ಪ್ರಚಲಿತ ಸಂಗತಿ

ಸರಕಾರ ಜಾತಿ ಗಣತಿಗೆ ಒಂದು ಟಿಪ್ಪಣಿ

ಚಿಂತನೆಗಳಿಗಾಗಿ

Spread the love

 

ಸರಕಾರದ ಜಾತಿ ಗಣತಿ

ಒಂದು ಟಿಪ್ಪಣಿ

ಹನ್ನೆರಡನೇಯ ಶತಮಾನದಲ್ಲಿ ಶ್ರೀ ಬಸವೇಶ್ವರರು ಮತ್ತು ಅವರೊಂದಿಗೆ ಇದ್ದ ಶರಣರು ಪ್ರತಿಪಾದಿಸಿದ ಸಮಾನತೆ, ಕಾಯಕದ ಮಹತ್ವ, ಮೂಢ ನಂಬಿಕೆಗಳ ನಿರ್ಮೂಲನ, ಅಸ್ಪೃಶ್ಯತೆಯ ವಿರೋಧ, ಮತ್ತು ಹೆಣ್ಣು ಮಕ್ಕಳಿಗೆ ಸಮಾನ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಅಧಿಕಾರದ ಉದಾತ್ತ ತತ್ವಗಳಿಂದ ಪ್ರಭಾವಿತರಾಗಿ ಸನಾತನ ಧರ್ಮದ ಎಲ್ಲಾ ನಾಲ್ಕು ವರ್ಣಗಳಿಗೆ, ಸೇರಿದ ಜನರು ಮತ್ತು ಜೈನ ಧರ್ಮಕ್ಕೆ ಸೇರಿದ ಜನರು ಲಿಂಗಾಯತ ಅಥವಾ ವೀರಶೈವ ಧರ್ಮಕ್ಕೆ ಪರಿವರ್ತಿತರಾದರು. ಅವರೇ ಈಗಿನ ವೀರಶೈವರು ಅಥವಾ ಲಿಂಗಾಯತರು.

2. ಲಿಂಗಾಯತ ಧರ್ಮ, ಆಚಾರ ಮತ್ತು ವಿಚಾರಗಳನ್ನು ಪಾಲಿಸುವವರು, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ್ದಾರೆ. ಇವರಲ್ಲಿ ಕೆಲವರು ಅತ್ಯಂತ ಹಿಂದುಳಿದವರು, ಕೆಲವರು ಅತಿ ಹಿಂದುಳಿದವರು ಮತ್ತು ಇತರರು ಹಿಂದುಳಿದವರಾಗಿದ್ದಾರೆ. ಪರಿಶಿಷ್ಟ ಜಾತಿಗಳಲ್ಲಿ ಬಹಳಷ್ಟು ಜನರು ಲಿಂಗಾಯತ ಧರ್ಮ, ಆಚಾರ ಮತ್ತು ವಿಚಾರಗಳನ್ನು ಅನುಸರಿಸುತ್ತಾರೆ. ಆದರೆ ಅವರು 1950 ರಿಂದ ಪರಿಶಿಷ್ಟ ಜಾತಿಗಳಿಗೆ ಸೇರಿರುವುದರಿಂದ, ಮತ್ತು ಈ ವರದಿ ಹಿಂದುಳಿದ ವರ್ಗಗಳ ಬಗ್ಗೆ ಇರುವುದರಿಂದ ಪರಿಶಿಷ್ಟ ಜಾತಿಗೆ ಸಂಬಂಧ ಪಟ್ಟ ವಿಷಯಗಳ ಬಗ್ಗೆ ಪ್ರಸ್ತಾಪಿಸುವುದು ಈ ಸಂದರ್ಭದಲ್ಲಿ ಉಚಿತವಲ್ಲ.

