ಅಪ್ಪನ ನೆನಪುಗಳು

ಎತ್ತಣ ಮಾಮರ, ಎತ್ತಣ ಕೋಗಿಲೆ

Spread the love

ಎತ್ತಣ ಮಾಮರ ಎತ್ತಣ ಕೋಗಿಲೆ ?

ಅಪ್ಪನ ಜೊತೆಗೂಡಿ ಶಹಾಪುರದಿಂದ ರಾಯಚೂರುವರೆಗೆ ಪ್ರೊ.ಎಂ.ಡಿ.ನAಜುAಡಸ್ವಾಮಿಯವರ ಕಾರಿನಲ್ಲಿ ಹೊರಟಿದ್ದೇವು. ಅದೇಕೋ ಏನೋ ? ಪ್ರೊಫೇಸರ್ ಮಾತಿನ ನಡುವೆ “ ಲಿಂಗಣ್ಣ ನಮ್ಮ ಮೂಲ ಊರು ಬೀದರ. ಹಿಂದೆ ನಮ್ಮ ಪೂರ್ವಜರು ಕಲ್ಯಾಣದಲ್ಲಿ ವಾಸವಾಗಿದ್ದರಂತೆ. ಬಹುಶಃ ಕಲ್ಯಾಣ ಕ್ರಾಂತಿಯ ತರುವಾಯ ನಮ್ಮ ಕುಟುಂಬದ ಹಿರಿಯರು ಮೈಸೂರಿಗೆ ಬಂದು ನೆಲೆಸಿದರು. ಶರಣರ ವಚನ ಸಾಹಿತ್ಯದ ಬಗೆಗಿನ ನನ್ನ ಹಾಗೂ ನನ್ನ ತಂದೆಯ ವ್ಯಾಮೋಹಕ್ಕೆ ಹಾಗೂ ಆ ಶರಣರ ಗಟ್ಟಿಯಾದ ಜನಪರ ನಿಲುವು ನನ್ನಲ್ಲಿ ಬೆಳೆದಿರುವ ಮೂಲ ಕಾರಣ ಶರಣರ ಪರಂಪರೆಯ ನಮ್ಮೊಳಗೂ ಹರಿದು ಬಂದವೇನೋ ?! ಎಂಬ ಮಾತು ಒಮ್ಮಿದೊಮ್ಮೆ ಇಂದು ನನಗೆ ಜ್ಞಾಪಕಕ್ಕೆ ಬಂತು.

ಇAದಿನ ಬೆಳಗಾಂವಿ ಜಿಲ್ಲೆಯ ರಾಯಬಾಗ ತಾಲೂಕಿನ ಪರಮಾನಂದ ವಾಡಿಯ ಪ್ರಕಾಶ ಹಣಮಂತ ಯಳವರ ಬಂದು ತನ್ನಲ್ಲಿನ ಹೊತ್ತಿಗೆಯನ್ನು ತೆಗೆದು ನಮ್ಮ ಕುಟುಂಬದ ಇತಿಹಾಸ ಹೇಳಲು ಶುರು ಮಾಡಿದ. ೧೧೨೬ ರ ಸಂದರ್ಭದಲ್ಲಿ ನಮ್ಮ ಕುಟುಂಬವೂ ಬೀದರನಲ್ಲಿ ವಾಸವಾಗಿತ್ತಂತೆ ! ಆಗ ಅದನ್ನು ಶಾಲಿ ಬೀದರ ಕೋಟೆ ಎಂಬ ಹೆಸರಿನಿಂದ ಕರೆಯುತ್ತಿದ್ದರು ಎಂದು ಅಲ್ಲಿ ಬರೆದುಕೊಂಡದ್ದನ್ನು ಓದಿದ.ಆಗ ನಮ್ಮ ಮನೆತನಕ್ಕೆ ೧೬೦ ಕೂರಿಗೆ ಜಮೀನು ಇದ್ದ ಬಗ್ಗೆ ಉಲ್ಲೇಖಗಳನ್ನು ತಿಳಿಸಿ ವಿವರಿಸಿದ. ಇಷ್ಟೊಂದು ಹೆಚ್ಚು ಪ್ರಮಾಣದ ಭೂಮಿ ಇದ್ದದ್ದಕ್ಕೋ ಏನೋ ದೇಸಾಯಿ ಎಂಬ ಹೆಸರಿನಿಂದ ಕರೆಯುತ್ತಿದ್ದರಂತೆ.

