು ಕೇವಲ ಉಪವೃತ್ತಿಯಾಗಿರುತ್ತದೆ. ರಾಜಕಾರಣಿಗಳಲ್ಲಿ ಹಲವರು ರಿಯಲ್ ಎಸ್ಟೇಟ್ˌ ಹೋಟೆಲ್ ಉದ್ಯಮˌ ಗಣಿಗಾರಿಕೆˌ ಅಬಕಾರಿ ವ್ಯವಹಾರˌ ಬಾರ್ ಹಾಗೂ ರೆಸ್ಟಾರೆಂಟ್ ವ್ಯವಹಾರ ಹೊಂದಿದ್ದರೆ ಇನ್ನೂ ಕೆಲವರು ಶಿಕ್ಷಣೋದ್ಯಮಿಗಳು. ತಮ್ಮನ್ನು ತಾವು ಜನಸೇವಕರೆಂದು ಕರೆದುಕೊಳ್ಳುವ ಇವರ ಜನಸೇವೆಗೆ ಜನಸಾಮಾನ್ಯರ ತೆರಿಗೆ ಹಣವೆ ಖರ್ಚಾಗುತ್ತಿರುವುದು ದುರಂತದ ಸಂಗತಿ. ಹಾಗೆಂದು ಇವರಿಗೆ ಸಂಬಳ/ಭತ್ಯೆ ಇರಬಾರದೆಂದಲ್ಲ. ಹಿಂದೆ ಅನೇಕ ಬಡವರು ಶಾಸಕರಾಗುತ್ತಿದ್ದರು. ಆ ಆದರ್ಶವಂತರ ಸಲುವಾಗಿ ಸಂಬಳ ಹಾಗೂ ಭತ್ಯೆಯ ಸೌಲಭ್ಯ ನೀಡಲಾಗುತ್ತಿತ್ತು. ಈಗ ವಾತಾವರಣ ಹಾಗಿಲ್ಲ.
ಈಗ ಶಾಸಕ ಅಥವಾ ಸಂಸದನಾಗಬೇಕಾದರೆ ಸಾವಿರಾರು ಕೋಟಿ ಖರ್ಚಾಗುತ್ತದೆ. ಅಕಸ್ಮಾತಾಗಿ ಬಡವರು ಶಾಸಕ ಅಥವಾ ಸಂಸದರಾದರೆ ಅವರಿಗೆ ಸಂಬಳ ಮತ್ತು ಭತ್ಯೆಯ ಅಗತ್ಯ ಖಂಡಿತ ಇರುತ್ತದೆ. ಕನಿಷ್ಟ ಶ್ರೀಮಂತ ಶಾಸಕರಾದರೂ ಸಂಬಳ ಹಾಗೂ ಭತ್ಯ ಏರಿಕೆಯನ್ನು ವಿರೋಧಿಸಬೇಕಿತ್ತು ಎನ್ನುವ ನಮ್ಮಂತವರ ನಿರೀಕ್ಷೆಯೆ ತಪ್ಪು. ವಿರೋಧಿಸುವುದು ಹೋಗಲಿ ಶ್ರೀಮಂತ ಹಿನ್ನೆಲೆಯ ಶಾಸಕರು ತಾವು ಪಡೆಯುವ ಸಂಬಳ ಹಾಗೂ ಭತ್ಯೆಯನ್ನು ವ್ಯಕ್ತಿಗತ ನೆಲೆಯಲ್ಲಿ ನಿರಾಕರಿಸಬಹುದಿತ್ತು. ಬಹು ಹಿಂದೆ ರೋಣ ಕ್ಷೇತ್ರದ ಶಾಸಕರಾಗಿದ್ದ ಲಿಂಗೈಕ್ಯ ನೀಲಗಂಗಯ್ಯ ಪೂಜಾರ್ ಅವರು ಶಾಸಕರ ಪಿಂಚಣಿಯನ್ನು ನಿರಾಕರಿಸಿದ್ದರು. ನೀಲಗಂಗಯ್ಯ ಪೂಜಾರ್ ಮತ್ತು ಶಾಂತವೇರಿ ಗೋಪಾಲಗೌಡರಂತ ಪರಿಶುದ್ಧ ಜನಪ್ರತಿನಿಧಗಳ ಕಾಲ ಮುಗಿದುಹೋಗಿದೆ. ಈಗೇನಿದ್ದರೂ ರಾಜಕೀಯವನ್ನು ಉದ್ಯಮವಾಗಿಸಿಕೊಂಡವರು ಅಥವಾ ತಮ್ಮ ಉದ್ಯಮ ರಕ್ಷಣೆಗೆ ರಾಜಕೀಯವನ್ನು ಗುಡಾಣವಾಗಿಸಿಕೊಂಡವರೆ ಇಂದಿನ ಬಹುತೇಕ ಜನಪ್ರತಿನಿಧಿಗಳು ಎನ್ನುವುದು ನಾವು ಮರೆಯಬಾರದು.
ರಾಷ್ಟ್ರಭಕ್ತರುˌ ಧರ್ಮ ರಕ್ಷಕರು ಎಂದು ಹೇಳಿಕೊಳ್ಳುವ ಪಕ್ಷದವರಾದರೂ ಸಂಬಳ ಹಾಗೂ ಭತ್ಯೆಯನ್ನು ನಿರಾಕರಿಸಬಹುದಿತ್ತು. ಆದರೆ ದೇಶಭಕ್ತಿ ಹಾಗೂ ಧರ್ಮ ರಕ್ಷಣೆಯೆ ಇವರ ಮುಖ್ಯ ಉದ್ಯಮವಾಗಿರುವಾಗ ಅವರು ಹೇಗೆ ನಿರಾಕರಿಸಿಯಾರು? ಇನ್ನು ಜೆಪಿ ಅನುಯಾಯಿಗಳುˌ ಸಮಾಜವಾದಿಗಳು ಇವರಾದರೂ ಸಂಬಳ ಹಾಗೂ ಭತ್ಯೆಯನ್ನು ನಿರಾಕರಿಸಿ ಮೇಲ್ಪಂಕ್ತಿ ಹಾಕಬಲ್ಲರೆ ಎಂದರೆ ಆ ನಿರಿಕ್ಷೇಯೂ ಸಾಧ್ಯವಿಲ್ಲ. ಬುದ್ಧ ˌ ಬಸವ ಹಾಗೂ ಅಂಬೇಡ್ಕರ್ ಅನುಯಾಯಿಗಳು ಎಂದು ಹೇಳಿಕೊಳ್ಳುವ ರಾಜಕಾರಣಿಗಳಾದರೂ ತಮಗೆ ಸಿಗುವ ಸಂಬಳ ಹಾಗೂ ಭತ್ಯೆಗಳನ್ನು ನಿರಾಕರಿಸಬಹುದಿತ್ತು. ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ಭಾರತದಲ್ಲಿ ಕನಿಷ್ಠ ಒಬ್ಬ ಜನಪ್ರತಿನಿಧಿಯೂ ಕೂಡ ನನಗೆ ಬಡವರ ತೆರಿಗೆ ಹಣದಲ್ಲಿ ನೀಡಲಾಗುವ ಸಂಬಳ ಹಾಗೂ ಭತ್ಯಗಳು ಬೇಡ ಎನ್ನುವ ದೃಢಸಂಕಲ್ಪ ಮಾಡಿದವರು ಸಿಗದಿರುವುದು ಇದು ಇಂದಿನ ವರ್ತಮಾನದ ರಾಜಕಾರಣದ ದುರಂತವೆಂದೇ ಹೇಳಬೇಕಾಗಿದೆ.