ಪ್ರಚಲಿತ ಸಂಗತಿ

ವಿಶ್ವ ಸಾಹಿತ್ಯಕ್ಕೆ ಮೆರಗು ತಂದ ವಚನಗಳು

ಬಸವ ಜಯಂತಿಯ ನಿಮಿತ್ತ

Spread the love

ವಿಶ್ವ ಸಾಹಿತ್ಯಕ್ಕೆ ಬೆರಗು ಹುಟ್ಟಿಸಿದ ವಚನ ಸಾಹಿತ್ಯ

ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ತುಂಬಾ ಗಮನಾರ್ಹವಾದ ಸಾಹಿತ್ಯ ಸೃಷ್ಟಿಯಾದದ್ದು ಹನ್ನೆರಡನೆಯ ಶತಮಾನದಲ್ಲಿ. ಬಹುಶಃ ಇಂಥ ಅತ್ಯದ್ಭುತವಾದ ಸಾಹಿತ್ಯ ಜಗತ್ತಿನ ಯಾವ ಭಾಗದಲ್ಲೂ ಸೃಷ್ಟಿಯಾಗಿಲ್ಲ ಎಂದು ಹೇಳಿದರೆ ಅತಿಶಯೋಕ್ತಿಯ ಮಾತು ಆಗಲಾರದು. ವ್ಯಕ್ತಿಗತವಾಗಿ ಒಂದೊಂದು ಶತಮಾನದಲ್ಲಿ ಒಬ್ಬರೊ ಇಬ್ಬರೋ ಹಲವರೋ ಸಾಹಿತ್ಯವನ್ನು ಒಟ್ಟೊಟ್ಟಿಗೆ ಸೃಷ್ಟಿ ಮಾಡಿದ್ದನ್ನು ಕಾಣುತ್ತೇವೆ. ಆದರೆ ಬಸವಣ್ಣನವರ ನೇತೃತ್ವದಲ್ಲಿ ಸಾಮೂಹಿಕವಾಗಿ ವಚನ ಸಾಹಿತ್ಯವೆಂಬ ಅನರ್ಘ್ಯರತ್ನದ ಉದಯವಾದದ್ದು ಇತಿಹಾಸ. ಕಲ್ಯಾಣದ ಬೀದಿ ಬೀದಿಯಲ್ಲಿ ಕಸ ಬಳಿಯುವ ಸತ್ಯಕ್ಕಳೂ ವಚನ ರಚನೆ ಮಾಡಿದ್ದಳೆಂದರೆ ಎಂಥ ಆಶ್ಚರ್ಯ ?

ಸಾಹಿತ್ಯಕ್ಕಾಗಿ ಸಾಹಿತ್ಯ ಎಂಬ ದಿನಮಾನಗಳಲ್ಲಿ ಬದುಕು ಮತ್ತು ಸಾಹಿತ್ಯ ಭಿನ್ನಭಿನ್ನವೆನಲ್ಲ ಎರಡೂ ಒಂದೆ ಎಂದು ಜೀವಿಸಿದವರು ೧೨ ನೇ ಶತಮಾನದ ಶರಣರು. ಬಸವಣ್ಣನವರು ಬರುವವರೆಗೂ ಸಾಹಿತ್ಯದ ರಚನೆ ಪಂಡಿತರ ಗುತ್ತಿಗೆಯಾಗಿತ್ತು. ಪುಸ್ತಕಗಳನ್ನು ಓದುವುದಕ್ಕೆ ನಿಷಿದ್ಧವಾಗಿದ್ದ ಸಂದರ್ಭದಲ್ಲಿ ತಾಳ ಮಾನ ಸರಸವನರಿಯದೆ ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ ಎಂದು ಬರೆದ ಗದ್ಯದಂತಿರುವ ಪದ್ಯವೆ ವಚನ ಸಾಹಿತ್ಯ. ಇದು ಚರಿತ್ರೆಯ ಪುಟಗಳಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಿತು.

