ಪ್ರಚಲಿತ ಸಂಗತಿ

ವಿಶ್ವ ಗುರು ಬಸವಣ್ಣನವರು

Spread the love

ಬಸವಣ್ಣನೆ ತಾಯಿ, ಬಸವಣ್ಣನೇ ತಂದೆ
ಬಸವಣ್ಣನೇ ಪರಮ ಬಂಧುವೆನಗೆ
ವಸುಧೀಶ ಕಪಿಲಸಿದ್ಧ ಮಲ್ಲಿಕಾರ್ಜುನ
ನಿಮ್ಮ ಹೆಸರಿಟ್ಟ ಗುರು ಬಸವಣ್ಣನಯ್ಯಾ

ಹನ್ನೆರಡನೆಯ ಶತಮಾನದ ಬಸವಣ್ಣನವರ ಕುರಿತು ಸಮಕಾಲೀನ ಶರಣರು ಹೇಳಿದ ವಚನಗಳು ಸಾರ್ವಕಾಲಿಕ ಸತ್ಯ. ಬಸವಣ್ಣನವರೆಂಬ ವಿಶ್ವ ವಿಭೂತಿ ಪುರುಷ ಇಲ್ಲದಿದ್ದರೆ ಕರ್ನಾಟಕದ ಲಿಂಗಾಯತರಿಗೆ ಯಾವುದೆ ರೀತಿಯ ಅಸ್ಮಿತೆ ಇರಲು ಸಾಧ್ಯವಿಲ್ಲ. ಬಸವಣ್ಣವರು ಜಗತ್ತು ಕಂಡ ಅತ್ಯದ್ಭುತ ವ್ಯಕ್ತಿತ್ವಗಳಲ್ಲಿ ಮೊದಲಿಗರು. ಅಲ್ಲಮಪ್ರಭುವೆಂಬ ಬೆರಗು ಬಸವಣ್ಣನವರನ್ನು ಅಪ್ಪಿಕೊಂಡು -ಒಪ್ಪಿಕೊಂಡು ಎನಗೆಯೂ ಗುರು. ನಿನಗೆಯೂ ಗುರು. ಜಗವೆಲ್ಲಕ್ಕೆಯೂ ಗುರು ಕಾಣಾ ಗುಹೇಶ್ವರ ಎಂದು ಹೃದಯ ತುಂಬಿ ನುಡಿಯುತ್ತಾರೆ. ಅಲ್ಲಮಪ್ರಭುಗಳು ಈಗಾಗಲೇ ದಾರ್ಶನಿಕರು ಬಲ್ಲಂತೆ ಅವರೊಂದು ವ್ಯೂಮ ಕಾಯದ ವ್ಯಕ್ತಿ. ಮಹಾಜ್ಞಾನಿ. ಬಯಲು ಬಯಲನು ಬಿತ್ತಿ ಬಯಲು ಬಯಲಾಗಿ ಬೆಳೆದು, ಬಯಲಾಗಿ ಹೋದವರು. ಇಂಥವರು ಎಂದಿಗೂ ಯಾರ ಮುಲಾಜಿ ಮುರುವತ್ತುಗಳಿಗೆ ಒಳಗಾಗದವರು. ಇದ್ದದ್ದು ಇದ್ದಂತೆ ಹೇಳಿ ಮುನ್ನಡೆದು ಬಿಡುವವರು.

ಬನವಾಸಿಯ ನಾಡಿನಿಂದ ಬಸವಣ್ಣನವರ ವ್ಯಕ್ತಿತ್ವಕ್ಕೆ ಮಾರು ಹೋಗಿ ಹುಡುಕುತ್ತ ಬಂದವರು. ಅನರ್ಥ ಕೆಲಸಗಳನ್ನೆ ದೇವಕಾರ್ಯ ಎಂದು ಮಾಡುತ್ತಿದ್ದ, ಭ್ರಮೆಗಳಲ್ಲಿ ಓಲಾಡುತ್ತಿದ್ದ ಸೊನ್ನಲಿಗೆಯ ಸಿದ್ಧರಾಮ ಶರಣರನ್ನು ತದಕಿ-ಬೆದಕಿ-ಬೆರಗುಗೊಳಿಸಿ ಬಸವಣ್ಣನವರ ಕಾರ್ಯ ತತ್ಪರತೆಯನ್ನು ಅರುಹಿಸಿ, ಅವರನ್ನೂ ಕರಕೊಂಡು ಬಂದವರು.