3. 1984 ರಲ್ಲಿ ನೀಡಿದ ನ್ಯಾಯಮೂರ್ತಿ ಶ್ರೀ ಚಿನ್ನಪ್ಪ ರೆಡ್ಡಿ ಆಯೋಗದ ವರದಿಯ ಪ್ರಕಾರ ಲಿಂಗಾಯಕರ ಜನಸಂಖ್ಯೆ ಆಗ 61 ಲಕ್ಷ 42000 ಆಗಿತ್ತು. ಈಗ ಸಿದ್ದ ಪಡಿಸಿದ ವರದಿಯ ಪ್ರಕಾರ ಅಂದರೆ ಶ್ರೀ ಜಯಪ್ರಕಾಶ ಹೆಗಡೆಯವರ ಆಯೋಗದ ವರದಿಯಲ್ಲಿರುವ ಅಂಕಿ ಅಂಶಗಳ ಪ್ರಕಾರ ಲಿಂಗಾಯತ ಮತ್ತು ಅದರ ಉಪಜಾತಿಗಳ ಒಟ್ಟು ಸಂಖ್ಯೆ ಪ್ರವರ್ಗ III B ರಲ್ಲಿ ಇರುವಂತೆ 66 ಲಕ್ಷ 35 ಸಾವಿರ 233 ಆಗಿರುತ್ತದೆ. ಲಿಂಗಾಯತ ಸಮಾಜದ ಜನನ ಪ್ರಮಾಣ (Birth Rate ಅಥವಾ Fertility Rate) ನ್ನು ಕೇವಲ ವಾರ್ಷಿಕ ಕೇವಲ ಎರಡು (2%) ಎಂದು ಪರಿಗಣಿಸಿದರೂ. ಆದರಿಂದ ಶ್ರೀ ಜಯಪ್ರಕಾಶ ಹೆಗಡೆಯವರ ಆಯೋಗ ನೀಡಿರುವ ಅಂಕಿ-ಸಂಖ್ಯೆಗಳು ಸತ್ಯಕ್ಕೆ ದೂರವಾಗಿವೆ. ತಮಗೆ ತಿಳಿದಂತೆ ಈ ಅವಧಿಯಲ್ಲಿ ಯಾವುದೇ ಮಹಾಮಾರಿ ರೋಗಗಳು, ಭೀಕರ ಕ್ಷಾಮ ಅಥವಾ ಲಿಂಗಾಯತರ ಸಾಮೂಹಿಕ ನರಹತ್ಯೆ ಇತ್ಯಾದಿ ದುರ್ಘಟನೆಗಳು ನಡೆದಿಲ್ಲ. ಒಟ್ಟು ರಾಜ್ಯದ ಜನಸಂಖ್ಯೆ ಸರಾಸರಿ ವಾರ್ಷಿಕವಾಗಿ 2% ಅಂಶ ಬೆಳೆದಿದೆ. ಆದ್ದರಿಂದ ಮತ್ತು ಅದರಂತೆ ಲಿಂಗಾಯತ ಸಮಾಜದ ಜನಸಂಖ್ಯೆ ಅದೆ ಗತಿಯಲ್ಲಿ ಬೆಳೆದು ಇವತ್ತು ಒಂದು ಕೋಟಿ 10 ಲಕ್ಷ ಆಗಬೇಕಾಗಿತ್ತು.

