
• ಮಹಾದೇವ ಶಂಕನಪುರ
ಕೊಳ್ಳೇಗಾಲ ಹತ್ತಿರವಿದ್ದರೂ ನಮಗೆ ನಮ್ಮೂರ ಪಕ್ಕದ ಮುಡಿಗುಂಡದ ಜೊತೆ ಒಡನಾಟ ಹೆಚ್ಚು. ಯಾಕೆಂದರೆ ಆಗ ನಮ್ಮೂರ ಜನ ಮುಡಿಗುಂಡದ ಜಮೀನುದಾರರಲ್ಲಿ ಜೀತ ಕೂಲಿ ಮಾಡುವ ಪದ್ಧತಿಯಲ್ಲಿದ್ದರು. ಹಾಗೇ ನನ್ನ ಅಪ್ಪನೂ ಜೀತ ಮಾಡುತ್ತಿದ್ದು, ಅನಂತರ ಅವರದೇ ಜಮೀನನ್ನು ವಾರಕ್ಕೆ ಮಾಡುತ್ತಿದ್ದ. ನಾನು ಮತ್ತು ಅಕ್ಕ, ನನ್ನ ಅವ್ವನ ಜೊತೆ ಕೆಲಸ ಬಿದ್ದಾಗಲೆಲ್ಲ ಮುಡಿಗುಂಡದ ನಮ್ಮ ಶೆಟ್ಟರ ಹಟ್ಟಿಗೆ ಹೋಗುತ್ತಿದ್ದೊ. ನಮಗೆ ಮನೆಯ ಹಿಂಬಾಗಿಲಿನಿಂದ ಹಿತ್ತಲು, ಕೊಟ್ಟಿಗೆಗೆ ಪ್ರವೇಶ ಇರುತ್ತಿತ್ತು. ಅಲ್ಲಿಗೆ ಹೋಗುವುದೆಂದರೆ ನಮಗೆ ಖುಷಿ.
ಪಕ್ಕದಲ್ಲಿದ್ದ ಜಾರುಗುಪ್ಪೆಯಲ್ಲಿ ಜಾರಬಹುದಿತ್ತು. ಶೆಟ್ಟರ ಮನೇಲಿ, ಹೋಟಲಿನಲ್ಲಿ ತಿಂಡಿ ಸಿಗುತ್ತದೆಂಬ ಆಸೆ ನಮಗೆ. ಮುಡಿಗುಂಡದವರಾದ ಆರ್. ನಂಜಯ್ಯ ಎಂಬುವವರು ನಮ್ಮವರ ಬೀದಿಯ ತಿಳಿದವರು. ಯಾವುದೇ ಸಮಸ್ಯೆ ಎದುರಾದಾಗ ಬಗೆಹರಿಸುತಿದ್ದರು, ನಮ್ಮವರ ಧ್ವನಿಯಾಗಿದ್ದರು. ಕೆಲಸದ ನಿಮಿತ್ತ ಅಪ್ಪ ಯಾವಾಗಲೂ ಮುಡಿಗುಂಡಕ್ಕೆ ಹೋಗುತ್ತಿದ್ದುದರಿಂದ ನಂಜಯ್ಯನವರ ಜೊತೆ ಒಡನಾಟ ಇತ್ತು. ಆಗ ನಾನಿನ್ನೂ ಚಿಕ್ಕವನು. ಆಗಷ್ಟೆ ಅಕ್ಷರಗಳಿಗೆ ಕಣ್ಣು ಬಿಡುತ್ತಿದ್ದೆ. ಶಾಲೆಯ ದಾರಿ ಹಿಡಿದಿದ್ದೆ. ಅಪ್ಪ ಓದು ಬರಹ ಗೊತ್ತಿಲ್ಲದವ. ಅವ್ವನೂ ಕೂಡ. ‘ಮಗ ಓದಲಿ, ನನ್ನ ಹಾಗೇ ಆಗುವುದು ಬೇಡ’ ಅಂತಿದ್ದ ಅಪ್ಪ. ಅವ್ವನದು ಒಂದೇ ಆಸೆ, ಮಗ ಸರ್ಕಾರಿ ಕೆಲಸಕ್ಕೆ ಹೋಗಬೇಕು ಎಂದು.