ಈ ಸಂಗತಿಗಳನ್ನೆಲ್ಲ ನಾನಿಲ್ಲಿ ಪ್ರಸ್ತಾಪಿಸಿದ ಉದ್ದೇಶ ಇಷ್ಟೆ :
ಇದೆ ತಿಂಗಳು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಪೂಜ್ಯ ಶ್ರೀ ಹಾನಗಲ್ಲ ಕುಮಾರಸ್ವಾಮಿಗಳ ಕುರಿತ ಪ್ರವಚನವನ್ನು ಹಂದಿಗುಂದ ಶ್ರೀ.ಶಿವಾನಂದ ಸ್ವಾಮೀಜಿಗಳು ನಡೆಸಿದ್ದಾರೆ. ನಾಡಿನ ಬಹುತೇಕ ಮಠಾಧೀಶರು ಹೆಚ್ಚು ಸಂಖ್ಯೆಯಲ್ಲಿ ಸೇರಿಕೊಂಡು ಈ ಸಮಾರಂಭವನ್ನು ಮಾಡುತ್ತಿದ್ದಾರೆ. ತಾವು ಓದಿದ ಪಾಠ ಶಾಲೆಯನ್ನು ಸಂಸ್ಥಾಪಿಸಿದ, ಸಮಾಜದಲ್ಲಿ ಕಾವಿ ಬಟ್ಟೆಗೆ ತನ್ನದೆ ಆದ ಅಸ್ತಿತ್ವವನ್ನು ಕಟ್ಟಿಕೊಟ್ಟ, ಕುಮಾರ ಸ್ವಾಮೀಜಿಗಳ ಕುರಿತು ಪ್ರವಚನ ನಡೆಸುವುದು ತಪ್ಪಲ್ಲ. ಇದು ನಿಜಕ್ಕೂ ಮಾದರಿಯಾದ ನಡವಳಿಕೆ. ಇಂದು ರಾಜ್ಯದ ತುಂಬೆಲ್ಲ ಇರುವ ಮಠ ಹಾಗೂ ಮಠಾಧೀಶರಿಗೆ ಜೀವ ಜೀವಾಳವೆ ಕುಮಾರ ಸ್ವಾಮಿಗಳು. ಇದರಲ್ಲಿ ಯಾವುದೆ ಅನುಮಾನವೆ ಬೇಡ.

ಆದರೆ ಪೂಜ್ಯ ಶ್ರೀ ಹಾನಗಲ್ಲ ಕುಮಾರ ಸ್ವಾಮೀಜಿಗಳ ಆದಿಯಾಗಿ, ಹಿಂದಿನ ಶರಣ ಶರಣಿಯರಿಗೆಲ್ಲ, ಹಾಗೂ ಲಿಂಗಾಯತ ಧರ್ಮದ ಎಲ್ಲರಿಗೂ ಧರ್ಮ ತಂದೆ ಒಬ್ಬರೆ ಒಬ್ಬರು, ಅವರು ಬಸವಣ್ಣನವರು ಮಾತ್ರ. ತಮ್ಮ ಗುರುಗಳ ಸ್ಮರಣೆಯನ್ನು ಅದ್ಧೂರಿಯಾಗಿ ರಾಜ್ಯದ ಬಹುತೇಕ ವಿರಕ್ತ ಮಠಾಧೀಶರೆಲ್ಲ ಒಂದು ಕಡೆ ಸೇರಿ ಆಚರಿಸಬಹುದಾದರೆ, ಲಿಂಗಾಯತ ಧರ್ಮದ ತಾಯಿ ಬೇರು, ವೃಕ್ಷ, ಎಲೆ, ಹೂ,ಕಾಯಿ, ಪರಿಮಳ ಎಲ್ಲವೂ ಆಗಿರುವ ಬಸವಣ್ಣನವರ ಜಯಂತಿಯನ್ನು ಎಷ್ಟು ಅದ್ಧೂರಿಯಾಗಿ, ಅರ್ಥ ಪೂರ್ಣವಾಗಿ ಆಚರಿಸ ಬಹುದಲ್ಲವೆ ? ಈ ಕೆಲಸವನ್ನು ನಾಡಿನ ವಿರಕ್ತ ಮಠಾಧೀಶರು ಯಾಕೆ ಮಾಡುತ್ತಿಲ್ಲ ಎಂದು ಕಳವಳದಿಂದ ಪ್ರಶ್ನೆ ಮಾಡಬೇಕಿದೆ.

