ಇತಿಹಾಸ

ಅಂಬೇಡ್ಕರರ ಕೂದಲನ್ನೂ ಕತ್ತರಿಸಲು ನಿರಾಕರಿಸಿದರು

ಡಾ.ಬಾಬಾ ಸಾಹೇಬರ ನೆನಹಿನಲ್ಲಿ

Spread the love

ಅಂಬೇಡ್ಕರರ ಕೂದಲನ್ನೂ ಕತ್ತರಿಸಲು ನಿರಾಕರಿಸಿದರು

ಎಂತೆಂತವರ ಕೂದಲನ್ನು ಕತ್ತರಿಸುತ್ತಿದ್ದ ಕ್ಷೌರಿಕ ತನ್ನ ಕೋಮಲವಾದ ಕೂದಲನ್ನು ಕತ್ತರಿಸಲು ನಿರಾಕರಿಸಿದಾಗ ದುಃಖಿಸುತ್ತಾ ಮನೆಗೆ ಬಂದ ಬಾಲಕ ಬೀಮನನ್ನು ಅತನ ಅಕ್ಕಂದಿರು ಸಂತೈಸುತ್ತಾರೆ. ತಾವೇ ಆತನ ತಲೆ ಕೂದಲನ್ನು ಕತ್ತರಿಸುತ್ತಾರೆ…”….

ಹೀಗೆ ಮಿಲಾಗ್ರಿಸ್ ಶಾಲೆಯಲ್ಲಿ ಕನ್ನಡ ಮೇಸ್ಟ್ರು ಪಾಠ ಮಾಡ್ತಾ ಇರುವಾಗ ಅಟೆಂಡರ್ ಪುರಂದರ ಹಾಜರಿ ಪುಸ್ತಕ ತೆಗೆದುಕೊಂಡು ಬರ್ತಾನೆ. ಭಟ್ರು ಮೇಸ್ಟ್ರು ಜರುಗಿಕೊಂಡು ಅತನಿಗೆ ಕೈ ತಾಕದಂತೆ ಎಚ್ಚರ ವಹಿಸುತ್ತಾರೆ. ಪುರಂದರ ಕೊರಗ ಜನಾಂಗಕ್ಕೆ ಸೇರಿದವನಾಗಿದ್ದ.

ಎಲ್ಲಾ ಮಕ್ಕಳ ಹಾಜರಿ ಹಾಕಿದ ಬಳಿಕ ಇನ್ನೊಬ್ಬ ಅಡೆಂಡರ್ ವಿಲ್ಸನ್ ಹಾಜರಿ ಪುಸ್ತಕ ತೆಗೆದುಕೊಂಡು ಹೋಗಲು ಬಂದಾಗ ಮೇಸ್ಟ್ರು ಅವನ ಕೈಗೇ ಹಾಜರಿ ಪುಸ್ತಕ ಕೊಡುತ್ತಾರೆ ‌. ಕೆಲವು ಸಲ ಕೈ ತಾಗುತ್ತದೆ.

ಇದು ನನ್ನ ಜೀವನದಲ್ಲಿ ನಾನು ಕಣ್ಣಾರೆ ನೋಡಿದ ದೃಶ್ಯ.

ಆವತ್ತಿನಿಂದ ಇಡೀ ಅಂಬೇಡ್ಕರ್ ರ ಜೀವನ ಚರಿತ್ರೆಯನ್ನು ಓದಿದೆ‌.

