ಇತಿಹಾಸ

ನಾರಾಯಣ ಗುರುವಿನ ಧರ್ಮ

ಮನುಷ್ಯ ಧರ್ಮ ಪರಿಪಾಲನೆ

Spread the love

ಅ ದು ಕ್ರಿಶ.1800 ರ ಕೇರಳ. ಜಾತಿ ಜನಾಂಗ ತಾರತಮ್ಯ,ಅಸ್ಪೃಶ್ಯತೆಯ ಹುಚ್ಚು‌,ಜಾತಿ ಕಟ್ಟುಪಾಡುಗಳು ,ಅಸ್ಪಶ್ಯತೆಯ ಭ್ರಮೆ ಮತ್ತು ಕೇರಳದ ನಂಬುದರಿಗಳ ಹುಚ್ಚು ಸಂಪ್ರದಾಯಗಳು ಮತ್ತು ಆ ಸಂಪ್ರದಾಯವನ್ನು ಮೀರಿದವರ ಮೇಲಿನ ಘೋರ ಶಿಕ್ಷೆಗಳು ಆಗಿನ ಕೇರಳಕ್ಕಿರುವ ಕೈಗನ್ನಡಿ, ಈ ಸಂಪ್ರದಾಯಗಳು ಎಲ್ಲಿಯವರೆಗೆ ಇತ್ತೆಂದರೆ ನಂಬುವದರಿಗಳಿಂದ ಇಳವರು(ಬಿಲ್ಲವರು) 36 ಹೆಜ್ಜೆ ಅಂತರದಲ್ಲಿ ,ಪುಲ್ಲಯ್ಯರು 54 ಹೆಜ್ಜೆ ಅಂತರದಲ್ಲಿ, ಪರಯ್ಯರು 64 ಹೆಜ್ಜೆ ಅಂತರದಲ್ಲಿ ನಿಲ್ಲಬೇಕಿತ್ತು‌.

ನಂಬುದರಿ ಬ್ರಾಹ್ಮನರು ಬೀದಿಗಿಳಿದರೆ ಅವರ್ಣೇಯರು ಎನಿಸಿಕೊಂಡ ಎಲ್ಲರೂ ದಾರಿಯಿಂದ ದೂರ ಸರಿದು ಕುಕ್ಕರುಗಾಳಿನಲ್ಲಿ ಕುಳಿತುಕೊಳ್ಳಬೇಕಿತ್ತು. ಬ್ರಾಹ್ಮಣರು ಎದುರಾದರೆ ಉಳಿದ ಜಾತಿಯ ಹೆಂಗಸರು,ಗಂಡಸರು, ಸೊಂಟದ ಮೇಲಿನ ವಸ್ತ್ರಗಳನ್ನು ಕಳಚಿ ಅರೆಬೆತ್ತಲಾಗಿ ನಿಲ್ಲಬೇಕಿತ್ತು, ಮೊಣಕಾಳಿಗಿಂತ ಕೆಳಗಿನ ಉತ್ತಮ ವಸ್ತ್ರಗಳನ್ನು ಧರಿಸುವ ಹಾಗಿರಲಿಲ್ಲ.ದೇವಸ್ಥಾನದ ಸುತ್ತ ಕೆಲ ಜಾತಿಯವರು ಯಾರು ಸಂಚರಿಸುವ ಹಾಗಿರಲಿಲ್ಲ ಅಷ್ಟೇಕೆ ಬಹುಸಂಖ್ಯೆಯಲ್ಲಿ ಕೇರಳದಲ್ಲಿದ್ದ ಇಳವರು (ಬಿಲ್ಲವರು) ಕೂಡ ಚಿನ್ನ ತೊಡುವ ಹಾಗಿರಲಿಲ್ಲ. ಮೀಸೆ ಬಿಡುವ ಹಾಗಿರಲಿಲ್ಲ ಇದು ಆಗಿನ ಕೇರಳದ ಸ್ಥಿತಿಯಾಗಿತ್ತು ಮತ್ತು ಸನಾತನ ಸಂಪ್ರದಾಯ ಎಂದರೆ ಇದೇ ಆಗಿದೆ. ನಾನು ಹೇಳುತ್ತಿರುವ ವಿಚಾರ ಕೇರಳದ್ದಾಗಿರುವುದರಿಂದ ಆಗಿನ ಕೇರಳದ ಸ್ಥಿತಿ ಎಂದೆ ಅಷ್ಟೇ.

