ಇತಿಹಾಸ

ಲಿಂಗಾಯತ ಮಠಾಧಿಪತಿಗಳೆ ನಿಮ್ಮೊಂದಿಗೆ ನಾವಿದ್ದೇವೆ : ಹೆದರದಿರಿ, ಬೆದರದಿರಿ

Spread the love

ಪೂಜ್ಯ ಶ್ರೀ ಲಿಂಗಾಯತ ಮಠಾಧೀಶರೆ

ಇತ್ತೀಚಿನ ಕೆಲವು ಬೆಳವಣಿಗೆಗಳ ಕಂಡು ಆಂತರ್ಹದಲ್ಲಿ ತಾವು ಕುಗ್ಗಿ ಹೋಗಿರುವ ಸಾಧ್ಯತೆ ಇದೆ ಎಂದು ನಾವು ಭಾವಿಸಿದ್ದೇವೆ. ಯಾವುದಕ್ಕೂ ಮಾನಸಿಕವಾಗಿ ಕುಗ್ಗ ಕೂಡದು ಎಂದು ವಿನಮ್ರವಾಗ ಹೇಳಬಯಸುತ್ತೇವೆ. ಬಸವಾದಿ ಶರಣರ ತತ್ವ ಬದುಕು ಹಾಗೂ ಬೋಧನೆ ತುಂಬಾ ಕಷ್ಟದ್ದು ಎಂದು ನಾವು ನೀವೆಲ್ಲ ಬಲ್ಲ ಸಂಗತಿ. ಶರಣರ ತತ್ವಗಳನ್ನು ಬಿತ್ತುವ ಕಾರ್ಯ ಮಾಡುತ್ತಿರುವ ನಿಮಗೆ ನೂರು ವಿಘ್ನಗಳು ಎದುರಾಗುತ್ತವೆ ಎಂಬುದನ್ನು ನಾವು ಬಲ್ಲೆವು. ಸಂಪೂರ್ಣ ವೈದಿಕರಾಗಿರುವ ಲಿಂಗಾಯತ ಜನ ಸಾಮಾನ್ಯರಿಗೆ ಬಸವಾದಿ ಶರಣರ ಚಿಂತನೆಗಳನ್ನು ಮನ ಮುಟ್ಟುವಂತೆ ಹೇಳಿ ಅವರಲ್ಲಿ ಪರಿವರ್ತನೆ ತರುವುದು ಸರಳ ಕೆಲಸವಲ್ಲ. ಇಂಥ ಕಠಿಣತಮವಾದ ಕೆಲವನ್ನು ಕೈಗೆತ್ತಿಕೊಂಡು ಹೊರಟಿರುವ ನಿಮ್ಮ ಸೇವೆ ಅಮೋಘವಾದುದು.

ಸಾವಿರ ಜನ ವೈದಿಕ ಮಠಾಧೀಶರು ಉಂಡುಂಡು ಮಠದಲ್ಲಿ ಕೊಳೆತು ಹೋಗುತ್ತಿರುವಾಗ ತಾವು ಜನಪರವಾದ ಧ್ವನಿ ಇಟ್ಟುಕೊಂಡು ಹೊರಟಿದ್ದೀರಿ. ಅವರೆಲ್ಲ ಹಾಗೂ ಪಟ್ಟಭದ್ರ ಶಕ್ತಿಗಳ ಕೆಂಗಣ್ಣಿಗೆ ಗುರಿಯಾಗಿ ಈಗಾಗಲೇ ಹಲವು ಆರೋಪಗಳಿಗೆ ತುತ್ತಾಗಿದ್ದೀರಿ. ದಯವಿಟ್ಟು ಸುಳ್ಳು ಸೊಟ್ಟು ಆರೋಪಗಳಿಗೆ ತಮ್ಮ ಅಮೂಲ್ಯವಾದ ಜೀವವನ್ನು ಯಾವತ್ತೂ ಬಲಿಕೊಡಬೇಡಿ. ನಿಮ್ಮ ಒಳಿತು ಕೆಡುಕುಗಳಿಗೆ ಸ್ಪಂದಿಸುವ ತಾಯಿ ಮಮತೆಯ ಬಸವ ತತ್ವವಾದಿಗಳು ನಿಮ್ಮೊಂದಿಗೆ ಇದ್ದಾರೆ ಎಂಬುದನ್ನು ಮರೆಯಬೇಡಿ.

