ಮರೆಯಲಾಗದವರು

ಜಗತ್ತನ್ನೇ ಯಾಮಾರಿಸಿದ ಮುದುಕ

Spread the love

ಜಗತ್ತನ್ನೇ ಯಾಮಾರಿಸಿದ ಮುದುಕ

ಇವನು ಯಾರೋ ಹತ್ತು ಜನರನ್ನು
ಯಾಮಾರಿಸಿದ ಮುದುಕನಲ್ಲ
ಇವನಿಗೆ ಯಾಮಾರಿದ ಹತ್ತೂ ಜನರೂ ದೊಡ್ಡ ಡಾನ್ ಗಳೇ

ಐನಸ್ಟೈನಾ ಗೊತ್ತಲ್ಲವೇ ನಿಮಗೆ,
ಅವನೇ ಎಚ್ಚರಿಸಿದ್ದ ನಂಬಬೇಡಿ ಇವನನ್ನು
ಮೂಳೆ ಮಾಂಸಗಳಿಂದ ತುಂಬಿದ ಇಂತವಾ ಇರಲಾರನೆಂದು

ಚಾರ್ಲಿಯು ಗೊತ್ತಲ್ಲವೇ ನಿಮಗೆ,
ಜಗತ್ತಿನ ಮಹಾ ತುಂಟ,
ಅವನಿಗೇ ಇವನು ಕಥೆ ಕೊಟ್ಟ, ಮಾಡ್ರನ್ ಟೈಮ್ಸ್ ಎಂದು ಹೆಸರಿಟ್ಟ.

ಟಾಲ್ಸ್ ಸ್ಟಾಯ್ ನೆಪವೊಡ್ಡಿ ಆಶ್ರಮ ಕಟ್ಟಿದ,
ಗೋಖಲೆಯ ನೆಪವೊಡ್ಡಿ ದೇಶವನು ಸುತ್ತಿದ.
ವಿಶ್ವಕವಿಯೇ ಇವನನ್ನು ಮಹಾತ್ಮನೆಂದ ನೇತಾಜಿಯೇ ಅದಕೆ ತಲೆಯಾಡಿಸಿದ.

ಕ್ರಿಸ್ತನ ಮಕ್ಕಳು ಎಲ್ಲವರು ಬಲ್ಲವರು
ಇವನ ಸಹವಾಸವೇ ಬೇಡೆಂದು ದಬ್ಬಿದರು ರೈಲಿಂದ.
ಮತ್ತೆ ಮೈಕೊಡವಿ ಎದ್ದ, ಬಿದ್ದವನು ಮೋಹನ ಎದ್ದವನು ಮಹಾತ್ಮ.

ಆಗಲೇ ಹೇಳಿದೆನಲ್ಲ ನಿಮಗೆ
ಇವನು ಯಾರೋ ಹತ್ತು ಜನರನ್ನು
ಯಾಮಾರಿಸಿದ ಮುದುಕನಲ್ಲ ಎಂದು

ಮುದುಕನ ಕಥೆ ಬಿಡಿ ಹುಡುಗನಾಗಿದ್ದಾಗಲೇ
ಹೆತ್ತವನನ್ನೇ ಯಾಮಾರಿಸಿದ್ದ. ಕಾಸು ಕದ್ದ ಬೀಡಿ ಸೇದಿ,
ಪತ್ರ ಬರೆದು ಕಣ್ಣೀರ ಗಿಟ್ಟಿಸಿ ಅಪ್ಪನನು ಯಾಮಾರಿಸಿದ.

ಯಾರದೋ ಜೀವನದಿ ನುಗ್ಗಿಬಿಡುವ
ಇನ್ಯಾರದೋ ಕಥೆಯಲ್ಲಿ ಮುಳುಗಿಬಿಡುವ
ಕಥೆ ಕವಿತೆ ಕಾದಂಬರಿ ಪುರಾಣ ಎಲ್ಲೆಂದರಲ್ಲಿ ಬಂದುಬಿಡುವ.

ನಮ್ಮ ಕನ್ನಡ ತೇಜಸ್ವಿ ಗೊತ್ತಿಲ್ಲವೇ ನಿಮಗೆ,
ಅವನೂ ಇವನ ನಂಬಿದವನಂತೆ
ಗಾಂಧೀಜಿ ದೆಸೆಯಿಂದ ಕಥೆ ಬರೆದು ಏಟು ತಿಂದಾ.

ಮಗನೇನೋ ಚಿಕ್ಕಹುಡುಗ ಬಿಡಿ,
ಕನ್ನಡದ ಅಪ್ಪ ಪುಟ್ಟಪ್ಪನಾ ಮಸಣದ ಕಾವ್ಯದಲೂ ನುಗ್ಗಿ
ಹರಿಹರರನೇ ಯಾಮಾರಿಸಿ ಕಾವ್ಯವನೇ ಕೆಡಿಸುವವನಿದ್ದ.

ಹರಿರಾಮನನು ಯಾಮಾರಿಸುವುದು ಸುಲಭ
ನರನಾಥುರಾಮನ ಯಾಮಾರಿಸುದು? ಅವನೊಬ್ಬನೇ
ಇವನಿಗೆ ಯಾಮಾರದೇ ಹೋದ, ಗುಂಡು ಹೊಡೆಯುವ ಮೊದಲು ಕೈಯಷ್ಟೇ ಮುಗಿದ.

Leave a Reply

Your email address will not be published. Required fields are marked *

Back to top button