ಕಂಡದ್ದು ಕಂಡಹಾಗೆ

ಮೂರ್ಖರು ಮುಸ್ಲಿಮರಲ್ಲಿ ಬಹಳಷ್ಟು ಜನ ಇದ್ದಾರೆ. ಮುಸ್ಲಿಂ ಸಮಾಜ ಹಿಂದುಳಿಯುವಲ್ಲಿ ಇವರ ಪಾಲೂ ಸಾಕಷ್ಟಿದೆ

Spread the love

ಮೂರ್ಖರು ಮುಸ್ಲಿಮರಲ್ಲಿ ಬಹಳಷ್ಟು ಜನ ಇದ್ದಾರೆ. ಮುಸ್ಲಿಂ ಸಮಾಜ ಹಿಂದುಳಿಯುವಲ್ಲಿ ಇವರ ಪಾಲೂ ಸಾಕಷ್ಟಿದೆ.

ಧಾರ್ಮಿಕತೆ ನನಗೆ ಹಿಡಿಸದು. ಯಾವುದೇ ಧಾರ್ಮಿಕ ವಿಧಿವಿಧಾನಗಳಲ್ಲಿ ನನಗೆ ಯಾವುದೇ ಆಸಕ್ತಿ ಇಲ್ಲ. ಹೀಗೆ ಅನ್ಯ ಮನಸ್ಕನಾದ ನಾನು ಸಹಸ್ರಾರು ಜನರ ಮಧ್ಯದಲ್ಲಿದ್ದರೂ ಏಕಾಂಗಿತನವನ್ನು ಅನುಭವಿಸುತ್ತೇನೆ.

ವಿಜಾಪುರದ ನಾವಿಗಲ್ಲಿ ಓಣಿಯಲ್ಲಿ ಒಂದು ಹಳೆಯ ಕಾಲದ ಚಿಕ್ಕ ಮಸೀದಿ ಇದೆ. ಅಲ್ಲಿ ನಮಾಜ ಮಾಡುತ್ತಿದ್ದಿಲ್ಲ. ಅದರ ಒಂದು ಮೂಲೆಯಲ್ಲಿ ಮೊಹರಂ ಡೋಲಿ ಇಟ್ಟಿದ್ದರು. ಅದೊಂದು ಅನನ್ಯವಾದ ಡೋಲಿ. ಅದಕ್ಕೆ ‘ಆಳವಿ ಡೋಲಿ’ ಎಂದು ಕರೆಯುತ್ತಾರೆ. ಮೊಹರಂ ಸಮಯದಲ್ಲಿ ಈಚಲು ಮರದಿಂದ ತಯಾರಿಸಿದ ಚಾಪೆಯನ್ನು ಆ ಡೋಲಿಯ ವಿವಿಧ ಭಾಗಗಳಿಗೆ ತಕ್ಕಂತೆ ಕತ್ತರಿಸಿ ಹೊಲಿದು ಮಣ್ಣು ಹಚ್ಚುತ್ತಾರೆ. ಅನಂತರ ಅದರ ತುಂಬ ಆಳವಿ ಬೀಜಗಳನ್ನು ಮೆತ್ತುತ್ತಾರೆ. ಆಮೇಲೆ ದಿನವೂ ಪಿಚಕಾರಿಯಿಂದ ನೀರು ಚಿಮುಕಿಸುತ್ತಾರೆ. ಮೊಹರಂ ಪ್ರಾರಂಭವಾಗುವುದರೊಳಗಾಗಿ ಅದು ಹಚ್ಚನೆ ಹಸಿರು ಡೋಲಿಯಾಗಿ ಕಂಗೊಳಿಸುತ್ತದೆ. ಇಂಥ ಹಸಿರು ಡೋಲಿ ಇನ್ನೆಲ್ಲಿಯೂ ಇಲ್ಲ. ಆ ಮಸೀದಿಗೆ ‘ಆಳವಿ ಡೋಲಿ ಮಸೀದಿ’ ಎಂದೇ ಕರೆಯುತ್ತಾರೆ. ಈ ಡೋಲಿಯ ಬಗ್ಗೆ ನನಗೆ ಎಲ್ಲಿಲ್ಲದ ಆಕರ್ಷಣೆ ಇತ್ತು.