ವೇದ ಶಾಸ್ತç ಆಗಮ ಪುರಾಣ ಇತ್ಯಾದಿ ಧಾರ್ಮಿಕ ಗ್ರಂಥಗಳು ಬಹು ಜನರ ನೋವಿಗೆ ಮಿಡಿಯುವ ಸಾಹಿತ್ಯ ಆಗಿರಲಿಲ್ಲ. ಬದಲಾಗಿ ಸಮಾಜದಲ್ಲಿ ಅವು ಅಸಮಾನತೆಯನ್ನು ಸೃಷ್ಟಿ ಮಾಡಿದ್ದವು. ಸಂಸ್ಕೃತ ಭೂಯಿಷ್ಟವಾದ ಭಾಷೆಯನ್ನು ಕಲಿಯುವ ಹಕ್ಕು ಎಲ್ಲರಿಗೂ ಇರಲಿಲ್ಲ. ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ ಎಂಬ ನಾಲ್ಕು ವರ್ಣಗಳು ಹುಟ್ಟಿಕೊಂಡಿದ್ದವು. ಹಿಂದಿನ ಜನ್ಮದಲ್ಲಿ ವ್ಯಕ್ತಿಗಳು ಮಾಡಿದ ಕರ್ಮ ಫಲವೆ ಇಂದಿನ ಜೀವನ ಎಂದು ಸಾರಿಕೊಂಡು ಬರಲಾಗಿತ್ತು. ರಾಜನನ್ನು ಪ್ರತ್ಯಕ್ಷ ದೇವತಾ ಎಂದು ಹೊಗಳಿದ ಒಂದು ವರ್ಗದ ಜನ ನೆಮ್ಮದಿಯಿಂದ ಜೀವನ ಮಾಡುತ್ತಿದ್ದರು. ದೇವರು ಧರ್ಮದ ಹೆಸರಿನ ಮೇಲೆ ನಡೆದ ಶೋಷಣೆ ಎದೆ ನಡುಗಿಸುವಂಥದ್ದು.

ದೇವರು ಧರ್ಮಗಳು ಸಹ ಎಲ್ಲಾ ಜನ ವರ್ಗದ ಸ್ವತ್ತಾಗಿರಲಿಲ್ಲ. ರಾಜ ಮಹಾರಾಜರು ಅಂದು ಆಳ್ವಿಕೆ ನಡೆಸುತ್ತಿದ್ದರೂ ಸಹ ಆ ರಾಜ ಮಹಾರಾಜರನ್ನು ತಮ್ಮ ಶಾಸ್ತçಗಳ ಬಲದ ಮೇಲೆ ನಡೆಸಿಕೊಳ್ಳುವಲ್ಲಿ ಪುರೋಹಿತರು ಯಶಸ್ವಿಯಾಗಿದ್ದರು. ರಾಜ ಮಹಾರಾಜರೆ ಪುರೋಹಿತರ ಕೈಗೊಂಬೆಯಾದ ಮೇಲೆ ಜನ ಸಾಮಾನ್ಯನ ಪಾಡು ಕೇಳುವವರು ಯಾರು ? ಕುಂಬಾರಿಕೆ, ಕಂಬಾರಿಕೆ, ವ್ಯವಹಾರ, ಕೃಷಿ ಇತ್ಯಾದಿಗಳನ್ನು ಮಾಡುವ ಜನಗಳನ್ನು ಅವರವರ ಕೆಲಸಗಳ ಮೇಲೆ ವಿಂಗಡಿಸಲಾಗಿತ್ತು. ಬೆವರು ಸುರಿಸಿ ಕೆಲಸ ಮಾಡುವವರನ್ನು ಕೀಳೆಂದು ಕಾಣಲಾಗುತ್ತಿತ್ತು. ಮೈ ಮುರಿಯದೆ ಬರಿ ಶಾಸ್ತç ಪುರಾಣ ಪಂಚಾAಗ ಹೇಳುವವರು ಸಮಾಜದಲ್ಲಿ ಮೇಲ್ವರ್ಗದವರೆಂದು ಗುರುತಿಸಿಕೊಂಡಿದ್ದರು. ಅಂದು ಸಾಹಿತ್ಯ ರಚನೆಯಾದುದು ರಾಜಶಾಯಿಗಳ ವೈಭವದ ಮೇಲೆ. ಜನ ಸಾಮಾನ್ಯರ ನೋವು ನಲಿವುಗಳನ್ನು ಸಾಹಿತ್ಯವಾಗಿಸುವ ಅನುಭವ ಇದ್ದರೂ ಅದಕ್ಕೆ ಅವಕಾಶ ಇರಲಿಲ್ಲ.