ಹೀಗೆ ಒಂದು ದಿನ ನನಗೆ ಅಪ್ಪ ಯಾರ ಬಳಿಯೋ ಹೇಳಿ ಕಳಿಸಿದ್ದ. ಶೆಟ್ಟರ ಹೊಲದಲ್ಲಿ ಇನ್ನೂ ಕೆಲಸ ಮುಗಿದಿಲ್ಲ, ಅಲ್ಲಿಗೆ ನಮ್ಮ ಹುಡುಗನನ್ನು ಬರಹೇಳಿ ಅಂತ. ನನಗೆ ಗೊತ್ತಿತ್ತು, ಅಪ್ಪ ಹೀಗೆ ಹೇಳಿದ್ದಾನೆಂದರೆ ಏನೋ ವಿಶೇಷ ಇರಬಹುದು ಅಂತ. ನಾನು ಲಗುಬಗೆಯಿಂದ ಹೊರಟೆ. ಅಪ್ಪ ಗೊಬ್ಬರ ಎರಚುತ್ತಿದ್ದ, ಅವ್ವ ಕಳೆಸೆತ್ತೆ ಕೀಳುತ್ತಿದ್ದಳು. ಮಧ್ಯಾಹ್ನಕ್ಕೆ ಹೊತ್ತು ತಿರುಗಿತ್ತು. ಕೆಲಸ ಕೈಬಿಟ್ಟು ಅಪ್ಪ-ಅವ್ವ ಅಲ್ಲೇ ಬೇವಿನ ಮರದ ನೆರಳಿಗೆ ಬಂದರು. ಶೆಟ್ಟರ ಹಟ್ಟಿಯಿಂದ ತಂದಿದ್ದ ತನ್ನ ಟವಲ್ಲಿನಲ್ಲಿ ಕಟ್ಟಿ ಇಟ್ಟಿದ ಪೊಟ್ಟಣವನ್ನು ಅಪ್ಪ ಬಿಚ್ಚಿದ.
ಚಿತ್ರಾನ್ನ, ಬೋಂಡಾ, ಒಂದೆರಡು ದೋಸೆ ಇದ್ದವು. ಆ ತಿಂಡಿ ಪೊಟ್ಟಣಕ್ಕೆ ಸುತ್ತಿ ತಂದಿದ್ದ ಒಂದು ಫೋಟೊನ ತೆಗೆದು ಅಪ್ಪ ನನಗೆ ಕೊಟ್ಟ. ಹಿಂದಕ್ಕೆ ಬಾಚಿದ ತಲೆಕೂದಲು ಗಂಭೀರ ಮುಖಭಾವ, ನೀಲಿ ಕೋಟು, ಕೋಟಿನ ಜೇಬು ತುಂಬ ಪೆನ್ನುಗಳು, ಎಡಗೈಯಿಂದ ಎದೆಗೆ ಅಪ್ಪಿಕೊಂಡ ಪುಸ್ತಕ. ‘ಇವರು ಅಂಬೇಡ್ಕರ್ ಸಾಹೇಬರು. ನಮ್ಮವರಂತೆ, ಯಾರೂ ಓದಕ್ಕಾಗದಷ್ಟು ಓದವರಂತೆ. ನಮಗೆಲ್ಲಾ ಕಾನೂನು ಬರದವರಂತೆ. ಇವರ ಫೋಟೊನ ಮನೇಲಿ ಇಟ್ಟ್‌ಗಂದ್ರ ಒಳ್ಳೆದಾಯಿತದಂತೆ. ಮಕ್ಕಳನ್ನು ಅವರಂಗೆ ಚೆನ್ನಾಗಿ ಓದಸ್ಬೇಕಂತೆ ಹಾಗಂತ ಅಲ್ಲಿ ಆರ್.ನಂಜಯ್ಯ ಮಾತಾಡ್ತಿದ್ರು. ಅವರತ್ರ ಈ ಫೋಟೋ ಇತ್ತು.
