ಚಮತ್ಕಾರಿಕ ರೀತಿಯಲ್ಲಿ ಶರಣ ತತ್ವದೆಡೆಗೆ ಆಕರ್ಶಿತವಾದ ಶಿರವಾಳ
ಮಾದರಿ ಯುವಕರು

ಶಹಾಪುರ ತಾಲೂಕಿನ ಶಿರವಾಳ ಗ್ರಾಮದಲ್ಲಿ ನಾದಯ್ಯ ,ನನ್ನಯ್ಯ ಹಾಗೂ ಸುಜ್ಞಾನೇಶ್ವರ ಎಂಬ ಶರಣರಿದ್ದಾರೆ. ಆದರೆ ಕಾಲನ ಹೊಡೆತಕ್ಕೆ ಈಡಾದ ಈ ಊರಲ್ಲಿ ಯಾವ ಶರಣರ ಬಗೆಗೂ ಖಚಿತ ಮಾಹಿತಿ ಜನಗಳಿಗೆ ಇಲ್ಲ. ಪ್ರಜ್ಞೆ ತುಂಬಬೇಕಾದ ಮಠಾಧೀಶರು ಮನೆ ಮನೆಗೆ ತಿರುಗಾಡಿ ಉಂಡು ಹೋಗಿದ್ದಾರೆ, ಕೊಂಡು ಹೋಗಿದ್ದಾರೆ.
ಶರಣರ ಕುರಿತು ಪ್ರಾಥಮಿಕ ತಿಳುವಳಿಕೆಯನ್ನು ನೀಡಿಲ್ಲ. ಲಿಂಗಾಯತರು ಬಸವಣ್ಣನವರ ಪರಿಚಯವಿಲ್ಲದೆ ಕುಬ್ಜರಾಗಿದ್ದಾರೆ. ತಮ್ಮ ಧಾರ್ಮಿಕ ಹಿನ್ನೆಲೆಯನ್ನು ಮರೆತು ಮೂಢರಾಗಿದ್ದಾರೆ.ಮಠವೇಕೋ ಪರ್ವತವೇಕೊ ಚಿತ್ತ ಸಮಾಧಾನ ಉಳ್ಳ ಶರಣಂಗೆ ಎಂದು ಶರಣರು ಹೇಳಿದ್ದಾರಾದರೂ ಉತ್ತರ ಕರ್ನಾಟಕದ ಲಿಂಗಾಯತರು ಮಠವನ್ನೆ ನೆಚ್ಚಿ ಕುಳಿತುಕೊಳ್ಳುವಂತಾಗಿದೆ. ಇದಕ್ಕೆ ಕೇವಲ ಮಠಾಧೀಶರೊಬ್ಬರೆ ಕಾರಣವಲ್ಲ, ಅಜ್ಞಾನಿ ಭಕ್ತರೂ ಅಷ್ಟೆ ಕಾರಣರು.
ಶಿಷ್ಯ ಜಾಗೃರಾದಾಗ ಸಹಜವಾಗಿ ಆತ ತನ್ನ ಗುರುವನ್ನು ಹುಡುಕುತ್ತಾನೆ ಎಂದನ್ನುವಂತೆ ಶಿರವಾಳ ಗ್ರಾಮದ ಬಸವ ಬಳಗದ ಯುವಕರೆಲ್ಲ ಬಸವ ಜಯಂತಿಯ ಪ್ರಯುಕ್ತ ಬಸವ ದರ್ಶನ ಪ್ರವಚನ ವನ್ನು ಏರ್ಪಡಿಸಿದ್ದರು.

ಹನ್ನೆರಡು ದಿನಗಳ ಕಾಲ ಬಸವ ದರ್ಶನ ಪ್ರವಚನ ಮಾಡಿದ ಪೂಜ್ಯ ಶ್ರೀ ಪ್ರಭುಸ್ವಾಮೀಜಿಗಳು ಚಮತ್ಕಾರಿಕವಾದ ಬದಲಾವಣೆಯನ್ನು ಶಿರವಾಳದಲ್ಲಿ ಮಾಡಿದ್ದಾರೆ. ಶರಣ ನೆಲೆವಿಡಾಗಿದ್ದರೂ ಶರಣ ಪರಿಚಯವಿಲ್ಲದಿದ್ದ ಊರಿನವರೆಲ್ಲ ಈಗ ಬಸವ ನಾಮವೆಂಬುದು ಕಾಮಧೇನು ಕಾಣಿರೊ, ಕಲ್ಪವೃಕ್ಷ ಕಾಣಿರೊ ಎಂದು ಅಪ್ಪಿ- ಒಪ್ಪಿಕೊಂಡು ನಡೆದಿದ್ದಾರೆ.
ವಚನಗಳ ಮೂಲಕ ಶರಣ ಚಿಂತನೆಗಳನ್ನು ನಿತ್ಯವು ಹೇಳಿ ಜನರ ಮನದ ಮೈಲಿಗೆಯನ್ನು ತೊಳೆದಿದ್ದಾರೆ. ಮೌಢ್ಯ ಕಂದಾಚಾರಗಳನ್ನು ತೊಡೆದು ಹಾಕಿ ವಚನ ಸಾಹಿತ್ಯದ ಹೊಳಹುಗಳನ್ನು ಬಿತ್ತಿದ್ದಾರೆ. ಇಷ್ಟಲಿಂಗ ಧಾರಣೆ ಮಾಡಿಸಿ, ಅವರೆಲ್ಲರಿಂದ ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೆರಿಸಿ ಕೊಟ್ಟಿದ್ದಾರೆ.

ಬಸವ ತತ್ವವನ್ನು ಬಿತ್ತುವ ಕೈಂಕೈರ್ಯ ಕೈಕೊಂಡ ಪೂಜ್ಯ ಪ್ರಭುದೇವರು ಹಾಗೂ ಊರಿನ ಬಸವ ಬಳಗದ ಯುವಕರ ಶ್ರಮ ಸಾರ್ಥಕವಾಗಿದೆ.ಅನುಕರಣೀಯವಾಗಿದೆ.