ರಾಜರುಗಳ ಆಳ್ವಿಕೆಯ ಆ ದಿನಗಳಲ್ಲಿ ಶೋಷಣೆ-ಅನ್ಯಾಯ- ಅತ್ಯಾಚಾರ ಸಾಮಾನ್ಯ ಎನ್ನುವಂತೆ ಇದ್ದವು. ವ್ಯವಸ್ಥೆಯನ್ನು ಪ್ರಶ್ನೆ ಮಾಡುವ ಅಧಿಕಾರ ಹಾಗೂ ತಾಕತ್ತು ಆಗ ಯಾರಿಗೂ ಇರಲಿಲ್ಲ. ಸಹಜವಾಗಿ ಕಂದಾಚಾರ ಮೌಢ್ಯಗಳು ತಲೆ ಎತ್ತಿ ಮನುಷ್ಯರೆಲ್ಲ ಜೀವಂತ ಶವಗಳ ರೀತಿಯಲ್ಲಿ ಬದುಕುತ್ತಿದ್ದರು. ಹೆಣ್ಣು ಮಕ್ಕಳನ್ನಂತೂ ಮನುಷ್ಯರೆಂದು ಪರಿಗಣಿಸದ ದಿನಮಾನಗಳು. ಅಕೆ ಬಾಲ್ಯದಲ್ಲಿ ತಂದೆ ತಾಯಿಗಳ ರಕ್ಷಣೆಯಲ್ಲಿ. ಯೌವ್ವನದಲ್ಲಿ ಗಂಡನ ಆರೈಕೆಯಲ್ಲಿ. ಕೊನೆಗೆ ಮಕ್ಕಳ ಪರಿಪಾಲನೆಯಲ್ಲಿ ಬದುಕಬೇಕಾದಂತಹ ದುಸ್ಥಿತಿ ಇತ್ತು. ಹೆಣ್ಣು ಕೇವಲ ಭೋಗದ ವಸ್ತುವೆಂದು ಪರಿಗಣಿಸಲಾಗಿತ್ತು. ಅವಳಿಗೆ ಧಾರ್ಮಿಕ ಹಕ್ಕು ಕನಸಿನ ಗಂಟೆ ಆಗಿತ್ತು.