ಅದು ಬಹುತೇಕ ಭಾರತದ ಸ್ಥಿತಿಯೇ ಆಗಿತ್ತು. ಭಾರತದ ಬಹುತೇಕ ಕಡೆ ಇಂದಿಗೂ ಆ ಸ್ಥಿತಿ ಇದೆ ಎಂದರೆ ತಪ್ಪಾಗಲಾರದು. ಇಂತಹ ಭಾರತದ ಒಂದು ಭಾಗವಾದ ಕೇರಳದ ಅರವಿಪುರಂನಲ್ಲಿ ನಾರಾಯಣ ಗುರುಗಳು ಈ ಎಲ್ಲ ಬ್ರಾಹ್ಮಣ ಪದ್ಧತಿಯ ವಿರುದ್ಧ ಒಂದು ಅಬ್ರಾಹ್ಮನ ದೇವಸ್ಥಾನವನ್ನು ಕಟ್ಟಿ ಅಲ್ಲಿ ಶಿವಲಿಂಗವನ್ನು ಸ್ಥಾಪನೆ ಮಾಡುತ್ತಾರೆ. ಅನೇಕ ವಿರೋಧಾಬಾಸಗಳ ನಡುವೆಯೂ ಈ ಶಿವ ಧಮನಿತರ ಶಿವ,ಇಳವರ ಶಿವ, ಶೂದ್ರಾತಿಶೂದ್ರರ ಶಿವ ಎಂದು ಘೋಷಿಸುತ್ತಾರೆ. ಇದು ಮುಂದಕ್ಕೆ ಇಡೀ ಕೇರಳದ ಬದಲಾವಣೆಯ ಗತಿಯಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪ್ರಸ್ತುತದಲ್ಲಿ ನಾರಾಯಣ ಗುರುಗಳು ಇಳವ, ಬಿಲ್ಲವ,ತೀಯ,ಈಡಿಗ  ಮೊದಲದ 14 ಸಮುದಾಯಗಳು ಪೂಜಿಸಲ್ಪಡುವಂತಹ ಪ್ರಾಮುಖ್ಯತೆಯನ್ನು ಪಡೆದಿರುವ ವ್ಯಕ್ತಿ ಮತ್ತು ಅನೇಕ ಹೋರಾಟಗಾರರಿಗೆ ಚಳುವಳಿಗಾರರಿಗೆ ಆದರ್ಶಪ್ರಾಯರಾಗಿರುವವರು .