ಮಠದಲ್ಲಿ ಇಪ್ತಾರ್ ನಡೀತದೆ.
ಅದರೆ ಅದೇ ಊರಿನ ಮೂಲನಿವಾಸಿಗಳಾದ ಕೊರಗರಿಗೆ ಊಟ ಹಾಕುವುದಿಲ್ಲ. ‌

ಬ್ರಾಹ್ಮಣರ ಮನೆಗಳಲ್ಲಿ ರೇಷ್ಮಾ ಬಾನು , ಜೆಸಿಂತಾ ಬಾವಿಯಿಂದ ನೀರು ಸೇದಬಹುದಿತ್ತು , ಸುಜಾತ , ನಿರ್ಮಲ ದೂರ ನಿಲ್ಲಬೇಕಿತ್ತು…

ಈ ಎಲ್ಲಾ ಸೂಕ್ಷಗಳನ್ನು ಅರ್ಥಮಾಡಿಕೊಳ್ಳಿ..
ಅದರ ಮೂಲ ಎಲ್ಲಿದೆ ಹುಡುಕಿ.

ಪ್ರಗತಿಪರರೆಲ್ಲಾ ಸೇರಿ “ಉಡುಪಿ ಚಲೋ ” ಮಾಡ್ತಾರೆ. ಅದಕ್ಕೆ ಪ್ರತಿಯಾಗಿ ಸೂಲಿಬೆಲೆಯ ಅದೇಶದಂತೆ ಬಲಪಂಥೀಯರು ಉಡುಪಿ ಶುದ್ದ ಮಾಡುವ ಕೆಲಸ ಮಾಡುತ್ತಾರೆ. ಗೋಮೂತ್ರ ಸಿಂಪಡಿಸಿ ಶುದ್ದ ಮಾಡುವಾಗಲೂ ಪಂಕ್ತಿಬೇದ ಇರುತ್ತದೆ. ಬ್ರಾಹ್ಮಣರು ದೇವಸ್ಥಾನದ ಒಳಾಂಗಣ ಶುದ್ದ ಮಾಡಿದ್ದರೆ ,ಜನಿವಾರ ಇರುವ ಆದರೆ ಬ್ರಾಹ್ಮಣರಲ್ಲದ ಇತರ ಜಾತಿಯವರು ಹೊರಾಂಗಣ ,ರಥಬೀದಿ ಶುದ್ದ ಮಾಡ್ತಾರೆ.ಬಿಲ್ಲವರೇ ಮುಂತಾದ ಜಾತಿಗಳವರು ರಥ ಬೀದಿಯ ಹೊರಗೆ ,ರಸ್ತೆ ಮೋರಿಗಳಿಗೆ ಗೋಮೂತ್ರ ಹಾಕ್ತಾರೆ.

ಉಡುಪಿಯ ” ಹಿಂದೂಧರ್ಮ ಸಂಸದ್ ” ಗೆ ಕಟ್ಟುವ ಬ್ಯಾನರ್ ನಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಇರ್ತದೆ.
ನಾಲ್ಕಾರು ಬಿಲ್ಲವ ಹುಡುಗರು ಇನ್ನಿಬ್ಬರು ಭಟ್ಟರ ಹುಡುಗರ ಜೊತೆಗೆ DTP ಮಾಡುವ ಮಾಣಿಯ
ಮನೆಗೆ ಹೋಗ್ತಾರೆ. ಅಲ್ಲಿ computer ಮನೆಯ ಒಳಗೆ ಇರುತ್ತದೆ. ಭಟ್ಟರ ಹುಡುಗರು ಒಳಗೆ ಹೋದರೆ ಬಿಲ್ಲವ ಹುಡುಗರು ಅಂಗಳದಲ್ಲೇ ಕಾಯ್ತಾರೆ.ಭಟ್ರ ಸೊಸೆ ಕಾಪಿ ಕೊಟ್ಟರೆ ಕುಡಿದು ಲೋಟ ತೊಳೆದು ಅಲ್ಲೇ ಇಡ್ತಾರೆ‌‌..

ಎಲ್ಲಾ ವಾಸ್ತವಗಳನ್ನು ಅರಗಿಸಿಕೊಂಡು ಬೆಳೆದವರಿಗೆ ಮಾತ್ರ ಅಂಬೇಡ್ಕರ್ ಮತ್ತು ಮಹಾತ್ಮಾ ಗಾಂಧಿ ಆದರ್ಶವಾಗ್ತಾರೆ.

