ನಾವು ಓದುತ್ತಿರುವುದು ನೈಜ ಇತಿಹಾಸವಲ್ಲ

ನಾವು ಓದುತ್ತಿರುವುದು ನೈಜ ಇತಿಹಾಸವಲ್ಲ
ವರದಿ : ಅಮೋಘ ಸತ್ಯಂಪೇಟೆ
ಶಹಾಪುರ : ೨೬ : ಭಾರತದ ಚರಿತ್ರೆಯನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಇತಿಹಾಸದಲ್ಲಿ ಹಲವು ತಪ್ಪುಗಳಾಗಿವೆ. ಒಳ್ಳೆಯವೂ ಆಗಿವೆ. ಕತ್ತಲೆಯ ಕೇಂದ್ರಗಳೂ ಇವೆ. ಬೆಳಕಿನ ಬಿಂದುಗಳೂ ಇವೆ. ಬೆಳಕಿನ ಬಿಂದುಗಳನ್ನು ನಾವು ಆಯ್ಕೆ ಮಾಡಿಕೊಂಡು ಭಾರತದ ಇತಿಹಾಸವನ್ನು ಕಟ್ಟಬೇಕಿದೆ ಎಂದು ಚಿಂತಕ ಡಾ.ಪ್ರಭು ಖಾನೆಪುರೆ ಅವರು ನುಡಿದರು.
ಬಸವಮಾರ್ಗ ಪ್ರತಿಷ್ಠಾನ ಸತ್ಯಂಪೇಟೆ ಏರ್ಪಡಿಸಿದ್ದ , ಲಿಂಗಣ್ಣ ಸತ್ಯಂಪೇಟೆ ವೇದಿಕೆಯಲ್ಲಿ ತಿಂಗಳ ಬಸವ ಬೆಳಕು -೧೨೪ ರ ಸಭೆಯಲ್ಲಿ ಶರಣ ಮಾತೆ ಮಹಾದೇವಿ ತಾಯಿಯವರ ಸ್ಮರಣೋತ್ಸವ ನಿಮಿತ್ತದ ಸಭೆಯಲ್ಲಿ ಭಾಗವಹಿಸಿ ಹಿಂದಣ ಹೆಜ್ಜೆಯನರಿಯದವರು ಮುಂದಡಿ ಇಡಲಾಗದು ಎಂಬ ವಿಷಯ ಕುರಿತು ಮಾತನಾಡಿದರು.
ಪಠ್ಯ ಪುಸ್ತಕದಲ್ಲಿ ಓದುವುದೆಲ್ಲ ಅಸಲಿ ಇತಿಹಾಸ ಅಲ್ಲವೆ ಅಲ್ಲ. ಶೋಷಣೆ ಒಳಗಾದವರ , ಕಾಯಕ ಜೀವಿಗಳ ಬಗೆಗೆ ಯಾವುದೆ ಪಠ್ಯ ಇಲ್ಲ. ಅಣ್ಣ ತಮ್ಮಂದಿರ ಜಗಳ, ಹೆಣ್ಣು ಗಂಡಿನ ನಡುವಿನ ಅಕ್ರಮ ಸಂಬಂಧಗಳ ಬಗೆಗೆ ಕಾವ್ಯ , ಮಹಾಕಾವ್ಯಗಳೆ ಬರೆಯಲಾಗಿದೆ. ಇವೆಲ್ಲ ನಮ್ಮ ಸಂಸ್ಕೃತಿ ಅಲ್ಲ. ದುಡಿಮೆಯೆ ನಮ್ಮ ಸಂಸ್ಕೃತಿ. ಎಲ್ಲರೂ ಒಂದಾಗಿ, ಯಾವುದೆ ತಾರತಮ್ಯಗಳಿಲ್ಲದೆ ನಾವೆಲ್ಲರೂ ಒಂದೇ ಎಂಬ ಭಾವದಲ್ಲಿ ಬದುಕುವುದೆ ನಮ್ಮ ಸಂಸ್ಕೃತಿ.