ನನಗೂ ಒಂದು ಕೊಡಿ ಅಂತ ತಕ್ಕ ಬಂದಿ’ ಅಂತ ಅಪ್ಪ ಹೇಳಿದ್ದರು. ನಾವೆಲ್ಲಾ ಅಂಬೇಡ್ಕರ್ ದಾರೀಲಿ ನಡೆಯಬೇಕು ಅಂತ ಅವರು ಹೇಳುತ್ತಿದ್ದರಂತೆ. ಆ ನೀಲಿ ಕೋಟಿನ ಅಂಬೇಡ್ಕರರ ಭಾವಚಿತ್ರ, ಅಪ್ಪ ಹೇಳಿದ ಮಾತುಗಳು ಅಂದು ನನಗೆ ಅಂಬೇಡ್ಕರರನ್ನು ಪರಿಚಯಿಸಿದ್ದವು. ಆ ತಿಂಡಿ ಪೊಟ್ಟಣದ ಜೊತೆ ತಂದಿದ್ದ, ಮುದುರಿಕೊಂಡಿದ್ದ ಆ ಪೋಟೊವನ್ನು ಸರಿಪಡಿಸಿದೆ. ಯಾಕೋ ಅಂಬೇಡ್ಕರರು ಕಾಡಲಾರಂಭಿಸಿದರು.
ಮನೆಗೆ ಬಂದ ನಾನು ಅದನ್ನು ಎಲ್ಲಿಡುವುದು ಎಂದು ಯೋಚಿಸಿದೆ. ಮನೆಯ ಹಜಾರದಲ್ಲಿ ಒಂದು ಸೊಳ್ಳುಗುಡಿ ಇತ್ತು. ಅದು ದೀಪ ಹಚ್ಚಿಡುವ ಗೂಡು. ಅದರ ಪಕ್ಕದಲ್ಲಿ ಜಾಗ ಮಾಡಿದೆ. ಅವ್ವ ಆ ಫೋಹಟೊ ಹಿಂದಕ್ಕೆ ನಾಲ್ಕು ಮೂಲೆಗೂ ಕಳ್ಳಿಹಾಲು, ರಾಗಿಮುದ್ದೆ, ಅಂಟುಗಳನ್ನು ಸವರಿ ಕೊಟ್ಟಿದ್ದಳು. ದೀಪ ಹಚ್ಚಿಡುವ ಗೂಡಿನ ಪಕ್ಕ ಅಂಬೇಡ್ಕರರ ಫೋಟೊವನ್ನು ಅಂಟಿಸಿದೆ. ನಾವು ಬೆಳಿಗ್ಗೆ ಎದ್ದಾಗ ಮತ್ತು ಬಂದವರಿಗೆಲ್ಲಾ ಫೋಟೊ ಎದುರಿಗೇ ಕಾಣುವಂತೆ ಅಂಬೇಡ್ಕರರನ್ನು ಹಟ್ಟಿ ಒಳಗೆ ಸ್ಥಾಪಿಸಿದ್ದೆ. ಅಲ್ಲಿಂದಾಚೆಗೆ ಅವ್ವ, ಪೂಜೆ-ಗೀಜೆ ಅಂತ ಮಾಡುವಾಗಲೆಲ್ಲ ಈ ಫೋಟೊವಿಗೂ ಹೂವು ಮುಡಿಸುತ್ತಿದ್ದಳು. ಧೂಪ, ಕಡ್ಡಿ ಕರ್ಪೂರ ಬೆಳಗುತ್ತಿದ್ದಳು.
ಕೆಲದಿನಗಳ ಅನಂತರ ಆ ಫೋಟೊ ಕೆಳಗೆ ಜೈಭೀಮ್ ಎಂದು ಬರೆದಿದ್ದೆ. ಈಗಲೂ ಊರಿಗೆ ಹೋದಾಗಲೆಲ್ಲ ಮನೆಯ ಹಜಾರದ ಹಳೇ ಗೋಡೆ ನೋಡಿದಾಗ ಜೈಭೀಮ್ ಹೆಸರು ಮೊಳಗಿದಂತೆ ಕೇಳುತ್ತದೆ. ಈಗ ಅಕ್ಕ ಅಲ್ಲಿ ಅಂಬೇಡ್ಕರ್ ಫೋಟೊ ಜೊತೆಗೆ ಬುದ್ಧನ ಪೋಟೊವನ್ನೂ ಸೇರಿಸಿ ಇಟ್ಟಿದ್ದಾಳೆ.
ಆಕರ : ಆಂದೋಲನ ಮೈಸೂರು ೧೪.೪.೨೦೨೫