ಸುದ್ದಿ

ಬಸವ ಜಯಂತಿಯಂದು ರೇಣುಕಾಚಾರ್ಯರ ಭಾವ ಚಿತ್ರ ಏಕೆ ?

Spread the love

ಬಸವ ಜಯಂತಿಯಂದು ರೇಣುಕಾಚಾರ್ಯರ ಭಾವ ಚಿತ್ರ ಏಕೆ ?

ಮಹಾ ಮಾನವತಾವಾದಿ, ವಿಶ್ವ ಗುರು ಬಸವಣ್ಣನವರ ಜಯಂತಿಯಂದು ವೀರಶೈವ ಸಂಸ್ಥಾಪಕರೆಂದು ಹೇಳಲಾಗುವ ಶ್ರೀ ರೇಣುಕಾಚಾರ್ಯರ ಭಾವ ಚಿತ್ರವನ್ನೂ ಮೆರವಣಿಗೆಯಲ್ಲಿ ಇರಬೇಕು ಎಂಬರ್ಥ ಪತ್ರವೊಂದನ್ನು ರಾಜ್ಯದ ವೀರಶೈವ ಮಹಾಸಭೆಯ ಅಧ್ಯಕ್ಷ ಶ್ರೀ ಶಂಕರ ಬಿದರಿಯವರು ಪತ್ರ ಬರೆದು ಸೂಚಿಸಿದ್ದಾರೆ ಎಂಬ ಸಂಗತಿ ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ. ಇದು ಸತ್ಯವೆ ಆಗಿದ್ದರೆ. ನಿಜಕ್ಕೂ ಇದೊಂದು ಆತಂಕದ ಸಂಗತಿಯಾಗಿದೆ.

ಜಗತ್ತು ಬಲ್ಲಂತೆ ಬಸವಣ್ಣನವರು ಐತಿಹಾಸಿಕ ವ್ಯಕ್ತಿಗಳು. ಜನ ಸಾಮಾನ್ಯರಾದ (ಶೋಷಣೆಗೆ ಗುರಿಯಾದ) ತಳ ಸಮೂಹದ ವ್ಯಕ್ತಿಗಳ ಪರವಾಗಿ ಚಳುವಳಿಯನ್ನೆ ಮಾಡಿದವರು. ಅಕ್ಷರಗಳಿಂದ ಬಹು ದೂರ ಇಟ್ಟಿದ್ದ ಸಮುದಾಯಕ್ಕೆ ಮೊಟ್ಟ ಮೊದಲು ಅಕ್ಷರಗಳ ಪರಿಚಯಿಸಿ, ಅವರ ಅನುಭವದ ಸಂಗತಿಗಳನ್ನೆ ವಚನ ಬರೆಯಲು ಪ್ರೇರೇಪಿಸಿದವರು. ಅವರ ಬದುಕಿನ ಪಡಿನೆಳಲಾದ ಬರವಣಿಗೆಗೆ ವೇದಗಳು, ನಡನಡಗಿ ಹೋದವು. ಶಾಸ್ತ್ರಗಳು ತಲೆಕೆಳಗಾದವು. ಆಗಮದ ಮೂಗ ಕೊಯ್ದವು. ಜಗತ್ತಿನಲ್ಲಿಯೆ ಮೊಟ್ಟ ಮೊದಲ ಸಂಸತ್ತನ್ನು ರಚಿಸಿ ಹೆಗ್ಗಳಿಕೆಯನ್ನು ಪಡೆದವರು. ಶೋಷಿತ ಸಮುದಾಯಕ್ಕೆ ಅಣ್ಣ,ಅಪ್ಪ ,ಭಕ್ತಿಯ ಭಂಡಾರಿ ಆದವರು.