ಆರೋಪಗಳು ಯಾರಿಗೆ ಬರುವುದಿಲ್ಲ ಹೇಳಿ ? ಮಹಾತ್ಮಗಾಂಧಿ, ಜ್ಯೋತಿಬಾ ಪುಲೆ, ಪೆರಿಯಾರ, ಸ್ವಾಮಿ ವಿವೇಕಾನಂದ, ಡಾ.ಬಿ.ಆರ್.ಅಂಬೇಡ್ಕರ ಮುಂತಾದವರಿಗೆ ಆರೋಪಗಳು ಬಂದಿಲ್ಲವೆ ? ಹಿಂಸೆಗೆ ಇವರೆಲ್ಲ ತುತ್ತಾಗಿಲ್ಲವೆ ? ಹಾಗಂತ ಇವರು ತಾವು ನಂಬಿದ ಸಾಮಾಜಿ ಜಾಗೃತಿಯನ್ನು ಬಿಟ್ಟು ಹಿಂದೆ ಸರಿದರೆ ? ಇವರೆಲ್ಲ ಒತ್ತಟ್ಟಿಗಿರಲಿ ನೀವು ನಾವೆಲ್ಲ ಅತಿಯಾಗಿ ಪ್ರೀತಿಸುವ, ಪೂಜಿಸುವ ಗೌರವಿಸುವ ವಿಶ್ವಗುರು ಬಸವಣ್ಣನವರಿಗೆ ಕಾಟ ಕೊಟ್ಟವರು , ಆರೋಪ ಹೊರಿಸಿದವರು ಇದ್ದರಲ್ಲವೆ ?

ಬಿಜ್ಜಳ ಮಹಾರಾಜನ ಭಂಡಾರವನ್ನೇ ಬಸವಣ್ಣ ಲೂಟಿ ಮಾಡುತ್ತಿದ್ದಾರೆ. ತಮ್ಮ ಶರಣ ಗಣ ತಿಂಥಿಣಿಗೆ ಭಂಡಾರದ ಎಲ್ಲಾ ಹಣವನ್ನು ಹಂಚುತ್ತಿದ್ದಾರೆ. ದಾಸೋಹ ಮಾಡುತ್ತಿದ್ದಾರೆ ಎಂದು ದೂರು ನೀಡಿದರು. ತಳ ಸಮುದಾಯದ ಎಲ್ಲರನ್ನು ಬಸವಣ್ಣ ತಮ್ಮ ಅಗ್ರಹಾರಕ್ಕೂ, ರಾಜಬೀದಿಗೂ ಬಿಟ್ಟುಕೊಳ್ಳುತ್ತಿದ್ದಾರೆ ಇದರಿಂದ ಧರ್ಮ ಹಾಳಾಯಿತು ಎಂದು ಬೊಬ್ಬಿಟ್ಟರು. ಆಗ ಬಸವಣ್ಣನವರು ಬಿಜ್ಜಳ ಭಂಡಾರವೆನಗೇಕಯ್ಯಾ ? ಎಂದು ವಿನಮ್ರವಾಗಿ ಅಷ್ಟೇ ಗಟ್ಟಿಯಾಗಿ ಹೇಳಲಿಲ್ಲವೆ ? ನಾನೇನು ಮುಕುಂದ ಭಟ್ಟರ, ನಾರಾಯಣ ಕ್ರಮಿತರ ಮನೆಯಲ್ಲಿ ಉಂಡೆನೆ ? ಎಂದು ಪ್ರಶ್ನಿಸಲಿಲ್ಲವೆ ?

