
ಟ್ರಂಪಾಪತಿಗಳ ಹುಚ್ಚಾಟಕ್ಕೂ ನಾವು
ಯಾಕೆ ತಲೆಬಿಸಿ ಮಾಡಿಕೊಳ್ಳಬೇಕೆಂದರೆ…
ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು ಆಪಲ್ ಸಂಸ್ಥೆಯ ಮುಖ್ಯಸ್ಥ ಟಿಮ್ ಕುಕ್ ಅವರನ್ನು ಕರೆದು “ನೋಡ್ರೀ… ಐಫೋನ್ ಉತ್ಪಾದನೆ ಭಾರತದಲ್ಲಿ ಮಾಡಬೇಡಿ, ಅಮೆರಿಕದಲ್ಲೇ ಮಾಡ್ಕೊಳ್ಳಿ” ಅಂದಿದ್ದಾರಂತೆ… ಇದೀಗ ಭಾರತದಲ್ಲಿ ರಾಷ್ಟ್ರೀಯ ಸುದ್ದಿ ಆಗಿ ತಿರುಗಾಡುತ್ತಿದೆ.
ಅಲ್ಲಾ ಸಾರ್, ಯಾವುದೋ ಒಂದು ಕಂಪನಿ ಭಾರತದಲ್ಲಿ ಉತ್ಪಾದನೆ ಆರಂಭಿಸಿದರೆ ಅಥವಾ ನಿಲ್ಲಿಸಿದರೆ ನಮ್ಮ ಇಡಿಯ ದೇಶಕ್ಕೆಲ್ಲ “ಟೆನ್ಷನ್” ಆಗೋದು ಯಾಕೆ?…..
ಯಾಕೆಂದರೆ ಇದು ಸ್ವಯಂಕೃತ ಅಪರಾಧ. ನಾನು ಈ ಹಿಂದೆ ಮೂರು ನಾಲ್ಕು ಬಾರಿ, ನನ್ನ ಪಿಟ್ಕಾಯಣ ಅಂಕಣದಲ್ಲಿ ಈ ಬಗ್ಗೆ ಮತ್ತೆ ಮತ್ತೆ ವಿವರ ನೀಡುತ್ತಾ ಬಂದಿದ್ದೇನೆ.
ಭಾರತವು ತನ್ನ ಯುವಕರಿಗೆ ದೇಶದೊಳಗೆ ಉದ್ಯೋಗಾವಕಾಶ ಕಲ್ಪಿಸುವುದಕ್ಕೆ “ಸ್ಕ್ರೂಡ್ರೈವರ್” ಕೌಶಲ ಕಲಿಸಿ, ಆಪಲ್ ಬಳಗ ಆರಂಭಿಸಿರುವ/ಆರಂಭಿಸಲಿರುವ ಅಸೆಂಬ್ಲಿ ಯೂನಿಟ್‌ಗಳೊಳಗೆ ಬಿಟ್ಟಿದೆ/ಬಿಡಲುದ್ದೇಶಿಸಿದೆ. ಇದಕ್ಕಾಗಿ ಆಪಲ್ ಜೊತೆ ಗುತ್ತಿಗೆ ಹೊಂದಿರುವವರಿಗೆ ನಮ್ಮ ತೆರಿಗೆ ಹಣದಿಂದ PLI ಸಬ್ಸಿಡಿ (ಉತ್ಪಾದನೆಗೆ ಲಿಂಕ್ ಮಾಡಲಾದ ಪ್ರೋತ್ಸಾಹಧನ) ಕೂಡ ದಾನ ನೀಡಲಾಗುತ್ತಿದೆ. ಜಗತ್ತಿನ ಹಲವೆಡೆಯಿಂದ ಬಂದು ಇಲ್ಲಿ ಅಸೆಂಬಲ್ ಆಗಿ “ರಫ್ತು” ಎಂದು ಹಣೆಪಟ್ಟಿ ಹಚ್ಚಿಕೊಂಡು ಹೊರಡುವ “ಆಪಲ್ ಐಫೋನ್”ಗಳು ಸದ್ಯಕ್ಕೆ ಭಾರತದಲ್ಲಿ ಅತಿದೊಡ್ಡ ರಫ್ತಿನ ಐಟಂ! ಎರಡನೆಯ ಅತಿದೊಡ್ಡ ರಫ್ತು, ರಷ್ಯಾದಿಂದ ಅಡ್ಡಹಾದಿಯಲ್ಲಿ ತಂದು ಮಾರಿದ “ತೈಲ”.