ಆದರೆ ಈ ಎರಡು ಪಂಗಡಗಳ ನಡುವೆಯೂ ಬಹಳಷ್ಟು ವ್ಯತ್ಯಾಸಗಳಿವೆ. ಈಗ ಅದರ ಚರ್ಚೆ ಬೇಡ.ಈಗ ಗುರು ಚಳುವಳಿಯನ್ನು ತಿಳಿದುಕೊಳ್ಳುವ ಕಾಲ. ನಾರಾಯಣ ಗುರುಗಳು, ಡಾ. ಪಲ್ಪು,ಸಹೋದರನ್ ಅಯ್ಯಪ್ಪನ್,ಕುಮಾರನ್ ಆಶಾನ್ ಸೇರಿದಂತೆ ಅನೇಕರು ಜೊತೆಯಾಗಿ ಕೇರಳದ ಈ ಜಾತಿ ವ್ಯವಸ್ಥೆಯ ವಿರುದ್ಧದ ಹೋರಾಟಕ್ಕೆ ಮುಂದಾದರು. ಈ ಅಮಾನವೀಯ ಜಾತಿ ಚೌಕಟ್ಟಿನಿಂದ ಹೊರಬರದ ಹೊರತು ಕೇರಳಕ್ಕೆ ಉಳಿಗಾಲವಿಲ್ಲ ಎಂದು ಡಾ. ಪಲ್ಪುರವರನ್ನು ಬೆಂಗಳೂರಿನಲ್ಲಿ ಭೇಟಿಯಾದ ವಿವೇಕಾನಂದರು ತಿಳಿಸಿದರು. ಈ ಸಂದರ್ಭದಲ್ಲಿಯೇ ವಿವೇಕಾನಂದರು “ಕೇರಳ ಒಂದು ಹುಚ್ಚರ ಆಸ್ಪತ್ರೆ” ಎಂದಿದ್ದು. ಆದರೆ ಇವೆಲ್ಲವನ್ನೂ ಬದಲಾಯಿಸುವ ಹೊಣೆಗಾರಿಕೆಯನ್ನು ನಾರಾಯಣ ಗುರುಗಳು ಮತ್ತವರ ತಂಡ ವಹಿಸಿಕೊಂಡಿತು. ಈ ಚಳುವಳಿಗೆ ಕೇರಳದ ಪ್ರಭುತ್ವದ ಬೆಂಬಲವಿರಲಿಲ್ಲ,ಬ್ರಾಹ್ಮಣ ಶಾಹಿತ್ವವೂ ಕೂಡಚಳುವಳಿ ಯನ್ನು ಹತ್ತಿಕ್ಕುವತ್ತ ಅವಿರತ ಪ್ರಯತ್ನದಲ್ಲಿತ್ತು. ಆ ಕಾಲಕ್ಕಾಗಿಯೇ 1921 ರಲ್ಲಿ ಮಲಬಾರ್ ನಲ್ಲಿ ನಡೆದ ಖಿಲಾಫತ್ ದಂಗೆಯ ಕಾರಣ ಪರಿಣಾಮಗಳನ್ನು ಹಿಡಿದುಕೊಂಡು ಕೇರಳದಲ್ಲಿ ಧಾರ್ಮಿಕ ಅಸಹಿಷ್ಣುತೆಗಳನ್ನ ಬ್ರಾಹ್ಮಣರು ಹರಡತೊಡಗಿದರು.