ಆದರೆ ಬಸವಣ್ಣನವರನ್ನು ಯಾವುದಕ್ಕೂ ಸರಿಗಟ್ಟದ ಇತಿಹಾಸದ ಪುರುಷರೆ ಅಲ್ಲದ ಶ್ರೀ ರೇಣುಕಾಚಾರ್ಯರನ್ನು ಲಿಂಗಾಯತರ ನಾಯಕರೆಂಬಂತೆ ಬಿಂಬಿಸುವುದು ಎಷ್ಟು ಸರಿ ? ಸುಮಾರು ವರ್ಷಗಳಿಂದ ಲಿಂಗಾಯತರಿಂದ ವಂಚಿಸುತ್ತಲೆ ಬಂದ ವೀರಶೈವ ಮಹಾಸಭೆ ಮತ್ತೊಂದು ಗುರುತರವಾದ ತಪ್ಪನ್ನು ಮಾಡುತ್ತಿದೆ.

ವೀರಶೈವ ಧರ್ಮದ ಸಂಸ್ಥಾಪಕರು ಶ್ರೀ ರೇಣುಕರು ಆಗಿದ್ದರೆ ಅದಕ್ಕೆ ಯಾರದೆ ವಿರೋಧ ಇಲ್ಲ. ಕೋಟ್ಯಂತರ ವರ್ಷಗಳ ಹಿಂದೆಯೆ ತಂದೆ ತಾಯಿಗಳಿಲ್ಲದೆ ಲಿಂಗೋದ್ಭವರಾಗಿದ್ದರೂ ಯಾರೂ ಪ್ರಶ್ನಿಸುವುದಿಲ್ಲ. ಆದರೆ ಬಸವ ಜಯಂತಿಯಂದು ಇವರ ಭಾವ ಚಿತ್ರವನ್ನೂ ಮೆರೆಸಬೇಕೆಂದು ಅಪ್ಪಣೆ ಕೊಡುವ ಹಕ್ಕು ಖಂಡಿತ ಇವರಿಗೆ ಇಲ್ಲ ಎಂದು ಅನಿವಾರ್ಯವಾಗಿ ಹೇಳಬೇಕಾಗುತ್ತದೆ.

ಇದನ್ನು ಬಸವಣ್ಣನವರ ಅನುಯಾಯಿಗಳಾದ,ಲಿಂಗಾಯತ ಧರ್ಮಿಯರು ಉಗ್ರವಾಗಿ ಖಂಡಿಸುತ್ತಾರೆ. ಸ್ವತಃ ಸರಕಾರವೇ ಬಸವ ಜಯಂತಿಯ ನಿಮಿತ್ತ ಅನುಭವ ಗೋಷ್ಠಿ ಮಾಡುತ್ತಿರುವಾಗ ಈ ಸಂಘಟನೆ ಜನರಿಗೆ ದಾರಿ ತಪ್ಪಿಸುತ್ತಿರುವುದು.ಸರಿಯಾದ ಕ್ರಮವಲ್ಲ.

4 Comments

  1. ವೀರಶೈವ ಮಹಾಸಭಾದವರು ಬೇಕಾದರೆ ಯಾರ ಭಾವಚಿತ್ರವನ್ನಾದರೂ ಮೆರವಣಿಗೆ ಮಾಡಲಿ ಜಾಗತಿಕ‌ ಲಿಂಗಾಯತ ಮಹಾಸಭಾದವರು ಮಾತ್ರ ಬಸವಾದಿ ಶರಣರ ಮತ್ತು ವಚನ ಸಾಹಿತ್ಯದ ಮೇರವಣಿಗೆ ಮಾಡಬೇಕು. ಯಾವುದೇ ರಾಜಕೀಯ/ಸಾಮಾಜಿಕ/ಧಾರ್ಮಿಕ ಒತ್ತಡಕ್ಕೊಳಗಾಗದೆ ಶರಣರ ಆಆಯಕ್ಕೆ ನ್ಯಾಯವನ್ನು ಒದಗಿಸಬೇಕು.