ನಾನು ಬಹುಶಃ ಮೂರನೇ ಇಯತ್ತೆಯಲ್ಲಿದ್ದಾಗ ಒಂದು ದಿನ ಎಲ್ಲಿಂದಲೋ ಒಬ್ಬ ಮೌಲಾನಾ ಬಂದರು. ಆ ಹರೆಯದ ಸ್ಪುರದ್ರೂಪಿ ವ್ಯಕ್ತಿ ಬಂಗಾರದ ವರ್ಣದವರಾಗಿದ್ದರು. ಶುಭ್ರ ಬಿಳಿಬಟ್ಟೆ ಮತ್ತು ಬಿಳಿ ರುಮಾಲಿನಲ್ಲಿ ಅವರ ರೂಪ ಇನ್ನೂ ಸುಂದರವಾಗಿ ಕಾಣುತ್ತಿತ್ತು. ಮಿತಭಾಷಿಯಾಗಿದ್ದ ಅವರು ಧರ್ಮಕ್ಕೆ ತಮ್ಮನ್ನು ಸಮರ್ಪಿಸಿಕೊಂಡವರ ಹಾಗೆ ಇದ್ದರು. ಅವರು ಯಾರ ಮನೆಗೂ ಹೋಗುತ್ತಿದ್ದಿಲ್ಲ. ಮಸೀದಿಯ ಚಿಕ್ಕ ಕಂಪೌಂಡಿನ ಒಂದು ಮೂಲೆಯಲ್ಲಿ ಮೂರು ಕಲ್ಲಿಟ್ಟು, ಅನ್ನ ಬೇಯಿಸಿಕೊಳ್ಳುತ್ತಿದ್ದರು.

ನಾವೆಲ್ಲ ಮಕ್ಕಳು ಅವರ ಸೌಮ್ಯ ಸ್ವಭಾವದ ಬಗ್ಗೆ ಆಕರ್ಷಿತರಾಗಿದ್ದೆವು. ಅವರು ಮಸೀದಿಯನ್ನು ತಾವೇ ಸ್ವಚ್ಛಗೊಳಿಸಿ ನಮಗೆಲ್ಲ ನಮಾಜು ಮಾಡುವುದನ್ನು ಕಲಿಸುತ್ತಿದ್ದರು. ಇದೆಲ್ಲ ಸ್ವಲ್ಪ ಕಾಲ ಸರಿಯಾಗಿ ನಡೆಯಿತು. ನನಗೆ ಏನೂ ಗೊತ್ತಾಗದಿದ್ದರೂ ಬಹಳ ಖುಷಿ ಎನಿಸುತ್ತಿತ್ತು. ಒಂದು ದಿನ ಓಣಿಯಲ್ಲಿನ ಮುಸ್ಲಿಂ ದೀಡಪಂಡಿತರು ಕ್ಯಾತೆ ತೆಗೆದರು. ಕರ್ಬಲಾ ಯುದ್ಧದಲ್ಲಿ ಮಡಿದ ಸ್ತ್ರೀ ಹುತಾತ್ಮಳಿಗೆ ಸಂಬಂಧಿಸಿದ ಈ ಡೋಲಿ ಮಸೀದಿಯಲ್ಲಿ ಇರುವುದರಿಂದ ನಮಾಜು ಮಾಡಲು ಬರುವುದಿಲ್ಲ ಎಂದು ಹೇಳಿದರು. ಹೀಗಾಗಿ ನಮಾಜು ನಿಂತಿತು. ಬಹಳ ಬೇಸರವಾಯಿತು. ನನಗೆ ಆ ಮೌಲಾನಾ ಅವರ ಮಗುವಿನಂಥ ಮನಸ್ಸು ಬಹಳ ಹಿಡಿಸಿತ್ತು. ನಮಾಜಿನಷ್ಟೇ ಅವರ ಸಹವಾಸವೂ ಆಪ್ಯಾಯಮಾನವಾಗಿತ್ತು. ಪೈಗಂಬರರು ಹೀಗೇ ಇದ್ದಿರಬಹುದು ಎಂದು ನನ್ನ ಮುಗ್ಧ ಮನಸ್ಸಿಗೆ ಅನಿಸುತ್ತಿತ್ತು.