  • ಹಿಂದೂ ಮುಸ್ಲಿಮರ ನಡುವೆ ಅಪಾರವಾದ ಕಂದಕ ಏರ್ಪಟ್ಟಿತು.ಜಾತಿ ನಿರ್ಮೂಲನೆಗೆ ಹೊರಟ ನಾರಾಯಣ ಗುರುಗಳು ಈ ಧಾರ್ಮಿಕ ಅಸಹಿಷ್ಣುತೆಯಿಂದ ಕಂಗಾಲಾದರು. ಈ ಧಾರ್ಮಿಕ ಗಲಭೆಗಳು ಹೀಗೆಯೇ ಮುಂದುವರಿದರೆ ಕೇರಳದ ಸ್ಥಿತಿ ಇನ್ನಷ್ಟು ಕೇಡುತ್ತದೆ ಮತ್ತು ಇಲ್ಲಿನ ಜಾತಿ ವ್ಯವಸ್ಥೆ ಹಾಗೆಯೇ ಉಳಿಯುತ್ತದೆ ಎಂದು ಮನಗಂಡ ನಾರಾಯಣ ಗುರು ಮತ್ತವರ ಬಳಗದವರು ಸರ್ವಧರ್ಮ ಸಮ್ಮೇಳನಕ್ಕೆ ಏರ್ಪಟು ಮಾಡಿದರು. ಈ ಸರ್ವಧರ್ಮ ಸಮ್ಮೇಳನ ವಿಶ್ವದ ಎರಡನೇ ಸರ್ವಧರ್ಮ ಸಮ್ಮೇಳನ ಮತ್ತು ಭಾರತದ ಮೊದಲನೇ ಸರ್ವಧರ್ಮ ಸಮ್ಮೇಳನ. ಇಂತಹ ಐತಿಹಾಸಿಕ ಘಟನೆಯೊಂದು ಇತಿಹಾಸದಲ್ಲಿ ಎಲ್ಲಿಯೂ ದಾಖಲಾಗದೆ ಇರುವುದು ಒಂದು ದುರಂತ.
  • ಈ ಸರ್ವಧರ್ಮ ಸಮ್ಮೇಳನದಲ್ಲಿ ಎಲ್ಲಾ ಧರ್ಮದ ಧಾರ್ಮಿಕ ಗುರುಗಳನ್ನು ಕರೆಸಿಕೊಳ್ಳಲಾಗಿತ್ತು. ಇದೆ ಸಮ್ಮೇಳನದಲ್ಲಿ ನಾರಾಯಣ ಗುರುಗಳು “ಧರ್ಮ ಯಾವುದಾದರೇನು? ಮನುಷ್ಯ ಒಳ್ಳೆಯವನಾಗಿದ್ದರೆ ಸಾಕು” ಎಂಬ ಸಂದೇಶವನ್ನು ಸಾರಿದರು. ನಾರಾಯಣ ಗುರುಗಳು ಸ್ವತಃ ತಾವೇ ಬೈಬಲ್, ಕುರಾನ್ ಗ್ರಂಥಗಳನ್ನು ಅಭ್ಯಾಸ ಮಾಡಿದ್ದರು. ಅವರ ಚಳುವಳಿಗಳಲ್ಲಿ ಬೌದ್ಧ ಧರ್ಮದ ಕುರುಹುಗಳನ್ನು ಕಾಣಬಹುದು. ಬ್ರಹ್ಮಶ್ರೀ ನಾರಾಯಣ ಗುರುಗಳು 1928 ರಲ್ಲಿ ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ ಎನ್ನುವಂತಹ ಸಂಸ್ಥೆಯನ್ನು ಹುಟ್ಟು ಹಾಕಿದರು. ಈ ಸಂಘವೇ ಎಸ್.ಎನ್.ಡಿ.ಪಿ .
    ಈ ಸಂಸ್ಥೆಯ ಬಗ್ಗೆ ಇಂದಿನ ಜನಪ್ರತಿನಿಧಿಗಳು ಜನಪ್ರತಿನಿಧಿಗಳಾಗಳು ಹವನಿಸುತ್ತಿರುವವರು ತಿಳಿದುಕೊಳ್ಳಬೇಕು. ಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಯೋಗಂ ಸ್ಥಾಪನೆಯದದು ಅದರ ಹೆಸರಿನಂತೆಯೇ ಧರ್ಮ ಪರಿಪಾಲನೆಗಾಗಿ ಆದರೆ ಆ ಧರ್ಮ ಎಲ್ಲಾ ಧರ್ಮವನ್ನು ಮೀರಿದ ಮಾನವ ಧರ್ಮವಾಗಿತ್ತು ಎಂಬುದನ್ನು ನಾವು ಗಮನಿಸಬೇಕು. ಅದು ಒಂದು ರಿಜಿಸ್ಟರ್ ಸಂಸ್ಥೆ.