  2. ಇತಿಹಾಸವಿಲ್ಲದ ರೇಣುಕರನ್ನು ಧರ್ಮಗುರು ಎಂದು ಹೇಳಿ ಸಮಾಜವನ್ನೇ ದಾರಿ ತಪ್ಪಿಸುತ್ತಿರುವ ಇವರ ವಿರುದ್ದ ಸುಳ್ಳು ಮೊಕದ್ದಮೆ ದಾಖಲಿಸಿದರೆ ಹೇಗಿರುತ್ತೆ ಸರ್. ತಮ್ಮ ಹೊಟ್ಟೆಪಾಡಿಗೆ ರೇಣುಕರನ್ನು ಸೃಷ್ಟಿಸಿ ವೈಭವಿಕರಿಸಿ ಸತ್ಯವೆಂದು ಪ್ರತಿಪಾದಿಸುವ ಇವರ ವಿರುದ್ದ ಕಾನೂನಾತ್ಮಕ ಹೋರಾಟ ಅಸಾದ್ಯವೇ….

  3. “ಗುರು ಬಸವಣ್ಣನವರ ಜಯಂತಿ ಜೊತೆಗೆ ಇಲ್ಲದ
    ರೇಣುಕಾಚಾರ್ಯನ ಜಯಂತಿ ಬೇಡವೆ ಬೇಡ”
    ############################
    ಲಿಂಗಾಯತಧರ್ಮ ಸ್ಥಾಪಕ ವಿಶ್ವಗುರು ಬಸವಣ್ಣ
    ನವರು ಐತಿಹಾಸಿಕ ಮಹಾಮಾನವತಾವಾದಿ’ ವಿಶ್ವ
    ಸಂವಿಧಾನ ಶಿಲ್ಪಿ’ ಸಕಲ ಜೀವರಿಗೂ ಲೇಸನೆ ಬಯ
    ಸಿದ ಜೀವಪರ ನಿಲುವಿನ ವಿಶ್ವಾತ್ಮ..ಹಾಗೂ ಜಗದ್ಗುರು’
    ಯುಗದ ಉತ್ಸಾಹವೆಂದು’ ಜಂಗಮ ಅಲ್ಲಮಪ್ರಭು
    ದೇವರು ಮತ್ತು ಎಲ್ಲ ಶರಣರು ಒಪ್ಪಿ ಬಸವ
    ಮಾರ್ಗದಿ ನಡೆದು ಅಮರರಾದದ್ದು ಇತಿಹಾಸ.
    ಜಗತ್ತಿಗೆ ಜಾತಿರಹಿತ ಧರ್ಮಸಹಿತ ಧರ್ಮವನ್ನಿತ್ತು’
    ಇಷ್ಟಲಿಂಗದ ಪರಿಕಲ್ಪನೆಯೊಂದಿಗೆ ದೇಹ ದೇಗುಲ
    ಮಾಡಿ ಸರ್ವರಿಗೂ ಸಮಾಜೋಧಾರ್ಮಿಕ’
    ಆರ್ಥಿಕ’ ಶೈಕ್ಷಣಿಕ’ ಆನುಭಾವಿಕ ಸಮಾನತೆ ಯೊಂದಿಗೆ
    ಮಾನವಿಕ ನೆಲೆಯ ಹಕ್ಕುಗಳನ್ನು ಕರುಣಿಸಿ ಅನುಭವ
    ಮಂಟಪದ ಮುಖಾಂತರ ಜಗತ್ತಿಗೆ ಕಲ್ಯಾಣ ಪ್ರಜಾಸತ್ತೆ
    ಯನು ಅನುಗೊಳಿಸಿ’ ಇಷ್ಟಲಿಂಗಯೋಗದ ಮುಖಾಂತರ
    12 ನೆಯ ಶತಮಾನದಲ್ಲೆ ಪೀನಿಯಲ್ ಗ್ರಂಥಿಯನ್ನು
    ಕಂಡುಹಿಡಿದು’ ಯೋಗ ವಿಜ್ಞಾನಿ’ ಜೀವವಿಜ್ಞಾನಿ’ ಸಮಾಜ
    ವಿಜ್ಞಾನಿ’ಯಾಗಿ ಮಹಾನುಭಾವಿಯಾಗಿ’ ಜಾತಿಬೇಧ’ ವರ್ಣಬೇಧ’ ಗಂಡುಹೆಣ್ಣು ಬೇಧ ಎಲ್ಲವನ್ನು ಇಷ್ಟಲಿಂಗದ
