ದೇಶದ ಭವಿಷ್ಯಕ್ಕಾಗಿ ತನ್ನೆಲ್ಲ ಪರಿಶ್ರಮ ಧಾರೆ ಎರೆದ ಡಾ.ಬಾಬಾ ಸಾಹೇಬ

ಭಾರತದ ಇತಿಹಾಸವನ್ನು ಗಮನಿಸಿದರೆ ಎಲ್ಲರೂ ಸಮಾನವಾಗಿ ಶಿಕ್ಷಣ ಪಡೆಯುವಂತಹ ವಾತಾವರಣ ನಿರ್ಮಾಣವಾಗಿದ್ದು ಬಾಬಾ ಸಾಹೇಬರ ಸಂವಿಧಾನದ ನಂತರವೇ ಎಂಬುದನ್ನು ಆತ್ಮಸಾಕ್ಷಿ ಇರುವ ಎಲ್ಲರೂ ಒಪ್ಪಬೇಕು. ಶಿಕ್ಷಣವನ್ನು ಪಡೆಯುವ ಉದ್ದೇಶ ಏನಾಗಿರಬೇಕು ಎಂಬುದನ್ನು ಸಾಧಿಸಿ ತೋರಿಸಿದ ಯಾರಾದರೂ ಇದ್ದರೆ ಅದು ಬಾಬಾ ಸಾಹೇಬರು ಮಾತ್ರ
ಸ್ವಯಂ ಹಿತಕ್ಕಾಗಿ , ಆತ್ಮದ ನೆಮ್ಮದಿಗಾಗಿ ನಿರಂತರ ಅಧ್ಯಯನ ಮಾಡಿದ ಬಹಳಷ್ಟು ಜನರು ನಮಗೆ ಸಿಗುತ್ತಾರೆ. ಆದರೆ ಒಂದು ದೇಶದ ಹಿತಕ್ಕಾಗಿಯೇ ತನ್ನೆಲ್ಲಾ ಶಿಕ್ಷಣ ಮತ್ತು ಅಧ್ಯಯನದ ಶ್ರಮವನ್ನು ಬಳಸಿದ್ದ ವಿಶ್ವದ ಏಕೈಕ ವ್ಯಕ್ತಿ ಎಂದರೆ ಅದು ಬಾಬಾ ಸಾಹೇಬರು ಮಾತ್ರ.
ಈ ದಿನ ಶಿಕ್ಷಣದ ಉದ್ದೇಶ ಅದಾಗಿರಬೇಕು ಇದಾಗಿರಬೇಕು ಎಂದು ಬಹಳಷ್ಟು ಉಪದೇಶಗಳನ್ನು ಕೇಳಿದ್ದೇವೆ, ಈಗಲೂ ಕೇಳುತ್ತಲೇ ಇದ್ದೇವೆ. ಆದರೆ ಶಿಕ್ಷಣವನ್ನು ಸಮಾಜದ ಏಳಿಗೆಗೆ ಸಹ ಜೀವಿಗಳ ಸಮಾನ ಘನತೆಯ ಬದುಕನ್ನು ನಿರ್ಮಿಸಲು ಬಳಸಿದ ಯಾರಾದರೂ ಒಬ್ಬ ವ್ಯಕ್ತಿ ಇದ್ದರೆ ಅದು ಬಾಬಾ ಸಾಹೇಬರೇ ಹೊರತು ಮತ್ತಾರೂ ಅಲ್ಲ.
ಬಾಬಾ ಸಾಹೇಬರು ವ್ಯಾಸಂಗ ಮಾಡಿದ ಬಹಳಷ್ಟು ಶಿಕ್ಷಣ ಸಂಸ್ಥೆಗಳಲ್ಲಿರುವ ಜನರ ಪ್ರಕಾರ ” ಗ್ರಂಥಾಲಯವನ್ನು ಅತಿ ಹೆಚ್ಚಾಗಿ ಬಳಸಿದ ವಿಶ್ವದ ಏಕೈಕ ವ್ಯಕ್ತಿ ಎಂದರೆ ಅಂಬೇಡ್ಕರ್ “.
ಅವರು ತಮ್ಮ ಬದುಕಿನ ಬಹಳಷ್ಟು ಭಾಗವನ್ನು ಕತ್ತಲಲ್ಲೇ ಕೂತು ಅಂಧಕಾರದ ಕೂಪದಲ್ಲಿ ಬೇಯುತ್ತಿದ್ದ ಭಾರತೀಯರ ಅಸಮಾನ, ಅಜ್ಞಾನ ಮತ್ತು ಮೌಢ್ಯದ ಸಮಾಜದಲ್ಲಿ, ಒಂದು ಸಮಾನತೆಯ ಬೆಳಕಿನ ಕ್ರಾಂತಿಯನ್ನೇ ಎಬ್ಬಿಸಿದರು.
ನೀವು ಎಲ್ಲೇ ಶಿಕ್ಷಣ ಪಡೆಯಿರಿ, ನಿಮ್ಮ ಶಿಕ್ಷಣ ಪಡೆದ ಉದ್ದೇಶ ಏನಾಗಿರಬೇಕು? ಶಿಕ್ಷಣ ಪಡೆದ ಮೇಲೆ ಅದರಿಂದ ಸಮಾಜಕ್ಕೆ ಹೇಗೆ ಸಹಾಯ ಮಾಡಬೇಕು ಎಂಬುದಕ್ಕೆ ನಿಮಗೆ ಬಾಬಾ ಸಾಹೇಬರೇ ಮಾದರಿಯಾಗಬೇಕು.
ಮನುವಾದಿಗಳು ನಿರ್ಮಿಸಿದ ಕತ್ತಲೆ ಇಲ್ಲಿ ಸಹವಾಗಿರಬಹುದು.ಆದರೆ ಬಾಬಾ ಸಾಹೇಬರು ಅದೇ ಕತ್ತಲಲ್ಲಿ ಕೂತು ತೋರಿದ ಜ್ಞಾನದ ಬೆಳಕಿನ ದಿಕ್ಕು ಇದೆಯಲ್ಲಾ ಅದು ನಮ್ಮ ಜಗತ್ತನ್ನು ತಪ್ಪದೇ ಕಾಯುತ್ತದೆ.
ಡಾ.ಎಚ್.ಸಿ.ಮಹಾದೇವಪ್ಪ
ಸಚಿವರು ಕರ್ನಾಟಕ ಸರಕಾರ