ಇದ್ದೊಂದು ಮಸೀದಿ ಮುಚ್ಚಿದ ಮೇಲೆ, ನಮಾಜಿನ ಸಂಪರ್ಕ ಹೋಯಿತು. ಮನೆಯಲ್ಲಿನ ನಿರಕ್ಷರಿ ತಂದೆ ತಾಯಿಗಳಿಗೆ ಇದಾವುದೂ ಗೊತ್ತಿರಲಿಲ್ಲ. ರಂಜಾನ್ ಮತ್ತು ಬಕ್ರೀದ್‌ಗಳಲ್ಲಿ ತಂದೆ ನಮಗೆಲ್ಲ ಹೊಸ ಬಟ್ಟೆ ತೊಡಿಸಿ ಈದಗಾ ಮೈದಾನಕ್ಕೆ ಕರೆದುಕೊಂಡು ಹೋಗುತ್ತಿದ್ದರು. ವರ್ಷದಲ್ಲಿ ಎರಡು ಬಾರಿ ಮಾತ್ರ ಈ ಅವಕಾಶ ಸಿಗುತ್ತಿತ್ತು. ನಮ್ಮ ಮನೆಯ ಸುತ್ತಮುತ್ತ ಯಾವುದೇ ಮುಸ್ಲಿಂ ಮನೆ ಇರಲಿಲ್ಲ. ಹೀಗಾಗಿ ಈ ಕುರಿತು ಚಿಂತಿಸುವ ಪ್ರಸಂಗವೇ ಬರಲಿಲ್ಲ.

ನಾನು ಬೆಳೆದಂತೆಲ್ಲ ಈ ಘಟನೆ ಕಾಡುತ್ತಲೇ ಇತ್ತು. ಮುಸ್ಲಿಮರಲ್ಲಿನ ದೀಡಪಂಡಿತರು ಇಂಥ ಅವಸ್ಥೆಯನ್ನು ತಂದಿಡುವಲ್ಲಿ ನಿಸ್ಸಿಮರು. ನಾನು ಕಾರವಾರದಲ್ಲಿ ಪ್ರಜಾವಾಣಿ ಬಾತ್ಮೀದಾರನಾಗಿದ್ದಾಗ ಸಿದ್ದಾಪುರ ತಾಲ್ಲೂಕಿನ ಗ್ರಾಮವೊಂದರಲ್ಲಿ ಕೋಮುವಾದಿಗಳು ಅಲ್ಲಿನ ಈದಗಾವನ್ನು ಹಾಳುಗೆಡವಿದರು. ನಾವೆಲ್ಲ ಪತ್ರಕರ್ತ ಮಿತ್ರರು ಹಣ ಕೂಡಿಸಿದೆವು. ಈದಗಾ ಕಟ್ಟಲು ಧನಸಹಾಯ ಮಾಡುವವರ ಹೆಸರು ಪ್ರಕಟಿಸಲಾಗುವುದೆಂದು ಸ್ಥಳೀಯ ಪತ್ರಿಕೆಯ ಮಾಲೀಕರೂ ಆಗಿದ್ದ ಸಂಪಾದಕರು ಪ್ರಕಟಿಸಿದರು. ಅಂತೂ ಒಂದಿಷ್ಟು ಹಣ ಕೂಡಿತು. ಅದನ್ನು ಆ ಹಳ್ಳಿಯ ಮುಸ್ಲಿಂ ಹಿರಿಯರಿಗೆ ತಲುಪಿಸುವ ಯೋಚನೆಯಲ್ಲಿದ್ದಾಗಲೇ ಇನ್ನೊಬ್ಬ ಮುಸ್ಲಿಂ ದೀಡಪಂಡಿತ ಮುಸ್ಲಿಮರಲ್ಲದವರ ಹಣದಿಂದ ಈದಗಾ ಕಟ್ಟಲಿಕ್ಕಾಗದು ಎಂದು ಕ್ಯಾತೆ ತೆಗೆದ. ಕೊನೆಗೆ ಆ ಹಣ ಪತ್ರಿಕಾ ಮಾಲೀಕನ ಪಾಲಾಯಿತು! ಇಂಥ ಮೂರ್ಖರು ಮುಸ್ಲಿಮರಲ್ಲಿ ಬಹಳಷ್ಟು ಜನ ಇದ್ದಾರೆ. ಮುಸ್ಲಿಂ ಸಮಾಜ ಹಿಂದುಳಿಯುವಲ್ಲಿ ಇವರ ಪಾಲೂ ಸಾಕಷ್ಟಿದೆ. ಇಂಥ ಅನೇಕ ಕಾರಣಗಳಿಂದ ನಾನು ಸ್ವತಂತ್ರವಾಗಿ ಬೆಳೆದೆ.