    ಮುಖಾಂತರ ದೂರೀಕರಿಸಿ ಜಗತ್ತನ್ನೆ ಕಲ್ಯಾಣಮಯ
    ಗೊಳಿಸಲು ಜೀವನ ಪರ್ಯಂಥ ಶ್ರಮಿಸಿದ ಗುರು ಬಸ
    ವಣ್ಣನವರ ಜಯಂತಿ ಮಾಡುವುದು ನಮ್ಮ ನಾಡು
    ಹಾಗೂ ದೇಶ ಬಸವಾದಿ ಶರಣರಿಗೆ ಸಲ್ಲಿಸುವ ಗೌರವ
    ಮತ್ತು ಅಭಿಮಾನ ಹಾಗೂ ಹೆಮ್ಮೆ. ಇದು ಸರಿ..ಆದರೆ
    ಇತ್ತೀಚಿನ ಕೆಲವರ ಹೇಳಿಕೆ ಮತ್ತು ವರದಿಗಳನ್ನು ನೋಡಿ
    ದರೆ ಬಹಳ ಕೋಪಬರುವಂತಾಗಿದೆ..ಏನೆಂದರೆ
    ಗುರು ಬಸವಣ್ಣನವರ ಜಯಂತಿಯೊಂದಿಗೆ ಇಲ್ಲದ
    ರೇಣುಕಾಚಾರಿಯ ಜಯಂತಿಯನ್ನು ಆಚರಿಸಬೇಕಂಬುದು..ಇಂಥ ಮುಠಾಳರಿಗೆ ವಿವೇಕ ಇದಿಯೊ ಇಲ್ಲವೊ ಗೊತ್ತಿಲ್ಲ. ರೇವಣಸಿದ್ಧ’ ಮರಳಸಿದ್ಧ’
    ಮಲ್ಲಿಕಾರ್ಜುನಪಂಡಿತಾರಾಧ್ಯ’ ಏಕೋರಾಮ'(ಏಕಾಂತರಾಮಯ್ಯ) ಇವರುಗಳು ಬಸವರ ಸಮಕಾಲೀನ ಶರಣರು ಬೇರೆ ಬೇರೆ ಜಾತಿ
    ಯಿಂದ ಬಂದು ಲಿಂಗವಂತ ಶರಣರಾದವರು..ಇವರನ್ನು
    ಕೂಡ ಬಿಟ್ಟು ವೀರಶೈವವಾದಿಗಳ ಕಲ್ಪಿತ ಕಲ್ಲಲ್ಲುಟ್ಟಿದ
    ಪಂಚಾಚಾರಿಯ ಜಯಂತಿಯನ್ನು ಬಸವಜಯಂತಿ
    ಯೊಂದಿಗೆ ಮಾಡಬೇಕೆನ್ನುವವರು ಬುದ್ಧಿಯನ್ನ
    ಅಡವಿಡದೆ ವಿವೇಚಿಸಬೇಕು..ಒಂದು ವೇಳೆ ನಿಮ್ಮಿಷ್ಟ
    ದಂತೆ ಮಾಡಿದರೆ ಪ್ರತಿರೋಧವಿದ್ದೆ ಇರುತ್ತದೆ. ಸತ್ಯದ
    ಜೊತೆಗೆ ಸುಳ್ಳನ್ನು ಮೆರೆಸಿದರೆ ಬಸವಭಕ್ತರು ಮಡಿ
    ವಾಳ ಮಾಚಯ್ಯ ಅಂಬಿಗರ ಚೌಡಯ್ಯರಾಗಬೇಕಾಗುತ್ತದೆ..ಎಚ್ಚರ!!! ಜೊತೆಗೆ
    ಸರ್ಕಾರ ಇಲ್ಲದ ರೇಣುಕಾಚಾರಿಯ ಜಯಂತಿಯನ್ನು ರದ್ದುಮಾಡಿ ಎಲ್ಲ ಶರಣರನ್ನು ಸ್ಮರಿಸುವ ಶರಣ ಸಂಸ್ಕ್ರತಿ
    ಉತ್ಸವವನ್ನು ಮಾಡಲಿ..
    ಕೊನೆಮಾತು-ಬಸವಮಾರ್ಗಿಗಳು’ ಪ್ರಗತಿ ಪರರು’
    ಇಂತಹ ಎಡವಟ್ಟುಗಳನ್ನು ಸಹಿಸಬಾರದು..
    ಜೈ ಶ್ರೀಗುರು ಬಸವಲಿಂಗಾಯನಮಃ
    “ಶರಣು ಶರಣಾರ್ಥಿ”