4. ಆಯೋಗವು ರಾಜ್ಯದ ಜನಸಂಖ್ಯೆಯನ್ನು ಮುಖ್ಯವಾಗಿ ವೃತ್ತಿಯ ಆಧಾರದ ಮೇಲೆ ವರ್ಗಿಕರಣ ಮಾಡಿದೆ. ಈ ಹಿಂದಿನ ಆಯೋಗಗಳು ಸಹಿತ ಇದೇ ಮಾನದಂಡವನ್ನು ಅನುಸರಿಸಿದೆ. ಒಂದು ಗುಂಪಿನ ವೃತ್ತಿ ಅದು ಉತ್ತಮ ಅಥವಾ ಕೀಳು ವೃತ್ತಿಯ ಎಂಬ ಪರಿಗಣನೆಯ ಆಧಾರದ ಮೇಲೆ ಆ ಗುಂಪಿನ ಸಾಮಾಜಿಕ ಸ್ಥಾನಮಾನ ಅವಲಂಬಿತವಾಗಿದೆ. ವರದಿಯ ಪಟ್ಟಿಯಲ್ಲಿರುವ ತಕ್ತೇಗಳನ್ನು ಪರಿಶೀಲಿಸಿದರೆ ಸಮಾನ ವ್ಯಕ್ತಿಯ ಗುಂಪುಗಳನ್ನು ಬೇರೆ ಬೇರೆ ಪ್ರವರ್ಗಗಗಳಲ್ಲಿ ಅಂದರೆ ಅತ್ಯಂತ ಹಿಂದುಳಿದ, ಅತಿ ಹಿಂದುಳಿದ ಮತ್ತು ಹಿಂದುಳಿದ ಪ್ರವರ್ಗಗಳಲ್ಲಿ ಸೇರಿಸಲಾಗಿದೆ. ಯಾವುದೇ ಒಂದು ವೃತ್ತಿ ಗುಂಪಿನವರ ಹಿಂದು ಧರ್ಮದ ವೃತ್ತಿಗೆ ಸೇರಿದವರಾಗಿದ್ದಾರೆ. ಅವರನ್ನು ಅತ್ಯಂತ ಹಿಂದುಳಿದ ಮತ್ತು ಅತಿ ಹಿಂದುಳಿದ ಪ್ರದರ್ಶನಗಳಿಗೆ ಸೇರಿಸಲಾಗಿದೆ ಆದರೆ ಲಿಂಗಾಯತ ಸಮಾಜಕ್ಕೆ ಸೇರಿದ ಆದೇ ವೃತ್ತಿ ಗುಂಪುಗಳನ್ನು ಹಿಂದುಳಿದ ವರ್ಗದಲ್ಲಿ ಸೇರಿಸಲಾಗಿದೆ. ಇದು ಆಯೋಗ ಮಾಡಿರುವ ಬಲು ದೊಡ್ಡ ತಪ್ಪು. ಉದಾಹರೆಣೆಗೆ ಲಿಂಗಾಯತ, ಕ್ಷೌರಿಕ ವರ್ಗ ಮತ್ತು ಹಿಂದು ಕ್ಷೌರಿಕ ವರ್ಗ. ಕ್ಷೌರಿಕ ವರ್ಗದವರು ಹಿಂದು ಆಗಿದ್ದರೂ, ಲಿಂಗಾಯತ ಆಗಿದ್ದರೂ ಅವರ ಸಾಮಾಜಿಕ ಸ್ಥಾನಮಾನ ಒಂದೇ ಎಂಬುವುದು ಸರ್ವ ಸಮ್ಮತ ವಿಚಾರ. ಅದೆ ರೀತಿ ಹಿಂದು ಕ್ಷೌರಿಕರ ಹತ್ತಿರ ಕ್ಷೌರ ಮಾಡಿಸಿಕೊಳ್ಳಲು ಹೋದ ವ್ಯಕ್ತಿ ಒಂದು ಕ್ಷೌರಕ್ಕೆ 5 ರೂಪಾಯಿ ಕೊಟ್ಟರೆ, ಲಿಂಗಾಯತ ಕ್ಷೌರಿಕರ ಹತ್ತಿರ ಕ್ಷೌರ ಮಾಡಿಸಿಕೊಳ್ಳಲು ಹೋಗುವ ವ್ಯಕ್ತಿ ಒಂದು ಕ್ಷೌರಕ್ಕೆ 10 ರೂಪಾಯಿ ಕೊಡುವುದಿಲ್ಲ . ಆದ್ದರಿಂದ ಕ್ಷೌರಿಕ ವ್ಯಕ್ತಿ ಮಾಡುವ ರಾಜ್ಯದ ಎಲ್ಲಾ ವ್ಯಕ್ತಿಗಳು ಒಂದೇ ಪ್ರವರ್ಗದಲ್ಲಿ ಇರಬೇಕಾದದ್ದು ನ್ಯಾಯ ಸಮ್ಮತ, ಇದು ಎಲ್ಲರೂ ಒಪ್ಪ ಬೇಕಾದ ವಿಷಯ, ಹಿಂದು ಕ್ಷೌರಿಕರನ್ನು 1B ಪ್ರವರ್ಗದಲ್ಲಿ ಮತ್ತು ಲಿಂಗಾಯತ ಕ್ಷೌರಿಕರನ್ನು III B ಪ್ರವರ್ಗದಲ್ಲಿ ಸೇರಿಸಲಾಗಿದೆ. ಇದಕ್ಕಿಂತ ಹೆಚ್ಚಿನ ಅನ್ಯಾಯ ಇನ್ನೊಂದಿಲ್ಲ. ಇದೇ ತರಹದ ಅನ್ಯಾಯ ಲಿಂಗಾಯತ ಸಮಾಜಕ್ಕೆ ಸೇರಿದ ಕಮ್ಮಾರ, ಕುಂಬಾರ, ಸಿಂಪಿ, ಸಿವಸಿಂಪಿ, ಮಡಿವಾಳ, ಬಡಿಗ, ಹೂಗಾರ, ಉಪ್ಪಾರ ಮತ್ತು ಕುರುಬ ಇತ್ಯಾದಿ ವೃತ್ತಿಗಳ ಬಗ್ಗೆ ಆಗಿದೆ. ಇದನ್ನು ಸರಿಪಡಿಸದಿದ್ದರೆ ಘೋರ ಅನ್ಯಾಯ ಆಗುತ್ತದೆ. ಈ ರೀತಿ ಅನ್ಯಾಯ ಆಗಿರುವ ವ್ಯಕ್ತಿ ಗುಂಪುಗಳ ಪಟ್ಟಿಯನ್ನು ಈ ಟಿಪ್ಪಣಿಗೆ ಪ್ರತ್ಯೇಕವಾಗಿ ಅನುಬಂಧ A ಎಂದು ಗುರುತಿಸಿ ಲಗತ್ತಿಸಲಾಗಿದೆ.
5. ಕೆಲವು ಲಿಂಗಾಯತ ಸಮಾಜದ ಭಾಗಗಳ ಜನಸಂಖ್ಯೆಯನ್ನು ನಂಬಲು ಅಸಾಧ್ಯವಾದ ಕಡಿಮೆ ಸಂಖ್ಯೆಗಳಲ್ಲಿ ಆಯೋಗದ ವರದಿಯಲ್ಲಿ ನಮೂದಿಸಲಾಗಿದೆ.