ಅದೇನೇ ಇದ್ದರೂ ನನಗೆ ಇಲ್ಲಿಯವರೆಗೂ ಯಾವುದೇ ಧರ್ಮದ ಬಗ್ಗೆ ಬೇಸರವಿಲ್ಲ. ಸರ್ವಧರ್ಮ ಸಾರವನ್ನು ಅರಿಯುವ ತವಕ ಇಂದಿಗೂ ಉಳಿದುಕೊಂಡು ಬಂದಿದೆ. ಧರ್ಮಗಳು ಮನುಷ್ಯನನ್ನು ಹೇಗೆ
ವ್ಯಾಖ್ಯಾನಿಸುತ್ತವೆ ಎಂಬ ಕುತೂಹಲಕ್ಕಾಗಿ ನಾನು ಸಮಯ ಸಿಕ್ಕಾಗಲೆಲ್ಲ ಧರ್ಮಗ್ರಂಥಗಳನ್ನು ಓದುತ್ತಿರುತ್ತೇನೆ. ಧರ್ಮವೊಂದು ಹುಟ್ಟುವಾಗ, ಆಗ ಇದ್ದ ವ್ಯವಸ್ಥೆಗೆ ವಿರುದ್ಧವಾಗೇ ಇರುತ್ತದೆ ಎಂಬುದನ್ನು ನಾನು ಮಾರ್ಕ್ಸವಾದದಿಂದ ಕಂಡುಕೊಂಡೆ. ಆದರೆ ಧರ್ಮ ಬರಬರುತ್ತ ಅದನ್ನು ಪಾಲಿಸುವವರ ಕೈಗೊಂಬೆಯಾಗುತ್ತದೆ. ಅವರೆಲ್ಲ ಸೇರಿ ತಮ್ಮ ಧರ್ಮವನ್ನು ತಮ್ಮ ಮಟ್ಟಕ್ಕೆ ಇಳಿಸಿಬಿಡುತ್ತಾರೆ. ಮೂಲ ವಿಚಾರಗಳು ಮಾಯವಾಗಿ ಅವರು ಮಾಡುವ ವ್ಯಾಖ್ಯಾನಗಳೇ ಮಾರ್ಗದರ್ಶಿಯಾಗುವ ಹಾಗೆ ಮಾಡುತ್ತಾರೆ! ಅನಂತರ ಹೃದಯಹೀನ ಜಗತ್ತಿನ ಹೃದಯವಾಗಬೇಕಾದ ಧರ್ಮಗಳು ನಶೆಯ ರೂಪ ತಾಳುತ್ತವೆ. ಬೀದಿಯಲ್ಲಿ ವಿಕಾರವಾಗಿ ಕುಣಿದಾಡತೊಡಗುತ್ತವೆ. ಇಡೀ ಸಮಾಜಕ್ಕೆ ಕಂಟಕವಾಗಿ ನೆಮ್ಮದಿಯನ್ನು ಹಾಳು ಮಾಡುತ್ತವೆ. ಸಂಪತ್ತು ಮತ್ತು ಅಧಿಕಾರದ ಮೋಹವುಳ್ಳವರು ಇಂಥ ವಾತಾವರಣ ಸೃಷ್ಟಿಸುತ್ತ, ಅದರ ಲಾಭ ಪಡೆಯುತ್ತಲೇ ಇರುತ್ತಾರೆ.