    ಶಿವಬುದ್ಧಿ ಹಲ್ಲರೆ
    ದಿನಾಂಕ-10-4-2025

  4. 1871 ರ ಜನಗಣತಿಯಲ್ಲಿ ಇಲ್ಲದ ವೀರಶೈವರು, 1891 ರ ಜನಗಣತಿಯಲ್ಲಿ ಲಿಂಗಾಯತ ಧರ್ಮದ ಉಪ ಪಂಗಡವಾಗಿ ಉದಯವಾದರು . 1905 ರಲ್ಲಿ ಲಿಂಗಾಯತ ಮಹಾಸಭೆ ಮಾಡಲು ಹೊರಟಾಗ ಮಠಾಧೀಶರುಗಳ ಮೇಲೆ ಪ್ರಭಾವ ಬೀರಿ ವೀರಶೈವ ಮಹಾಸಭೆ ಎಂದು ಮಾಡಿ, ಲಿಂಗಾಯತ ಮಠಗಳನ್ನು ಆಕ್ರಮಿಸಲು ಶುರುಮಾಡಿ, ಲಿಂಗಾಯತರನ್ನು ವೀರಶೈವರೆಂದು ಗುರುತಿಸಿಕೊಳ್ಳುವಂತೆ ಪ್ರೇರೇಪಿಸಿದರು, ವೀರಶೈವ ಧರ್ಮವನ್ನು ಸ್ವತಂತ್ರ ಧರ್ಮ ಮಾಡಲು ಹೋಗಿ ವಿಪಲರಾದರು. ಸರಕಾರದ ಜಾತಿ ದಾಖಲೆ ಗಳಲ್ಲಿ ಲಿಂಗಾಯತ ಜೊತೆ ವೀರಶೈವ ಲಿಂಗಾಯತ ಎಂದು ಬರುವಂತೆ ಆಕ್ರಮ ವೆಸಗಿದರು. ಈಗ ಬಸವಣ್ಣನವರ ಜೊತೆ ರೇಣುಕರನ್ನು ಕೂಡಿಸಿ ಮುಂದೆ ಲಿಂಗಾಯತ ಮತ್ತು ಬಸವಣ್ಣ ನಶಿಸುವಂತೆ ಮಾಡುವ ಹುನ್ನಾರ. ಇನ್ನಾದರು ಲಿಂಗಾಯತ ಎಚ್ಚರಗೋಂಡು ವೈದಿಕರನ್ನು ಧರ್ಮಾಚರಣೆಗಳಿಂದ ದೂರ ಮಾಡದಿದ್ದರೆ ಅಸ್ತಿತ್ವ ಕಳೆದುಕೊಳ್ಳುವುದು ಶತಸಿದ್ದ.

Leave a Reply to Editor Cancel reply

Your email address will not be published. Required fields are marked *

Back to top button