ಈ ಎಲ್ಲಾ ಅಸತ್ಯ, ಅನ್ಯಾಯ, ದಬ್ಬಾಳಿಕೆಗಳಿಗೆ ಕೊನೆ ಮಾಡಲು ಎಂಬಂತೆ ಹುಟ್ಟಿ ಬಂದವರು ಬಸವಣ್ಣನವರು. ಅವರು ಬಾಲ್ಯದಲ್ಲಿದ್ದಾಗ ನಡೆದ ಉಪನಯನ ಪ್ರಸಂಗ ಅವರ ಬದುಕಿಗೊಂದು ಹೊಸ ತಿರುವನ್ನು ನೀಡಿತು. ತಮ್ಮ ಅಕ್ಕ ಅಕ್ಕನಾಗಮ್ಮ ತನಗಿಂತಲೂ ಎರಡು ಮೂರು ವರ್ಷ ದೊಡ್ಡವಳಾಗಿದ್ದರೂ ಅವಳಿಕೆ ಏಕೆ ಜನಿವಾರ ಹಾಕಿಲ್ಲ ? ನನಗೆ ಮಾತ್ರ ಏಕೆ ಜನಿವಾರ ? ಜನಿವಾರ ಹಾರಿದವರೆಲ್ಲರೂ ಬ್ರಾಹ್ಮಣ ಆಗುವುದಾಗಿದ್ದರೆ ಅವಳಿಗೂ ಜನಿವಾರ ಹಾಕಿ ಬ್ರಾಹ್ಮಣರನ್ನು ಮಾಡಿ ಎಂಬ ಬಾಲಕ ಬಸವಣ್ಣನವರ ಮಾತಿಗೆ ಅವಕ್ಕಾದ ಪುರೋಹಿತರು ಬಸವಣ್ಣನವರನ್ನೆ ಮನೆ ಹಾಗೂ ಅಗ್ರಹಾರದಿಂದ ಬಹಿಷ್ಕಾರ ಮಾಡಿದರು. ಆಗ ಸಹಜವಾಗಿ ಅಕ್ಕ ಅಕ್ಕನಾಗಮ್ಮ ಬಸವಣ್ಣನವರ ಜೊತೆ ಆದಳು.
ಸಮಾಜದಿಂದ ಬಹಿಷ್ಕರಿಸಲ್ಪಟ್ಟ ಬಸವಣ್ಣನವರು ಕಂಡುಂಡ ನೋವು ವರ್ಣನಾತೀತ. ಕಪ್ಪಡಿ ಸಂಗಮನಲ್ಲಿ ನೆಲೆ ನಿಂತ ಬಸವಣ್ಣ ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಹಲವಾರು ಕಂದಾಚಾರಗಳನ್ನು ಗಮನಿಸಿದರು. ದೇವರು ಧರ್ಮದ ನಂಬಿಕೆಗಳ ಹೆಸರಿನ ಮೇಲೆ ನಡೆಯುವ ದಬ್ಬಾಳಿಕೆಯಿಂದ ಜನತೆಯನ್ನು ಪಾರು ಮಾಡಬೇಕೆಂದು ವಚನ ರಚನೆಯ ಬರವಣಿಗೆ ಕೈಗೊಂಡರು. ಸಾಹಿತ್ಯ ಕೇವಲ ಮೇಲ್ವರ್ಗದವರಿಗೆ ಅಲ್ಲ. ತಳ ಸಮೂಹಕ್ಕೂ ಅದು ತಲುಪಬೇಕೆಂಬ ಅಭಿಲಾಷೆಯಿಂದ ಜನ ಭಾಷೆಯನ್ನು ಉಪಯೋಗಿಸಿ ವಚನಗಳ ರಚನೆ ಮಾಡಿದರು.

ಕಪ್ಪಡಿ ಸಂಗಮಕ್ಕೆ ಬಂದು ನೀರಿನಲ್ಲಿ ಮುಳು ಮುಳುಗಿ ಏಳುತ್ತ ಪುನೀತರಾದೆವು ಎಂಬ ಭ್ರಮೆಯಲ್ಲಿ ಜನಗಳನ್ನು ಕಂಡು

ನೀರನು ಕಂಡಲ್ಲಿ ಮುಳುಗುವರಯ್ಯಾ
ಮರವನು ಕಂಡಲ್ಲಿ ಸುತ್ತುವರಯ್ಯಾ
ಬತ್ತುವ ಜಲವ ಒಣಗುವ ಮರವ ನಂಬಿದವರು
ನಿಮ್ಮನೆತ್ತ ಬಲ್ಲರು ಕೂಡಲ ಸಂಗಮದೇವಾ