ಪೂಜ್ಯ ಹಾನಗಲ್ಲ ಕುಮಾರ ಸ್ವಾಮೀಜಿಗಳು ಎದುರಿಸಿದ ಸಮಸ್ಯೆಗಳು ಬೇರೆ ಬೇರೆ. ಅಂದಿನ ಕಾಲಕ್ಕೆ ಅಗತ್ಯವಾಗಿ ವೈದಿಕತ್ವವನ್ನು ಮಠಾಧೀಶರ ಮೂಲಕ ಬೋಧಿಸಬೇಕಾಗಿತ್ತು. ಇಲ್ಲದೆ ಹೋದರೆ ಅಂದಿನ ಬ್ರಾಹ್ಮಣ ಮಠಾಧೀಶರ ಕಾಲ ಕಸಕ್ಕೂ ಇವರನ್ನು ಸಮೀಕರಿಸುತ್ತಿರಲಿಲ್ಲ. ವೇದ ಶಾಸ್ತç ಆಗಮ ಓದಿದವನು ದೊಡ್ಡವನು ಎಂಬ ಭ್ರಮೆಗಳಲ್ಲಿ ಓಲಾಡುತ್ತಿದ್ದ ಕಾಲವದು. ಅಷ್ಟಕ್ಕೂ ಆಗ ವಚನ ಸಾಹಿತ್ಯ ಈಗಿನಂತೆ ಜನಮಾನಸವನ್ನು ತಲುಪಿರಲಿಲ್ಲ. ಅಷ್ಟೇ ಏಕೆ ಹಾನಗಲ್ಲ ಕುಮಾರ ಸ್ವಾಮೀಜಿಗಳಿಗೂ ವಚನ ಸಾಹಿತ್ಯದ ಬಗೆಗೆ ಆಳವಾದ ಅಧ್ಯಯನ ಇರಲಿಲ್ಲ. ಫ.ಗು.ಹಳಕಟ್ಟಿಯವರ ಪರಿಶ್ರಮದ ಮೂಲಕ ಆಗ ತಾನೆ ಕಣ್ಬಿಡುತ್ತಿದ್ದ ವಚನ ಸಾಹಿತ್ಯದ ಕುರಿತು, ಶರಣರ ಕುರಿತು ಹಾನಗಲ್ಲ ಕುಮಾರ ಸ್ವಾಮೀಜಿಗಳಿಗೆ ಪ್ರೀತಿ- ಅಭಿಮಾನ – ಗೌರವ ಇತ್ತು. ಲಿಂಗಾಯತ ಧರ್ಮದ ಅಷ್ಟಾವರಣ ಪಂಚಾಚಾರ ಷಟಸ್ಥಳಗಳ ಅರಿವು ಇತ್ತು.ಆದರೆ ಶಿವಯೋಗ ಮಂದಿರವನ್ನವರು ವೈದಿಕತ್ವದ ಆಧಾರದ ಮೇಲೆ ಕಟ್ಟಿದರು. ಬಹುಶಃ ಅವರು ವಚನ ಸಾಹಿತ್ಯವನ್ನು ತಳಹದಿಯನ್ನಾಗಿ ಇಟ್ಟುಕೊಂಡು ಶಿವಯೋಗ ಮಂದಿರವನ್ನು ಕಟ್ಟಿದ್ದೇ ಆಗಿದ್ದರೆ ಕರ್ನಾಟಕದ ಲಿಂಗಾಯತರು ಜಗತ್ತಿಗೆ ಮಾರ್ಗದರ್ಶಿಯಾಗುತ್ತಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ.