ಎಲ್ಲ ಧರ್ಮಗಳಲ್ಲಿ ಒಂದೊಂದು ರೀತಿಯಲ್ಲಿ ಈ ಅವಸ್ಥೆಯ ವಿರುದ್ಧ ಬಂಡಾಯ ನಡೆದೇ ಇರುತ್ತದೆ. ಸೂಫಿಗಳು, ಶರಣರು, ದಾಸರು, ಸಂತರು, ತತ್ವಪದಕಾರರು ನಿಜವಾದ ಅರ್ಥದಲ್ಲಿ ವ್ಯವಸ್ಥೆಯ ವಿರುದ್ಧ ಬಂಡಾಯ ಎದ್ದವರೇ ಆಗಿದ್ದಾರೆ. ಅವರೆಲ್ಲರಿಗೆ ಸಮಾಜದ ಪಟ್ಟಭದ್ರ ಹಿತಾಸಕ್ತಿಗಳು ಬಹಳ ತೊಂದರೆ ಕೊಟ್ಟಿವೆ. ಆ ಪ್ರತಿಗಾಮಿಗಳು ಲೋಕಾಯತರನ್ನು ಕೊಂದರು ಮತ್ತು ಅವರ ಸಾಹಿತ್ಯವನ್ನು ಸುಟ್ಟರು. ಬೌದ್ಧರ ಸಾಹಿತ್ಯ ಸುಟ್ಟರು ಮತ್ತು ಕೊಂದರು. ವಚನಕಟ್ಟುಗಳನ್ನು ಸುಟ್ಟರು ಮತ್ತು ಶರಣರ ಕೊಲೆಗೈದರು. ಸಂತ ತುಕಾರಾಮರ ಅಭಂಗಗಳನ್ನು ನದಿಗೆ ಎಸೆದರು ಮತ್ತು ಅವರ ಸಾವನ್ನು ನಿಗೂಢವಾಗಿಸಿದರು. ಸೂಫಿ ಸರಮಸ್ತರ ತಲೆ ಕಡಿದರು. ಇಂಥ ಸಹಸ್ರಾರು ಉದಾಹರಣೆಗಳು ಸಿಗುತ್ತವೆ.

ಗುರುಗೋವಿಂದ ಭಟ್ಟರು ಮತ್ತು ಶಿಶುನಾಳ ಶರೀಫರಿಗೂ ಬಿಡಲಿಲ್ಲ. ಅವರು ಎಲ್ಲವನ್ನೂ ಮೀರಿದ ಅವಧೂತರಂತೆ ಇದ್ದರು. ಒಂದು ಸಲ ಶರೀಫರು ನವಲಗುಂದ ನಾಗಲಿಂಗಜ್ಜನ ಜೊತೆ ಹೊರಟಿದ್ದರು. ರಾತ್ರಿಯಾಗುತ್ತಲೆ ಕುರ್ತಕೋಟಿ ತಲುಪಿದರು. ಅಲ್ಲಿನ ದ್ಯಾಮವ್ವನ ಗುಡಿಯಲ್ಲಿ ಪೂಜೆ ನಡೆದಿತ್ತು. ಅದರಲ್ಲಿ ಭಾಗಿಯಾದರು. ಅಲ್ಲಿಯೆ ಊಟ ಮಾಡಿ ಮಲಗಿದರು. ರಾತ್ರಿ ಚಳಿ ಬಹಳವಾಗಿದ್ದರಿಂದ ದೇವಿಯ ಕಟ್ಟಿಗೆ ಮೂರ್ತಿಯನ್ನು ಬೀದಿಗೆ ತಂದು, ಒಡೆದು ಬೆಂಕಿ ಹಚ್ಚಿ ಚಳಿ ಕಾಯಿಸಿಕೊಂಡರು! ಧರ್ಮ ಮಾನವೀಯತೆಗಾಗಿ ಎಂಬ ಭಾವದವರಿಂದ ಧರ್ಮ ಉಳಿಯುತ್ತದೆ. ಧರ್ಮ ಸ್ವಾರ್ಥಕ್ಕಾಗಿ ಎನ್ನುವವರಿಂದ ಧರ್ಮ ಬೆಂಕಿಯಾಗಿ ಸುಡುತ್ತಾ ಹೋಗುತ್ತದೆ.