ಅಕಸ್ಮಾತ್ ಆಪಲ್ ಐಫೋನ್ ಭಾರತದಲ್ಲಿ ಉತ್ಪಾದನೆ ನಿಲ್ಲಿಸಿದರೆ, ಇಲ್ಲಿ ಪೆಟ್ಟು ದುಪ್ಪಟ್ಟು. ಅತ್ತ ಉದ್ಯೋಗ ನಷ್ಟ, ಇತ್ತ ಆಮದು-ರಫ್ತು ಸಂತುಲನ ಇನ್ನಷ್ಟು ಹದ ತಪ್ಪಲಿದೆ. ಹಾಗಾಗಿ, ಈಗ ತಲೆಬಿಸಿ ಮಾಡಿಕೊಳ್ಳದೇ ಬೇರೆ ಹಾದಿ ಇಲ್ಲ. ನಮಗೆ ತಳಪಾಯ ಗಟ್ಟಿ ಇಲ್ಲದಿದ್ದರೂ ಅದೆಷ್ಟೋ ಟ್ರಿಲಿಯನ್ ಎಕಾನಮಿ ಆಗುವ ಚಟ ತಗುಲಿಬಿಟ್ಟಿದೆಯಲ್ಲ!
ಭಾರತೀಯ ಯುವಕರನ್ನು ಹೀಗೆ ಸ್ಕ್ರೂಡ್ರೈವರ್ ತಿರುಗಿಸುವುದಕ್ಕೋ, ಅಥವಾ ಸ್ವಿಗ್ಗಿಯಂತಹ “ಹೋದ ಪುಟ್ಟ-ಬಂದಪುಟ್ಟ” ಗಿಗ್ ಕೆಲಸಗಳಿಗೋ ತೊಡಗಿಸಿ, ಬೀಸುವ ಕತ್ತಿ ತಪ್ಪಿಸಿಕೊಳ್ಳುವ ಸುಲಭ ಹಾದಿ ಬೇಡವಿತ್ತು. ಮೂರೇ ಜನಕ್ಕೆ ಅಚ್ಛೇದಿನ್ ತಂದುಕೊಡುವ “ಆನಿ” ಗಾತ್ರದ ಕೈಗಾರಿಕೆಗಳ ಬದಲು, ಸಣ್ಣ ಗಾತ್ರದ, ಸ್ಥಳೀಯ ಬೇಡಿಕೆಗಳಿಗೆ ಅನುಗುಣವಾದ ಪರಿಸರ ಸ್ನೇಹಿ ಕೈಗಾರಿಕಾ ಉತ್ಪಾದನೆಗಳಲ್ಲಿ ತೊಡಗಿಸಿದ್ದರೆ, ಜನ ಅವರ ಅನ್ನ ಅವರು ದುಡಿಯುವುದನ್ನು ಕಲಿತುಕೊಳ್ಳುತ್ತಿದ್ದರು.
ಇದನ್ನೆಲ್ಲ ಯೋಚಿಸಲು ಸಮಯ ಇರದಿದ್ದ ಕಾರಣ, ಈಗ ಟ್ರಂಪಾಪತಿಗಳ ನೆರಳು ಕಂಡರೂ ಭಯಬೀಳಬೇಕಾಗುವುದು ಅನಿವಾರ್ಯ… ಅವರಿಗೆ ಎಷ್ಟು ಹೊತ್ತಿನ ಮೂಡ್ ಹೇಗಿರುತ್ತದೆ ಎಂದು ಹೇಳುವುದು ಕಷ್ಟ. ವ್ಯವಹಾರ ಒಂದನ್ನು ಬಿಟ್ಟು ಬೇರಾವುದನ್ನೂ ಟ್ರಂಪಾಪತಿಗಳು ಕಂಡೇ ಇಲ್ಲ!!
0 ರಾಜರಾಮ್ ತಲ್ಲೂರ