ಉದಾಹರಣೆಗಳು.
1. (bu) D 0304 Page 161 ಲಿಂಗಾಯತ / ಲಿಂಗಾಯತ – ಗೌಡ/ ಗೌಡ ಲಿಂಗಾಯತ 22.
(22 Persons only in the State) ಈ ಉಪಜಾತಿಯ ಜನ ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ತುಮಕೂರು, ಕೋಲಾರ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದು, ಒಂದೇ ಗೌಡ ಲಿಂಗಾಯತ ಕುಟುಂಬಗಳಲ್ಲಿ ೨೫ ಕ್ಕೂ ಹೆಚ್ಚು ಜನ ಸದಸ್ಯರಿರುವ ಕುಟುಂಬಗಳ ಬಗ್ಗೆ ನಮಗೆ ಮಾಹಿತಿ ಇದೆ.

2. (cd) A 0941 ಮತ್ತು (ce) A0942 162. ಇಲ್ಲಿ ಎರಡು ಕೋಡಗಳಲ್ಲಿ ಒಟ್ಟು ನೊಳಂಬ ಅಥವಾ ನೊಣಬ ಲಿಂಗಾಯತರ ಸಂಖ್ಯೆಯನ್ನು ಕ್ರಮವಾಗಿ 1, 48,894 ಮತ್ತು 12,274 ಎಂದು ನಮೂದಿಸಲಾಗಿದೆ ಈ ಗುಂಪಿಗೆ ಲಿಂಗಾಯತರು ಚಿಕ್ಕಮಂಗಳೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಮತ್ತು ಹಾವೇರಿ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ಇವರ ಒಟ್ಟು ಸಂಖ್ಯೆ ಕೇವಲ 1,61,000 ಅಂದರೆ ನಂಬಲು ಅಸಾಧ್ಯ.

3, (b2) A 1070 – ಪುಟ 161 – ಸಾದರ ಲಿಂಗಾಯತ.
ಈ ಗುಂಪಿನ ಲಿಂಗಾಯತರು ಚಿಕ್ಕಮಂಗಳೂರು, ಚಿತ್ರದುರ್ಗ, ದಾವಣಗೆರೆ, ತುಮಕೂರು, ಹಾವೇರಿ, ಶಿವಮೊಗ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಇವರ ಜನಸಂಖ್ಯೆ ಕೇವಲ 67903 ಎಂದು ವರದಿ ಮಾಡಿದ್ದಾರೆ. ಇದು ನಂಬಲು ಅಸಾಧ್ಯ.

4. (co) A 1209 ಮತ್ತು (cp) 1230
ತಮ್ಮಡಿಗರು ಮತ್ತು ತಮ್ಮಡಿ. ಇವರು 14 ನೇಯ ಶತಮಾನದಲ್ಲಿ ಶ್ರೀ ಮಲೇ ಮಹದೇಶ್ವರ ಪ್ರಭಾವಕ್ಕೆ ಒಳಗಾಗಿ ಲಿಂಗಾಯತ ಧರ್ಮ ಸ್ವೀಕಾರ ಮಾಡಿದವರಾಗಿದ್ದಾರೆ. ಇವರ ಮೂಲತಃ ಬೇಡರು. ಇವರ ಜನಸಂಖ್ಯೆಯನ್ನು ಕೇವಲ 884+727 ಅಂದರೆ 1611 ಎಂದ ವರದಿ ಮಾಡಲಾಗಿದೆ. ಕೇವಲ ಪೊನ್ನಾಚಿ ಗ್ರಾಮ ಒಂದರಲ್ಲಿಯೇ ಇವರ ಜನಸಂಖ್ಯೆ 5000 ಕ್ಕಿಂತ ಹೆಚ್ಚಿದೆ. ಇವರನ್ನು ನ್ಯಾಯಯುತವಾಗಿ ಪ್ರವರ್ಗ 1 A ದಲ್ಲಿ ಸೇರಿಸಬೇಕಿತ್ತು. ಆದರೆ ಇವರನ್ನು III B ಗೆ ಸೇರಿಸಲಾಗಿದೆ. ನೆರೆಯ ತಮಿಳುನಾಡಿನಲ್ಲಿ ಇವರು ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಇದ್ದಾರೆ.