ಬಸವಣ್ಣನವರು ಸೂಳೆ ಸಂಕವ್ವೆಯವರಂಥ ಪಣ್ಯಾಂಗನೆಯರ ಮನೆಗೆ ಹೋದಾಗ ಅಬ್ಬಬ್ಬಾ ಹೊರಗಡೆ ಎಂಥಾ ಹೋಯ್ದಾಟ ? ಒದ್ದಾಟ ? ಕೂಗಾಟ ? ಚೀರಾಟ ? ಆಪಾದನೆ ? ಬಿಜ್ಜಳ ಕಿವಿ ಊದಿದರು. ಕೊನೆಗೆ ಏನಾಯಿತು ? ಸುಳ್ಳಿಗೆ ಎಂದಿಗೂ ಶಾಶ್ವತವಾಗಿ ಜೀವವಿಲ್ಲ. ಅದು ಪರಾವಲಂಬಿ. ಸತ್ಯ ಹಾಗಲ್ಲ. ಅದಕ್ಕೆ ಒಂದೆ ಮುಖ ಇರುತ್ತದೆ. ಹಾಗೂ ತುಂಬಾ ಸತ್ವಯುತವಾಗಿರುತ್ತದೆ.ಸತ್ಯದ ಬಲದಿಂದ ಖಂಡಿತ ಅಸತ್ಯ ಬಟಾಬಯಲಾಗುತ್ತದೆ. ಇದು ನಿಮಗೂ ಗೊತ್ತಿರುವ ಸತ್ಯ. ಸತ್ಯಕ್ಕೆ ಸತ್ವ ಇರೋದರಿಂದ ಅದು ಯಾರನ್ನೂ ಆಶ್ರಯಿಸುವುದಿಲ್ಲ. ಅದು ಒಂಟಿಯಾಗಿದ್ದರೂ ಸಹ ಶಕ್ತಿಯುತವಾಗಿರುತ್ತದೆ. ಬೃಹತ್ ಅರಣ್ಯದಲ್ಲಿ ಹುಲಿ ಒಂಟಿಯಾಗಿ ತಿರುಗಾಡುತ್ತದೆ ಹೊರತು ಹಿಂಡು ಹಿಂಡಾಗಿ ಅಲ್ಲ.

ನಮ್ಮ ಬಗೆಗೆ ನಿಮ್ಮ ಬಗೆಗೂ ಏನಾದರೂ ಆಪಾದನೆಗಳು ಕಿರುಕುಳಗಳು ಬಂದರೂ ಸಹ ನಾವೆಲ್ಲ ಒಟ್ಟಾಗಿ ಅವನ್ನು ಎದುರಿಸೋಣ. ಅಸತ್ಯ ಸೋಲಿಸೋಣ. ಬಸವಾದಿ ಶರಣರ ಚಿಂತನೆಗಳು ಓದಿ ಪರಿಪಕ್ವವಾಗಿರುವ ಬಸವವಾದಿಗಳು ಒಂದೊಂದು ಮಿಸೈಲ್ ಎಂಬುದನ್ನು ಮರೆಯದಿರಿ. ನಿಮ್ಮೊಂದಿಗೆ ಸದಾ ನಾವು ಇದ್ದೇವೆ. ಮುಂದೆಯೂ ಇರುತ್ತೇವೆ. ಹೆದರದೆ ಬೆದರದೆ ಮುನ್ನಡೆಯಿರಿ. ನೀವು ಬಸವ ತತ್ವದ ಫಲ ಇರುವ ಹಣ್ಣು ಮರಗಳು ನಿಮಗೆ ಕಲ್ಲಿನಲ್ಲಿ ಹೊಡೆಯುವವರು ಹೆಚ್ಚು ಎಂಬುದು ನಮಗೂ ಗೊತ್ತು.

ಯಾವತ್ತೂ ನಿಮ್ಮೊಂದಿಗೆ ನಾವು ನಮ್ಮೊಂದಿಗೆ ನೀವು. ನಮ್ಮೆಲ್ಲರೊಂದಿಗೆ ಆ ಬಸವಣ್ಣನವರು ಇದ್ದೇ ಇರುತ್ತಾರೆ.

ವಿಶ್ವಾರಾಧ್ಯ ಸತ್ಯಂ ಪೇಟೆ

Related Articles

Leave a Reply

Your email address will not be published. Required fields are marked *

Back to top button