ಎಂಬ ಸರಳ ರಚನೆಯ ವಚನ ಜನರ ಕಣ್ಣು ತೆರೆಸಲು ಕಾರಣವಾಯಿತು. ಉಳ್ಳವರು ಶಿವಾಲಯವ ಮಾಡುವರು ನಾನೇನ ಮಾಡಲಿ ಬಡವನಯ್ಯಾ ? ಎಂದು ಪ್ರಶ್ನಿಸುತ್ತ ಎನ್ನ ದೇಹವೇ ದೇಗುಲ, ಶಿರ ಹೊನ್ನ ಕಳಶ ಅಂದಾಗ ಸಹಜವಾಗಿ ಮನುಷ್ಯ ಆಲೋಚಿಸಲು ತೊಡಗಿದ. ಏಕೆಂದರೆ ಆಗ ಸರ್ವರಿಗೂ ಗುಡಿಗಳಿಗೆ ಪ್ರವೇಶ ಇರಲಿಲ್ಲ. ದೇವರ ದರ್ಶನ ಕನಸಿನ ಮಾತಾಗಿತ್ತು. ಆದ್ದರಿಂದ ದೇಹವೇ ದೇವಾಲಯ ಆದ ಮೇಲೆ ಶಿರ ಹೊನ್ನ ಕಳಶ ಆದ ಮೇಲೆ ಇನ್ನಾವ ದೇವರ ಅಗತ್ಯವಿಲ್ಲವೆನಿಸಿತು.

ನಮ್ಮ ದೇವರನ್ನು ನಾವು ಪೂಜಿಸಬೇಕೆ ಹೊರತು ಇನ್ನಾರಿಂದಲೂ ಅಲ್ಲ ಎಂಬುದು ಬಸವಣ್ಣನವರ ಗಟ್ಟಿಯಾದ ನಿಲುವು. ನಾವು ಉಂಡರೆ ಹೇಗೆ ನಮ್ಮ ಹೊಟ್ಟೆ ತುಂಬುತ್ತದೋ, ಹಾಗೆಯೆ ನಮ್ಮ ದೇವರಿಗೆ ನಾವೇ ಪೂಜಿಸಿದಾಗಲೆ ಅದರ ಫಲ ಸಿಗುತ್ತದೆ. ಆದ್ದರಿಂದ ನಮ್ಮ ಮತ್ತು ದೇವರ ಮಧ್ಯೆ ಯಾವುದೆ ಅನ್ಯ ವ್ಯಕ್ತಿ ಬೇಡವೆ ಬೇಡ ಎಂಬುದು ಬಸವಣ್ಣನವರ ಅಚಲ ನಿಲುವು. ಇಂಥ ನಿಲುವನ್ನು ಜಾರಿಗೆ ತರಲು ಬಸವಣ್ಣನವರು ಸಾಕಷ್ಟು ಪರಿಶ್ರಮ ಪಟ್ಟರು.

ಕಟ್ಟಿಗೆ ಮಾರುವ,ಗಡಿಗೆ ಮಾಡುವ, ಬಟ್ಟೆ ತೊಳೆಯುವ, ದನ ಕಾಯುವ, ಕುರಿ ಮೇಯಿಸುವ, ಹೊಲ ಉಳುಮೆ ಮಾಡುವ, ಅಡುಗೆ ಮಾಡುವ, ಕುದುರೆಗೆ ಹುಲ್ಲು ಹಾಕುವ, ಹಲವು ಹತ್ತು ಕಸುಬು ಮಾಡುವ ಜನರನ್ನು ಒಟ್ಟಿಗೆ ಕೂಡಿಸಿ ಅವರೊಂದಿಗೆ ಮುಕ್ತವಾಗಿ ಚರ್ಚಿಸಿದರು.ಅವರೆಲ್ಲರಿಗೂ ಶಿಕ್ಷಣದ ಜೊತೆಗೆ ಅರಿವನ್ನು ನೀಡಿದರು. ಅವರಿಗೆಲ್ಲ ಅವರವರ ಅರಿವಿನ ಕುರುವಾದ ಇಷ್ಟಲಿಂಗವನ್ನು ನೀಡಿದರು. ಆ ಇಷ್ಟಲಿಂಗ ಜಗದಗಲ ಮುಗಿಲಗಲ, ಮಿಗೆಯಗಲ ನಿಮ್ಮಗಲ, ಪಾತಾಳದಿಂದ ಅತ್ತತ್ತ ಎನ್ನುತ್ತ ದೇವರ ವಿರಾಢರೂಪವನ್ನು ತಿಳಿಸಿದರು.