ಕಾಡನ್ನು ನಾಶ ಮಾಡಿ ಗುಡಿ ಕಟ್ಟುವುದು ನಮ್ಮ ಇತಿಹಾಸವಲ್ಲ. ಗುಡಿಗಳಲ್ಲಿ ದೇವರಿಲ್ಲ. ಗುಡಿಗಳಿಂದ ಹೆಚ್ಚಾನೆಚ್ಚು ಪರಾಲಂಬಿಗಳು ಹೆಚ್ಚಾಗಿದ್ದಾರೆ. ತನ್ನ ಮೇಲೆ ತನಗೆ ನಂಬಿಕೆಯಿಲ್ಲದೆ ಏನೆಲ್ಲವಕ್ಕೂ ಬೇಡಿಕೊಳ್ಳುವ ಬಿಕ್ಷÄಕರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದಲೆ ಬಸವಣ್ಣನವರು ಗುಡಿ ಸಂಸ್ಕೃತಿಯನ್ನು ತಿರಸ್ಕರಿ ದೇಹವೇ ದೇವಾಲಯ ಎಂದು ಹೇಳಿದರು ಎಂದವರು ವಿವರಿಸಿದರು.
ಶರಣ ಚಳುವಳಿಯ ಮುಖ್ಯ ಉದ್ದೇಶವೆಂದರೆ ಪರಸ್ಪರ ಎಲ್ಲರಲ್ಲಿ ಸಮಾತೆ ಇರಬೇಕು. ಯಾವುದೆ ಭೇದ ಭಾವ ಮಾಡಬಾರದು. ಮಹಿಳೆ ಕೀಳಲ್ಲ. ಪುರುಷ ಶ್ರೇಷ್ಠನಲ್ಲ. ಕಾಯಕ ಮಾಡುವವರೆಲ್ಲರೂ ಶ್ರೇಷ್ಠರು ಎಂಬ ತತ್ವವನ್ನು ಜಗತ್ತಿಗೆ ಸಾರಿ ಹೇಳಿದರು. ಶರಣರ ಚಿಂತನೆಗಳನ್ನು ತಿಳಿದುಕೊಂಡವರು ಇತಿಹಾಸವನ್ನು ನಿರ್ಮಿಸಬಲ್ಲರು ಎಂದವರು ತಿಳಿಸಿದರು.
ಜಗದ್ಗುರು ಮಾತೆ ಮಹಾದೇವಿ ಹಾಗೂ ಲಿಂಗಾನಂದ ಮಹಾಸ್ವಾಮೀಜಿ ಇಲ್ಲದೆ ಹೋಗಿದ್ದರೆ ಬಸವಣ್ಣನವರ ವಿಚಾರಗಳನ್ನು ಹಾಗೂ ಶರಣರ ಭಾವಚಿತ್ರಗಳನ್ನು ನಾವು ನೋಡುವುದೆ ಕಷ್ಟವಾಗಿತ್ತು. ಯಾವ ಮಠಾಧೀಶರು ಮಾಡದೆ ಇರುವ ಕೆಲಸವನ್ನು ಮಾತಾಜಿಯವರು ಮಾಡಿದ್ದಾರೆ. ಅವರ ಸ್ಮರಣೆ ಮಾಡುವುದೆಂದರೆ ಬಸವ ಪ್ರಜ್ಞೆಯನ್ನು ನಮ್ಮೊಳಗೆ ನಾವು ಮೂಡಿಸಿಕೊಳ್ಳುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ನುಡಿದರು.
ಶಿಕ್ಷಕರು ಸಮಾಜದ ಪ್ರಜ್ಞಾವಂತ ಜನ ಸಮುದಾಯ. ತಮಗೆ ಸಿಕ್ಕಿರುವ ಅವಕಾಶವನ್ನು ಸದ್ಭಳಕೆ ಮಾಡಿಕೊಂಡು ಮಕ್ಕಳನ್ನು ಹಾಗೂ ಜನ ಸಮುದಾಯವನ್ನು ತಿದ್ದಬೇಕೆಂದು ಯಾದಗಿರಿ ಸಾ.ಶಿ.ಇಲಾಖೆಯ ಮುಖ್ಯಸ್ಥರಾದ ಚೆನ್ನಬಸವಪ್ಪ ಮುಧೋಳ ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ದಂಡಾಧಿಕಾರಿ ಉಮಾಕಾಂತ ಹಳ್ಳೆಯವರು ಬಸವ ಬೆಳಕು ಎಂಬ ವಿನೂತನ ಕಾರ್ಯಕ್ರಮದ ಮೂಲಕ ಜನ ಮಾನಸದಲ್ಲಿರುವ ಮೌಢ್ಯ ಕಂದಾಚಾರವನ್ನು ಅಳಿಸಿ ಆ ಸ್ಥಳದಲ್ಲಿ ಸಮಾನತೆ ಹಾಗೂ ವೈಜ್ಞಾನಿಕ ಚಿಂತನೆಗಳನ್ನು ಬಿತ್ತುತ್ತಿರುವ ಪ್ರತಿಷ್ಠಾನದ ಕೆಲಸ ಶ್ಲಾಘನೀಯ ಎಂದವರು ತಿಳಿಸಿದರು. ವೇದಿಕೆಯ ಮೇಲೆ ರಾಷ್ಟ್ರೀಯ ಬಸವ ದಳದ ಜಯದೇವಿ ಚಟ್ಟಿಯರು ಇದ್ದರು. ಇದೆ ಸಂದರ್ಭದಲ್ಲಿ ಉಮಾಕಾಂತ ಹಳ್ಳೆಯವರನ್ನು ಪ್ರತಿಷ್ಠಾನದ ಪರವಾಗಿ ಸನ್ಮಾನಿಸಲಾಯಿತು.