ಇದೇನೆ ಇರಲಿ, ಆದರೆ ಇಷ್ಟಂತೂ ಸತ್ಯ. ನಮ್ಮ ಮನೆತನದೊಳಗೆ ಬಸವಾದಿ ಶರಣರ ಕುರಿತು ಇರುವ ಅಕ್ಕರೆ. ಪ್ರೀತಿ, ಮಮತೆ ಹಾಗೂ ನಿಷ್ಠರುವಾಗಿರುವ ಭಾವ ಎಲ್ಲಿಂದ ಬಂತು ? ಎಂದು ನನಗೆ ಆಗಾಗ ಅನಿಸುತ್ತಿತ್ತು. ಸುಮಾರು ೭೦-೮೦ ವರ್ಷಗಳ ಹಿಂದೆಯೇ ನನ್ನ ಅಜ್ಜ ಗುರಪ್ಪ ಯಜಮಾನ ಅಸ್ಪಶ್ಯತೆಯ ವಿರುದ್ಧ ಸಮರ ಸಾರಿದ್ದ. ಮೌಢ್ಯಗಳ ವಿರುದ್ಧ ಸಡ್ಡು ಹೊಡೆದಿದ್ದ. ಸಕಲ ಜೀವಾತ್ಮರನ್ನು ಪ್ರೀತಿಸುವ ಗುಣ ಬೆಳೆಸಿಕೊಂಡಿದ್ದ. ನಮ್ಮ ಅಜ್ಜನ ಅಪ್ಪ ನಿಂಗಪ್ಪನೂ ಸಹ ಹಾಗೆಯೆ ಇದ್ದನೆಂದು ಅಜ್ಜ ತನ್ನ ಸ್ನೇಹಿತರಿಗೆ ಹೇಳುತ್ತಿದ್ದ ನೆನಪು.

ಬಹುಶಃ ಈ ಪರಂಪರೆಯ ಎಳೆ ರಕ್ತಗತವಾಗಿ ನಮ್ಮ ಕುಟುಂಬದಲ್ಲಿ ಬಂದುದ್ದರಿAದ ಅಪ್ಪ ಲಿಂಗಣ್ಣ ಸತ್ಯಂಪೇಟೆ ವಚನ ಸಾಹಿತ್ಯದೆಡೆಗೆ ಬಹುವಾಗಿ ಆಕರ್ಷಿತನಾದ. ಅಧ್ಯಯನ ಮಾಡಿದ. ಬರವಣಿಗೆ ಮಾಡಿದ. ಹೊಸ ದೃಷ್ಟಿಕೋನಗಳ ಮೂಲಕ ಶರಣರ ಚಳುವಳಿಯನ್ನು ವಿವರಿಸಲು ನಾನಾ ಬಗೆಯ ಪ್ರಯತ್ನಗಳನ್ನು ಮಾಡಿದ, ಅತ್ಯಂತ ಅನಾಕರ್ಷಕ ಹಿನ್ನೆಯಲ್ಲಿ ಅಪ್ಪ ಬೆಳೆದಿದ್ದರೂ ಸಹ ಅದನ್ನು ಪರಿಗಣಿಸದೆ ಅತ್ಯಂತ ಧಿರೋದಾತ್ತವಾಗಿ ಬದುಕಿ ಹೋದ. ಯಾರಿಗೂ ಹೆದರದೆ ಬೆದರದೆ ಮುನ್ನುಗ್ಗಿ ಬದುಕಿ ಬಾಳಿದ.ಬಸವಮಾರ್ಗ ಪತ್ರಿಕೆ, ಅಗ್ನಿ ಅಂಕುರ ಎಂಬ ಎರಡು ಭಿನ್ನ ಬಗೆಯ ಪತ್ರಿಕೆ ತೆಗೆಯುವ ಮೂಲಕ ತನ್ನ ಹೆಜ್ಜೆಯ ಗುರುತುಗಳನ್ನು ಬಿಟ್ಟು ಹೋದ. ಲಂಕೇಶ್ , ಪ್ರೊಫೇಸರ್ ಒಡನಾಟದ ಮೂಲಕ ಲಂಕೇಶ್ ಪತ್ರಿಕೆಯಲ್ಲಿ ಆತ ಬರೆದ ಬರೆಹಗಳನ್ನು ಇಂದೂ ಸಹ ಓದಿದರೆ ಹೆದರಿಕೆಯಾಗುತ್ತದೆ. ಆತನೆ ಒಂದು ಕಡೆ ಹೇಳುವಂತೆ ದೆವ್ವ ಹೋಗಲು ಹೆದರುವ ಜಾಗದಲ್ಲಿ ಅಪ್ಪ ನಡೆಯುತ್ತಿದ್ದ.