ಬಸವಣ್ಣನವರು ಬರುವುದಕ್ಕಿಂತ ಪೂರ್ವದಲ್ಲಿ ಮಾಡುವ ಪ್ರತಿ ಚಟುವಟಿಕೆ ಕೆಲಸಗಳಾಗಿದ್ದವು. ಆದರೆ ಆ ಕೆಲಸಗಳನ್ನು ಪರಿಶುದ್ಧವಾದ ಭಾವದಿಂದ ಮಾಡಿದರೆ ಕಾಯಕವಾಗುತ್ತದೆ. ಆ ಕಾಯಕ ತನು ಮನ ಸಮರ್ಪಿಸಿಯೆ ಮಾಡಬೇಕು. ಅದರಿಂದ ಬಂದ ಪ್ರತಿ ಫಲ ಅದೂ ಸಮಾಜದಕ್ಕೆ ಸೇರಿದ್ದು ಎಂಬ ಭಾವ ಬಿತ್ತಿದರು. ಅನುಭವ ಮಂಟಪ ಕಟ್ಟಿದರು. ರಾಷ್ಟçದ ಮೂಲೆ ಮೂಲೆಯಿಂದ ಜನ ಕಲ್ಯಾಣದ ಕಡೆ ಮುಖ ಮಾಡಿದರು. ಅವರೆಲ್ಲರೂ ಕಾಯಕದ ಜೊತೆ ಜೊತೆಗೆ ತಮ್ಮ ಅನುಭವಗಳಿಗೆ ಸಾಹಿತ್ಯದ ರೂಪು ನೀಡಿ ವಚನ ರಚನೆ ಮಾಡಿದರು. ಹಳಗನ್ನಡ ಹಾಗೂ ಅಡು ಕನ್ನಡವನ್ನು ಉಪಯೋಗಿಸಿ ಜನ ಸಾಮಾನ್ಯರ ಶ್ರೇಯೋಭಿವೃದ್ಧಿಗಾಗಿ ಹುಟ್ಟಿಕೊಂಡದ್ದು ವಚನ ಚಳುವಳಿ. ಷಟ್ಪದಿ,ತ್ರಿಪದಿ, ಸಾಂಗತ್ಯ,ಜಾನಪದ ಕಸುವನ್ನೂ ವಚನ ಸಾಹಿತ್ಯ ಹೀರಿಕೊಂಡು ಬೆಳೆಯಿತು. ಸಾಮಾಜಿಕ ಧಾರ್ಮಿಕ ವ್ಯಕ್ತಿಯ ಆತ್ಮೋನ್ನತಿ ಬೆಳಗಿಸಲು ಸಾಹಿತ್ಯ ಸೃಷ್ಟಿಯಾಯಿತು. ಆದರೆ ವಚನಗಳ ರಚನೆ ಮುಂದೆ ನಿಂತು ಹೋಯಿತು.