ಈವತ್ತು social mediaದಲ್ಲಿ ಮಹಾತ್ಮಾ ಗಾಂಧಿಯವರನ್ನು ವಾಚಾಮಗೋಚರ ಟೀಕಿಸುತ್ತಾ ಅವರ ಚರಿತ್ರೆ ತಿರುಚಿಬರೆಯುತ್ತಿರುವ , ಆ ಒಂದು ವರ್ಗದವರಿಗೆ , ಗಾಂಧಿಗಿಂತ ನೂರು ಪಾಲು ದ್ವೇಷ ಅಂಬೇಡ್ಕರ್ ಮೇಲಿದೆ. ಅಂಬೇಡ್ಕರ್ ಅನುಯಾಯಿಗಳು ಅಷ್ಟು ಗಟ್ಟಿಯಾದ ಸಂಘಟನೆ ಕಟ್ಟಿಕೊಂಡಿರುವುದರಿಂದ ಮಾತಾಡಲು ದಮ್ ಇಲ್ಲ ಅಷ್ಟೇ..

ಅವುಗಳೇ ಇರುವ WhatsApp ಗ್ರೂಪ್ ಗಳಿಗೊಮ್ಮೆ ಹಣಕಿಹಾಕಿ ನೋಡಿ. ಅಲ್ಲಿ ಗಾಂಧಿ ,ಅಂಬೇಡ್ಕರ್ ಮಾತ್ರ ಅಲ್ಲ ವರನಟ ರಾಜಕುಮಾರ್, ಬಸವಣ್ಣ , ಕನಕದಾಸರಂತವರ ಬಗ್ಗೆ ಕೂಡಾ ಅಸೂಯೆಯ ಜ್ವಾಲೆ ಉಕ್ಕಿ ಹರೀತಾ ಇರುತ್ತದೆ.

ಜಾತಿ ವ್ಯವಸ್ಥೆ ,ತಾರತಮ್ಯ ಇವತ್ತು‌
ದೇಶದ ಸಂಪತ್ತು ರಾಜಾಶ್ರಯದಿಂದಾಗಿ ಮತ್ತು ಬ್ರಿಟೀಷರ ಬೂಟು ನೆಕ್ಕಿದ ಕಾರಣಕ್ಕೆ ಪಡೆದ ಕೆಲವರದೇ ಕೈಯಲ್ಲಿ ಇರಲು ಕಾರಣವಾಗಿದೆ.

ಜಾತಿಯೊಳಗೇ ಮದುವೆ ಆಗಿ ಅಗಿ ಕ್ರೋಮೋಸೋಮ್ ಸ್ಟ್ರಕ್ಚರ್ ಸವಕಲಾಗಿದೆ. ನೂರ ಮೂವತ್ತು ಕೋಟಿ ಜನಸಂಖ್ಯೆ ಇರುವ ದೇಶಕ್ಕೆ ಒಲಿಂಪಿಕ್ ನಲ್ಲಿ ಬೆರಳೆಣಿಕೆಯಷ್ಟು ಪದಕಗಳ ಸಿಗಲು ಇದೇ ಕಾರಣ.

ಇವತ್ತಿಗೂ ಅಂಬೇಡ್ಕರ್ ರನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ದೇಶ ಖಂಡಿತಾ ಉದ್ದಾರ ಆಗುತ್ತದೆ.
ಅದಕ್ಕೂ ಮೊದಲು ಪುರೋಹಿತಶಾಹಿಯ ಮೋಸದ ಅರಿವಾಗಬೇಕು.

ಅಂಬೇಡ್ಕರ್ ಸ್ಮರಣೆಯ ಸಂದರ್ಭದಲ್ಲಿ ನೆನಪಾಗಿದ್ದು ಬರೆದೆ…

ಲೋಕೇಶ್ ಪೂಜಾರ

Related Articles

Leave a Reply

Your email address will not be published. Required fields are marked *

Back to top button