ಅದರ ಉದ್ದೇಶಗಳು ಹೀಗಿದ್ದವು ವಿದ್ಯಾಭ್ಯಾಸ ಮತ್ತು ವ್ಯವಸಾಯ ಶೀಲತೆಯ ಅಭಿವೃದ್ಧಿಗೆ ಪ್ರೋತ್ಸಾಹಿಸುವುದು, ಶಾಲೆಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸುವುದು, ಕೃಷಿ,ವ್ಯಾಪಾರ, ಗುಡಿ ಕೈಗಾರಿಕೆ ಮೊದಲಾದ ವ್ಯವಸಾಯಗಳನ್ನು ಅಭಿವೃದ್ಧಿಪಡಿಸುವುದು ಮೊದಲಾದವುಗಳು. ಆದರೆ ಇವೆಲ್ಲವನ್ನೂ ಸಾಧಿಸಬೇಕಾದರೆ ಕೇರಳದಲ್ಲಿರುವ ಜಾತಿ ಅಸ್ಪಶ್ಯತೆಯನ್ನು ತೊಡೆದು ಹಾಕಬೇಕಿತ್ತು. ಇದಕ್ಕಾಗಿ ಕವಿ ಕುಮಾರನ್ ಆಶಾನ್,ಡಾ. ಪಲ್ಪು ಸಹೋದರನ್ ಅಯ್ಯಪ್ಪನ್ ಹಾಗೂ ನಾರಾಯಣ ಗುರುಗಳು ಜೊತೆ ಸೇರಿ ಐಕ್ಯತೆಯ ಚಳುವಳಿಯೊಂದನ್ನು ರೂಪಿಸಿದರು.ಅನೇಕರು ಇದಕ್ಕೆ ಜೊತೆಯಾದರು. ಹೀಗೆ ಒಂದೇ ಜಾತಿ ,ಒಂದೇ ಮತ,ಒಂದೇ ದೇವರು ಎಂದು ಸಾರುತ್ತ ಮನುಷ್ಯನಿಗೆ ನಿಜಕ್ಕೂ ಬೇಕಾಗಿರುವ ಉದ್ಯೋಗ ಮತ್ತು ಶಿಕ್ಷಣ ಒದಗಿಸುವುದು ನಾರಾಯಣ ಗುರುಗಳ ಚಳುವಳಿಯ ಮೂಲ ಆಶಯವಾಗಿತ್ತು. ಆದರೆ ಇಂದು ನಾವು ಗುರುಗಳನ್ನು ಪೂಜಿಸುತ್ತೇವೆ ಅವರ ಸೈದಾಂತಿಕ ನಿಲುವುಗಳನ್ನು ಪಕ್ಕಕ್ಕಿರಿಸುತ್ತೇವೆ. ಬಹುಶಃ ಗುರುಗಳು ನಡೆದ ದಾರಿಯನ್ನು ಅನುಸರಿಸುವುದು ನಮಗೆ ಕಷ್ಟವಾದರೂ ಗುರುಗಳನ್ನು ತಿಳಿದುಕೊಳ್ಳಬೇಕು ಎಂಬುದಕ್ಕೆ ಪ್ರಯತ್ನಿಸಿದರೆ ಒಂದಷ್ಟು ಬದಲಾವಣೆಗಳು ಸಾಧ್ಯವಾಗಬಹುದು. ನನಗೂ ಗುರುಗಳ ಘೋಷಣೆಗಳನ್ನು ಬಿಟ್ಟರೆ ಅವರ ಬದುಕು ಮತ್ತು ಚಳುವಳಿಯ ಕುರಿತು ತಿಳಿದಿರಲಿಲ್ಲ “ಶೂದ್ರಶಿವ” ನಾಟಕದ ಬರವಣಿಗೆಗೆ ಒಪ್ಪಿದ ನನಗೆ ನಾರಾಯಣ ಗುರುಗಳ ಓದು ಅನಿವಾರ್ಯವಾಯಿತು. ಹಾಗಾಗಿ ತಿಳಿದುಕೊಂಡೆ ಮತ್ತು ಅವರ ಮನುಜ ಮತದ ದಾರಿಯನ್ನು ಸ್ಪಷ್ಟಪಡಿಸಿಕೊಂಡೆ. ನಿಜಕ್ಕೂ ನಾರಾಯಣ ಗುರುಗಳು ವಿಶ್ವಗುರುವಾಗಲು ಎಲ್ಲಾ ಅರ್ಹತೆಯನ್ನು ಹೊಂದಿರುವ ಗುರುಗಳು.
  • Manojkumar Vamanjoor 

Related Articles

Leave a Reply

Your email address will not be published. Required fields are marked *

Back to top button