ಚೇತನ ಮಾಲಿ ಪಾಟೀಲ ಸ್ವಾಗತಿಸಿದರು. ಶಿವಣ್ಣ ಇಜೇರಿ ನಿರೂಪಿಸಿದರು. ಕೊನೆಯಲ್ಲಿ ಶಿವಕುಮಾರ ಕರದಳ್ಳಿ ವಂದನೆಗಳನ್ನು ತಿಳಿಸಿದರು. ಭೀಮರಾಯ ಗುಳೇದ ಹಾಗೂ ಬಸವಮಾರ್ಗದ ಚಿಣ್ಣರರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ಜ್ಯೋತಿ ಬೆಳಗಿಸುವ ಮೂಲಕ ಗಂಗಮ್ಮ ತುಂಬಗಿ ಉದ್ಘಾಟಿಸಿದರು.
ಸಭೆಯಲ್ಲಿ ಶಿವಯೋಗಪ್ಪ ಮುಡಬೂಳ , ಮಲ್ಲಣ್ಣ ಹೊಸ್ಮನಿ, ಭೀಮಣ್ಣ ಮೇಟಿ, ಷಣ್ಮುಖ ಸಾಹು, ಶಿವಕುಮಾರ ಆವಂಟಿ, ಅಕ್ಕಮಹಾದೇವಿ ಬಳಗ ಶಹಾಪುರ, ಹೊನ್ನರೆಡ್ಡಿ ವಕೀಲರು, ದೇವರಾಜ ಚಟ್ಟಿ, ರಮೇಶ ವಜ್ಜಲ, ನಾಗಪ್ಪ ಬೊಮ್ಮನಳ್ಳಿ, ವಿಶ್ವನಾಥ ಬುಂಕಲದೊಡ್ಡಿ, ಸಿದ್ದರಾಮ ಹೊನ್ಕಲ್, ಹಂಪಯ್ಯ ಚಂದ್ರಕಲಾ ಕೆಂಭಾವಿ, ರೇಖಾ ಯಡ್ರಾಮಿ, ಖಾಜಾ ಪಟೇಲ್, ತಿಪ್ಪಣ್ಣ ಜಮಾದಾರ, ಮಲ್ಲಿಕಾರ್ಜುನ ಸತ್ಯಂಪೇಟೆ, ಬಸವರಾಜ ಹುಣಸಗಿ, ಶರಣಪ್ಪ ಯಡ್ರಾಮಿ,ದೇವಿಂದ್ರಪ್ಪ ಬಡಿಗೇರ, ವಿರೂಪಾಕ್ಷಿ ಸಿಂಪಿ, ಭಂಡಾರಿ ವಕೀಲ,ಚೆನ್ನಪ್ಪ ಗುಂಡಾನೋರ, ಚೆನ್ನಪ್ಪ ಆನೇಗುಂದಿ, ಲಕ್ಷ್ಮಣ ಲಾಳಸೇರಿ, ಸಿದ್ದಲಿಂಗಪ್ಪ ಆನೇಗುಂದಿ, ಗಣೇಶ ನಗರದ ಸಮಸ್ತ ಬಸವ ಬಳಗದವರು ಹಾಜರಿದ್ದರು.