5. (ci) A 1038 ಪುಟ 162
ರಡ್ಡಿ ಲಿಂಗಾಯತರು. ಇವರು ಇಡೀ ಹೈದರಾಬಾದ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಮತ್ತು ಮುಂಬೈ ಕರ್ನಾಟಕದ ಆರು ಜಿಲ್ಲೆಗಳಲ್ಲಿ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ ಈ ಜನಾಂಗದ ಕನಿಷ್ಠ 7 ಜನ ಶಾಸಕರು ( ಶಹಾಪುರ, ಯಾದಗೀರ, ಯಲಬುರ್ಗಾ, ರೋಣ, ಬಳ್ಳಾರಿ, ಗುರುಮಿಠಕಲ್, ದೇವರ ಹಿಪ್ಪರಗಿ) ವಿಧಾನಸಭೆಯಲ್ಲಿ ಇದ್ದಾರೆ. ಇವರ ಜನಸಂಖ್ಯೆಯನ್ನು ಕೇವಲ 38183 ಎಂದು ತೋರಿಸಲಾಗಿದೆ. ಇ ಸಂಖ್ಯೆಯನ್ನು ನಂಬಲು ಅಸಾಧ್ಯ.

ಇದೇ ರೀತಿ ಹಲವಾರು ಉಪ ಪಂಗಡಗಳ ಸಂಖ್ಯೆಯನ್ನು ಬಹಳ ಕಡಿಮೆ ತೋರಿಸಲಾಗಿದೆ. ಇದಕ್ಕೆ ಕಾರಣ ಬಹುಶಃ ವರದಿಗಳನ್ನು ಕಚೇರಿಯಲ್ಲಿ ಕುಳಿತು ತಯಾರಿಸಬಹುದು ಎಂದು ಅನ್ನಿಸುತ್ತದೆ.
6. ಲಿಂಗಾಯತ|ವೀರಶೈವ ಪಂಥದಲ್ಲಿ ಒಟ್ಟು 99 ವೃತ್ತಿಗಳ (ಜಾತಿಯ) ಜನ ಇರುತ್ತಾರೆ. ಒಂದು ವೃತ್ತಿಯ ಹಿಂದೂ ಜನರನ್ನು ಪ್ರವರ್ಗ 1A, 1B, 2A ಪ್ರವರ್ಗಗಳಲ್ಲಿ ಸೇರಿಸಲಾಗಿದೆ. ಅದೇ ವೃತ್ತಿಯ ಜನ ಹಿಂದೂ ಬದಲಾಗಿ ಲಿಂಗಾಯತ ಎಂದು ಹೇಳಿಕೊಳ್ಳುವುದರಿಂದ ಅವರ ಸಾಮಾಜಿಕ ಸ್ಥಾನಮಾನ, ಆದಾಯ ಮತ್ತು ಆರ್ಥಿಕ ಸ್ಥಿತಿಗಳಲ್ಲಿ ಬದಲಾವಣೆ ಆಗುವುದಿಲ್ಲ. ಆದರೆ ಅವರನ್ನು III B ಪ್ರವರ್ಗದಲ್ಲಿ ಸೇರಿಸಿದ್ದಾರೆ. ಈ ಮೂಲಭೂತ ಸತ್ಯವನ್ನು ಆಯೋಗ ಅರಿತುಕೊಂಡಿಲ್ಲ. ಆದ್ದರಿಂದ ಅವುಗಳನ್ನು III B ಪ್ರವರ್ಗಗಳಲ್ಲಿ ಸೇರಿಸಿ ಸಹಿಸಲು ಅಸಾಧ್ಯವಾದ ಅನ್ಯಾಯವನ್ನು ಮಾಡಿದ್ದಾರೆ. ಈ ಅನ್ಯಾಯವನ್ನು ಸರಿಪಡಿಸದಿದ್ದರೇ, ಘೋರ ದುರಂತವಾಗುತ್ತದೆ.

ಶಂಕರ ಬಿದರಿ

ಅಧ್ಯಕ್ಷರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಬೆಂಗಳೂರು

Oplus_16908288

Oplus_16908288

Related Articles

Leave a Reply

Your email address will not be published. Required fields are marked *

Back to top button