ಇಂಥ ತಿಳಿವಳಿಕೆ ನನಗೆ ಬಹಳ ಬೇಗ ಬಂದ ಕಾರಣ, ಧರ್ಮದ ಸಂಪ್ರದಾಯಗಳ ಬದಲಿಗೆ ಅದರ ಆತ್ಮನಾದವನ್ನು ಆಲಿಸುವ ಕುತೂಹಲ ಮೂಡಿತು. ವಚನಗಳು, ಅಭಂಗಗಳು, ದೋಹೆಗಳು, ದಾಸರ ಪದಗಳು, ಆಗಮಿಕ ಮಹಾಕಾವ್ಯಗಳು ಮತ್ತು ಮೂಲ ಧರ್ಮಗ್ರಂಥಗಳ ಮೂಲಕ ನಾವು ಧರ್ಮದ ಆತ್ಮನಾದವನ್ನು ಕೇಳಬಹುದು. ಒಮ್ಮೆ ಮನುಷ್ಯನಿಗೆ ಈ ರೀತಿಯ ಅರಿವುಂಟಾದರೆ, ಜಗತ್ತಿನಲ್ಲಿ ಯಾರೂ ಹೊರಗಿನವರಲ್ಲ ಎಂಬ ಭಾವ ಮೂಡುತ್ತದೆ. ನಾವು ಯಾವುದೇ ಧಾರ್ಮಿಕ ಆಚರಣೆಗಳಲ್ಲಿ ಮನಃಪೂರ್ವಕವಾಗಿ ಭಾಗವಹಿಸುವುದಿಲ್ಲ. ಆದರೆ ಸಕಲಜೀವಾತ್ಮರಿಗೆ ಲೇಸನ್ನೇ ಬಯಸುವ ಆಚರಣೆಗಳು ಯಾವುದೇ ಧರ್ಮಗಳಿಗೆ ಸಂಬಂಧಿಸಿದ್ದರೂ ಮನಸ್ಸಿಗೆ ಮುದ ನೀಡುತ್ತವೆ. ನನಗಂತೂ ಮಂದಿರಗಳು, ಮಸೀದಿಗಳು, ಚರ್ಚ್‌ಗಳು, ಸೆನೆಗಾಗ್‌ಗಳು, ಗುರುದ್ವಾರಗಳು, ದರ್ಗಾಗಳು ಮುಂತಾದವು ಮನಸ್ಸಿಗೆ ನೆಮ್ಮದಿ ನೀಡುತ್ತವೆ. ಸಾಧ್ಯವಾದಷ್ಟು ಜನದಟ್ಟಣೆ ಕಡಿಮೆ ಇದ್ದಾಗ ಮಾತ್ರ, ನಾನು ಹೋದ ಕಡೆಗಳಲ್ಲೆಲ್ಲ ಇಂಥ ಸ್ಥಳಗಳಿಗೆ ಭೇಟಿ ಕೊಡುತ್ತೇನೆ. ನನಗೆ ಯಾರೂ ಹೊರಗಿನವರು ಅನಿಸುವುದಿಲ್ಲ.