ಸಾಹಿತ್ಯ ಕೇವಲ ಮನೋರಂಜನೆಗೆ ಅಲ್ಲ. ಧಾರ್ಮಿಕತೆಗೂ ಅಲ್ಲ. ಜನ ಸಾಮಾನ್ಯನ ನೋವು ನರಳಿಕೆಗೂ ಅದು ಕಿವಿಯಾಗುತ್ತದೆ ಎಂಬುದನ್ನು ಶರಣರೆಲ್ಲ ಸೇರಿ ಸಿದ್ದ ಮಾಡಿ ತೋರಿಸಿದರು. ನುಲಿಯ ಚೆಂದಯ್ಯ, ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ, ಡೋಹಾರ ಕಕ್ಕಯ್ಯ, ಸಮಗಾರ ಹರಳಯ್ಯಾ, ಮಾದಾರ ಚೆನ್ನಯ್ಯ, ಅಕ್ಕನಾಗಮ್ಮ, ನೀಲಾಂಬಿಕೆ, ಗಂಗಾಂಬಿಕೆ, ಅಕ್ಕಮ್ಮ, ಹಾವಿನಾಳ ಕಲ್ಲಯ್ಯ, ಸಗರದ ಬೊಮ್ಮಯ್ಯ ಮೊದಲಾದವರಾಗಿ ವಚನಗಳನ್ನು ರಚನೆ ಮಾಡಿದರು. ಸಾಹಿತ್ಯ ಸಮಾಜದ ಬದಲಾವಣೆಗೂ ಕಾರಣವಾಯಿತು. ಕಂದಾಚಾರ ಮೌಢ್ಯಗಳು ಮೂಲೆ ಸೇರಿದವು. ಜನ ಪ್ರಜ್ಞಾವಂತರಾದರು. ಮಹಿಳೆಯರಿಗೆ ಮೊಟ್ಟ ಮೊದಲು ಸ್ವಾತಂತ್ರö್ಯ ಸಿಕ್ಕಿತು. ವ್ಯವಸ್ಥೆಯನ್ನು ಪ್ರಶ್ನೆ ಮಾಡುವ ಅಧಿಕಾರವನ್ನು ಜನ ಸಾಮಾನ್ಯರು ಪಡೆದರು. ಹುಟ್ಟಿನಿಂದ ಯಾರೂ ಮೇಲು ಕೀಳಿಲ್ಲ, ಎಲ್ಲರ ಹುಟ್ಟು ಒಂದೆ ಬಗೆಯಾದುದು. ಎಲ್ಲರೂ ಒಂದಲ್ಲ ಒಂದು ದಿನ ಸಾವಿಗೆ ಶರಣಾಗಲೆ ಬೇಕು. ಹುಟ್ಟು ಮತ್ತು ಸಾವಿನ ನಡುವಿನ ಬದುಕನ್ನು ಅರ್ಥಪೂರ್ಣವಾಗಿ ಜೀವಿಸಬೇಕು ಎಂಬ ಸಂದೇಶವನ್ನು ವಚನ ಸಾಹಿತ್ಯ ನೀಡಿತು. ಜನ ಭಾಷೆ ದೇವ ಭಾಷೆಯಾಯಿತು. ವಿವಿಧ ಮೂಲಗಳ ವೃತ್ತಿ ಮಾಡುವ ಜನರೆಲ್ಲ ಸಾಹಿತ್ಯ ರಚನೆ ಮಾಡಿದ್ದರಿಂದ ಸಹಜವಾಗಿಯೆ ಸಾಹಿತ್ಯ ರಸ ಪೂರ್ಣವಾಗಿ ತುಂಬಿಕೊಂಡಿತು.

ವಚನಕಾರರ ನಂತರ ಬಂದ ಹರಿಹರ ರಾಘವಾಂಕ ಅನುಭಾವಿ ಕವಿ ಕಡಕೋಳ ಮಡಿವಾಳಪ್ಪ, ಸರ್ವಜ್ಞ, ಮುಪ್ಪಿನ ಷಡಕ್ಷರಿ, ಕೊನೆಯ ವಚನಕಾರ ಷಣ್ಮುಖ ಶಿವಯೋಗಿಗಳು ವಚನ ಸಾಹಿತ್ಯದ ಸತ್ವವನ್ನು ಹೀರಿಕೊಂಡು ಬೆಳೆದ ಪ್ರಮುಖ ಬರಹಗಾರರು, ಸಾಮಾಜಿಕ ಚಿಂತಕರೂ ಆಗಿದ್ದರು ಎಂಬುದು ಗಮನಾರ್ಹ.

ವಿಶ್ವಾರಾಧ್ಯ ಸತ್ಯಂಪೇಟೆ

Related Articles

Leave a Reply

Your email address will not be published. Required fields are marked *

Back to top button