ನಮ್ಮ ರಾಜ್ಯದ ಮಲ್ಲಯ್ಯ, ಕಲ್ಲಯ್ಯ, ಬಸಯ್ಯ ಇತ್ಯಾದಿ ವ್ಯಕ್ತಿಗಳು ಸಂಸ್ಕೃತ ಭಾಷೆ ಕಲಿಯಬೇಕಾದರೆ ಕಲ್ಲಯ್ಯ ಶಾಸ್ತಿç, ಮಲ್ಲಯ್ಯ ಶಾಸ್ತಿç, ಬಸವಯ್ಯ ಶಾಸ್ತಿç ಎಂದು ಹೆಸರು ಬದಲಿಸಿಕೊಂಡು ಕಾಶಿಯಲ್ಲಿ ಹೋಗಿ ಸಂಸ್ಕೃತದಲ್ಲಿದ್ದ ವೇದ ಶಾಸ್ತç ಆಗಮಗಳನ್ನು ಅಧ್ಯಯನ ಮಾಡಬೇಕಾಗಿತ್ತು. ಅದು ಅಷ್ಟು ಸುಲಭಕಾರ್ಯವಾಗಿರಲಿಲ್ಲ. ಇದನ್ನೆಲ್ಲ ಮನಗಂಡಿದ್ದರಿAದಲೆ ಹಾನಗಲ್ಲ ಕುಮಾರ ಸ್ವಾಮೀಜಿಗಳು ಶಿವಯೋಗ ಮಂದಿರವನ್ನು ಸ್ಥಾಪಿಸಿದರು. ಅಂದಿನ ಅಗತ್ಯಕ್ಕೆ ಅನುಗುಣವಾಗಿ ವೈದಿಕತ್ವದ ಪಠ್ಯವನ್ನೆ ಅಲ್ಲಿಯ ವಿದ್ಯಾರ್ಥಿಗಳಿಗೆ ಅಳವಡಿಸಿದರು. ವೇದ ಶಾಸ್ತç ಆಗಮ ಪುರಾಣ ಓದಿ ಬಂದ ಮಠಾಧೀಶರು ರಾಜ್ಯದ ತುಂಬೆಲ್ಲ ಇರುವ ಮಠಗಳಿಗೆ ನಿಯುಕ್ತರಾದರು. ಅವರು ವಿರಕ್ತ ಅಥವಾ ಪಂಚಾಚಾರ್ಯ ಮಠಕ್ಕೆ ಹೋದರೂ ಸಹ ವೈದಿಕತ್ವವನ್ನೇ ಪ್ರಮುಖವಾಗಿ ಆಚರಿಸಿಕೊಂಡು ಬಂದರೆ ಹೊರತು ಲಿಂಗಾಯತ ಧರ್ಮದ ಆಚರಣೆಗಳನ್ನಲ್ಲ ಎಂದು ಅತ್ಯಂತ ವಿನಮ್ರವಾಗಿ ಹೇಳಬಯಸುತ್ತೇನೆ.