ಇದಕ್ಕೆಲ್ಲ ಕಾರಣ ಈ ಹಿಂದೆ ನಮ್ಮ ಕುಟುಂಬ ಬೀದರನಲ್ಲಿ ವಾಸವಾಗಿದ್ದು, ಶರಣರ ಕ್ರಾಂತಿಯ ತರುವಾಯ ಅಲ್ಲಿಂದ ಇಲ್ಲಿಗೆ ಬಂದು ಸೇರಿದಂತಿದೆ. ಆಗಿನ ಸಂದರ್ಭದಲ್ಲಿ ಯಾವ ಕೌಟುಂಬಿಕ ದಾಖಲಾತಿಯನ್ನು ಬರೆದಿಡುವವರು ಯಳವರು ಆಗಿದ್ದರು. ಆ ಯಳವರು ಅಕ್ಷರ ಬಲ್ಲವರಲ್ಲವಾದರೂ ಅವು ಮೋಡಿ ಲಿಪಿಯಲ್ಲಿ ಅದು ಹೇಗೆ ಬರೆದರೋ ? ಅವನ್ನು ಈಗೀಗ ಮರಾಠಿ ಭಾಷೆಯಲ್ಲಿ ರ‍್ಜುಮೆ ಮಾಡಿಕೊಂಡು ಬಂದು ನಮ್ಮ ಕುಟುಂಬದ ಇತಿಹಾಸ ಹೇಳಿದಾಗ ನನಗೆ ಅರಿವಿಲ್ಲದೆ ರೋಮಾಂಚನಕ್ಕೆ ಒಳಗಾದೆ.

ಬಸವಾದಿ ಶರಣರು ನಡೆದಾಡಿದ ಸಂದರ್ಭದಲ್ಲಿ ನನ್ನ ಕುಟುಂಬವೂ ಬೀದರ ಜಿಲ್ಲೆಯಲ್ಲಿ ವಾಸವಾಗಿತ್ತಲ್ಲ ಎಂಬ ಸಂತೋಷ, ಆನಂದ ಏಕಕಾಲಕ್ಕೆ ಉಂಟಾದವು. ಆಗ ನನಗೆ ಮತ್ತೆ ನೆನಪಾದುದು ಅಕ್ಕನ ವಚನ. ಎತ್ತಣ ಮಾಮರ. ಎತ್ತಣ ಕೋಗಿಲೆ
ಎತ್ತಣಿಂದೆತ್ತ ಸಂಬಂಧವಯ್ಯಾ
ಬೆಟ್ಟದ ನೆಲ್ಲಿಕಾಯಿ ಸಮುದ್ರದ ಉಪ್ಪು
ಎತ್ತಣಿಂದೆತ್ತ ಸಂಬಂಧವಯ್ಯಾ ?

೦ ವಿಶ್ವಾರಾಧ್ಯ ಸತ್ಯಂಪೇಟೆ

Leave a Reply

Your email address will not be published. Required fields are marked *

Back to top button