ನಾನು ಭಾಷಣಕ್ಕೆ ಹೋದಾಗ ಕುರುಬ ಜನಾಂಗದವರು ಭಂಡಾರ ಹಚ್ಚುತ್ತಾರೆ, ಲಿಂಗಾಯತರು ವಿಭೂತಿ ಹಚ್ಚುತ್ತಾರೆ, ದಲಿತರು ನೀಲಿ ಹಚ್ಚುತ್ತಾರೆ, ಹಿಂದೂಗಳು ಕುಂಕುಮ ಹಚ್ಚುತ್ತಾರೆ. ಅವರ ಆನಂದವೇ ನನ್ನ ಆನಂದ. ಎಲ್ಲರೂ ನನ್ನವರು ಎಂಬ ಭಾವನೆ ನನ್ನದು. ಆದರೆ ಸಮಾಜದ ವ್ಯವಸ್ಥೆಯ ವಿಚಾರ ಬಂದಾಗ ನಾನು ಯಾರವನೂ ಅಲ್ಲ ಎಂಬ ಭಾವ ಮೂಡುತ್ತದೆ. ಇದೆಲ್ಲ ಇದ್ದದ್ದೆ. ನಾವು ಮಾತ್ರ ಮಾನವಧರ್ಮವನ್ನು ಪಾಲಿಸುತ್ತ ಸರ್ವರೊಳು ಒಂದಾಗಿ ಬದುಕುವುದರಲ್ಲೇ ಲೋಕದ ಹಿತ ಅಡಗಿದೆ. ‘ಇಸ್ಲಾಮ ಧರ್ಮದಲ್ಲಿ ಯಾವ ಸಂಗೀತ ನಾದವನ್ನು ಹರಾಂ ಎಂದು ಪರಿಗಣಿಸುತ್ತಾರೆ?’ ಎಂದು ಮಹಾನ್ ಸೂಫಿ ಜಲಾಲುದ್ದೀನ್ ರೂಮಿ ಅವರನ್ನು ಕೇಳಿದಾಗ ಅವರು ಹೇಳಿದ ಉತ್ತರ ಮಾರ್ಮಿಕವಾಗಿದೆ. ‘ಶ್ರೀಮಂತರ ಮನೆಯ ಪಾತ್ರೆಗಳಲ್ಲಿನ ಸೌಟುಗಳ ಸಪಳದಿಂದ ಹೊರಡುವ ನಾದ, ಬಡವರು ಮತ್ತು ಹಸಿದವರ ಕಿವಿಗೆ ಬೀಳುವಾಗ ಹರಾಂ ಆಗಿರುತ್ತದೆ.’

‘ಧರ್ಮ ಅಂದರೆ ಇಷ್ಟೇ, ಅಂತಃಕರಣ, ಅಂತಃಕರಣವೇ ಎಲ್ಲ ಧರ್ಮಗಳ ಧರ್ಮ. ಅದು ಯಾವ ಧರ್ಮದಿಂದ ಬಂದರೆ ಏನು ಸಮಸ್ಯೆ? ಮತಧರ್ಮದ ವಿಷಯದಲ್ಲಿ ಜಗಳವಾಡಬೇಡ.

ಸಾಂಗತ್ಯ ಶ್ಲಾಘನೀಯವಾದುದು. ಸತ್ಯದ ಮೇಲೆ ನಿನ್ನ ಸಂಪೂರ್ಣ ಸ್ವಾಮ್ಯವಿದೆ ಎಂದು ಕಲ್ಪನೆ ಮಾಡಿಕೊಳ್ಳಬೇಡ. ನಿನ್ನ ಸ್ವಾಮ್ಯ ಇಲ್ಲದೆ ಇರಬಹುದು. ಯಾವ ಮತಧರ್ಮವೂ ಸತ್ಯದ ಮೇಲೆ ಪೂರ್ಣ ಸ್ವಾಮ್ಯ ಹೊಂದಿರುವುದಿಲ್ಲ. ನೀನು ಬೇರೆ ಬೇರೆ ರೀತಿಗಳಲ್ಲಿ ಹಾಗೂ ಬೇರೆ ಬೇರೆ ವ್ಯಕ್ತಿಗಳಲ್ಲಿ ಅಭಿವ್ಯಕ್ತಿಯಾಗುವ ದೇವರನ್ನು ಅರಿಯಲು ಪ್ರಯತ್ನಿಸು. -ಎರಡೂವರೆ ಸಾವಿರ ವರ್ಷಗಳಷ್ಟು ಹಿಂದಿನ ಅಶೋಕನ ಶಿಲಾಶಾಸನವೊಂದು ಹೀಗೆ ಹೇಳಿದೆ.

O ರಂಜಾನ ದರ್ಗಾ

Related Articles

Leave a Reply

Your email address will not be published. Required fields are marked *

Back to top button