ಇಷ್ಟಕ್ಕೂ ನಾಡಿನ ಬಹುತೇಕ ವಿರಕ್ತ ಮಠಗಳು ಬಸವ ಪ್ರಣೀತ ಲಿಂಗಾಯತ ಧರ್ಮದ ಮೂಲ ತಿರುಳಾದ ದಾಸೋಹವನ್ನು ನೆಚ್ಚಿಕೊಂಡು ಮುನ್ನಡೆದರು. ಅನ್ನ ದಾಸೋಹದ ಜೊತೆಗೆ ಜ್ಞಾನ ದಾಸೋಹವನ್ನು ನಾಡಿನ ತುಂಬೆಲ್ಲ ಹಬ್ಬಿಸಿದರು. ಈಗ ರಾಜ್ಯದ ತುಂಬೆಲ್ಲ ಜನ ಶೈಕ್ಷಣಿಕವಾಗಿ ಮುಂದುವರೆದಿದ್ದಾರೆAದರೆ ಅದಕ್ಕೆ ವಿರಕ್ತ ಮಠಾಧೀಶರೆ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಶೈಕ್ಷಣಿಕ ಕ್ರಾಂತಿಯ ಹರಿಕಾರರಾದ ವಿರಕ್ತ ಮಠಾಧೀಶರು ಲಿಂಗಾಯತ ಧರ್ಮದ ತಂದೆ ಬಸವಣ್ಣನವರನ್ನು ಸಂಪೂರ್ಣ ಅಪ್ಪಿಕೊಳ್ಳದೆ ಹೋಗಿದ್ದರ ಪರಿಣಾಮ ಲಿಂಗಾಯತ ಧರ್ಮಿಯರು ಸಹ ಕರ್ಮಠರಾಗಿ ಉಳಿದು ಬಿಟ್ಟಿದ್ದಾರೆ. ವೈದಿಕತ್ವದ ತಳಹದಿಯ ಮೇಲೆ ರೂಪಿತವಾಗಿರುವ ಮಡಿ ಮೈಲಿಗೆ ಕರ್ಮಠ ಆಚರಣೆ ಪೂಜೆ ಪುನಸ್ಕಾರ ದೇಗುಲ ನಿರ್ಮಾಣ, ಯಜ್ಞ,ಯಾಗಗಳು ಯಥೇಚ್ಛವಾಗಿ ನಡೆಯುತ್ತಿವೆ.

ಈಗಲೂ ಕಾಲ ಮಿಂಚಿಲ್ಲ. ನಾಡಿನ ವಿರಕ್ತ ಮಠಾಧೀಶರು ತುಂಬಾ ಆಸಕ್ತಿ, ಮುತುವರ್ಜಿ ಹಾಗೂ ಕಾಳಜಿ, ಅಭಿಮಾನಗಳಿಂದ ಪೂಜ್ಯ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳೆಂಬ ಗುರುಗಳ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೋ ಅದರಂತೆ ಧರ್ಮ ಗುರು ಬಸವಣ್ಣನವರ ಬಗೆಗೂ ಅದೆ ಉತ್ಸಾಹ ಪ್ರೀತಿ ಅಭಿಮಾನ ಇಟ್ಟುಕೊಂಡು ಮುನ್ನಡೆದರೆ ಏನಾಗಬಹುದು ? ನಾಡಿನ ಉದ್ದಗಲಕ್ಕೂ ನೋಡ ನೋಡುತ್ತಿರುವಂತೆ ಬಸವಾದಿ ಶರಣರ ಅಂತಃಕರಣದ ಸೆಲೆ ಹರಿಯುತ್ತದೆ. ವಚನಗಳು ಮನೆ ಮನೆಯಲ್ಲೂ, ಮನ ಮನದಲ್ಲೂ ರಿಂಗುಣಿಸುತ್ತವೆ. ಶರಣರ ಚಿಂತನೆಗಳು ನಾಡಿನ ತುಂಬೆಲ್ಲ ಹರಿದಾಡುತ್ತಿದ್ದರೆ ಸಹಜವಾಗಿ ಲಿಂಗಾಯತ ಧರ್ಮಿಯರಲ್ಲಿ ಪರಿವರ್ತನೆ ಬರುತ್ತದೆ.

ಮೌಢ್ಯ,ಕಂದಾಚಾರಗಳು, ಕರ್ಮಠ ಆಚರಣೆಗಳನ್ನೇ ಧರ್ಮ ಎಂದು ನಂಬಿರುವ ಲಿಂಗಾಯತರಿಗೆ ಧರ್ಮಗುರು ಬಸವಣ್ಣನವರು ಬೋಧಿಸಿದ ವಚನ ಸಾಹಿತ್ಯದ ಸಾರವನ್ನು ನಾಡಿನ ಉದ್ದಗಲಕ್ಕೂ ಹಂಚಬಲ್ಲರೆ ? ನಾನು ಈ ಅಮೃತಘಳಿಗೆಗಾಗಿ ಜಾತಕ ಪಕ್ಷಿಯಂತೆ ಕಾದಿದ್ದೇನೆ.

೦ ವಿಶ್ವಾರಾಧ್ಯ ಸತ್ಯಂಪೇಟೆ

Related Articles

Leave a Reply

Your email address will not be published. Required fields are marked *

Back to top button