ಅನುಭವ ಮಂಟಪಕ್ಕೆ ಅಡಿಗಲ್ಲು ಪರುಷ ಕಟ್ಟೆ ! ಅಲ್ಲಿ ಬಸವಣ್ಣನವರು ಏನೇನು ಮಾಡುತ್ತಿದ್ದರು ?
ವಿಶ್ವಾರಾಧ್ಯ ಸತ್ಯಂಪೇಟೆ

ಬಸವಣ್ಣನವರು ವಿಶ್ವದ ಅಚ್ಚರಿಯಾದ ವ್ಯಕ್ತಿತ್ವ ಉಳ್ಳವರಲ್ಲಿ ಅಗ್ರಗಣ್ಯರು. ಅವರು ಬದುಕಿರುವಾಗಲೆ ಹಲವಾರು ಕುತೂಹಲಗಳಿಗೆ, ಆಶ್ಚರ್ಯಗಳಿಗೆ ಒಳಗಾಗಿ ಪೂಜಿಸಲ್ಪಟ್ಟವರು. ಬಸವಣ್ಣನಿಂದ ಬದುಕಿತೀ ಲೋಕವೆಲ್ಲ ಎಂದು ಬಹಳಷ್ಟು ಸಮಕಾಲೀನ ಶರಣರಿಂದ ಪ್ರಶಂಸೆಗೆ ಒಳಗಾವರು. ಅನುಭಾವದ ತುತ್ತ ತುದಿಗೆ ಏರಿನಿಂತ, ಜ್ಞಾನದ ಮೇರುಗಿರಿ ಅಲ್ಲಮಪ್ರಭುಗಳು ಮಹಾ ಮಹಿಮ ಸಂಗನ ಬಸವಣ್ಣನು, ಎನಗೆಯೂ ಗುರು, ನಿನಗೆಯೂ ಗುರು, ಜಗವೆಲ್ಲಕ್ಕೆಯೂ ಗುರು ಕಾಣಾ ಗುಹೇಶ್ವರಾ ಎಂದು ಕರೆಯಿಸಿಕೊಂಡವರು. ಅಂದಿನ ಕಿಲ್ಲೆ ಕಲ್ಯಾಣಕ್ಕೆ ಹೋಗಬೇಕಾದವರು,
ಕಲ್ಯಾಣವೆಂಬುದಿನ್ನಾರಿಗೆ ಹೊಗಬಹುದು ?
ಹೊಗಬಾರದು ಅಸಾಧ್ಯವಯ್ಯಾ
ಆಸೆ ಆಮಿಷ ಅಳಿದಂಗಲ್ಲದೆ
ಕಲ್ಯಾಣದತ್ತಲಡಿಯಿಡಬಾರದು.
ಒಳ ಹೊರಗು ಶುದ್ಧನಾದಂಗಲ್ಲದೆ ಕಲ್ಯಾಣವ ಹೊಗಬಾರದು.
ನೀನಾನೆಂಬುದ ಹರಿದಂಗಲ್ಲದೆ ಕಲ್ಯಾಣದ ಒಳಗು ತಿಳಿಯಬಾರದು.
ಚೆನ್ನಮಲ್ಲಿಕಾರ್ಜುನಂಗೊಲಿದು ಉಭಯ ಲಜ್ಜೆ ಅಳಿದೆನಾಗಿ
ಕಲ್ಯಾಣವಂ ಕಂಡು ನಮೋ ನಮೋ ಎನುತಿದ್ದೆನು
ಎಂಬ ಅಕ್ಕಮಹಾದೇವಿ ತಾಯಿಯ ವಚನ ಕಲ್ಯಾಣ ಪಟ್ಟಣ ಎಂಥ ವ್ಯಕ್ತಿತ್ವಗಳಿಗೆ ಕಾದಿತ್ತು ಎಂಬುದು ಸ್ಪಷ್ಟವಾಗುತ್ತದೆ. ಚೆನ್ನಮಲ್ಲಿಕಾರ್ಜುನನ ಹುಡುಕುತ್ತ ಹೊರಟ ಅಕ್ಕಮಹಾದೇವಿ ತಾಯಿ ಕಲ್ಯಾಣ ತಲುಪಿದಾಗ ಆಕೆ ತನ್ನ ಗುರಿ ಚೆನ್ನಮಲ್ಲಿಕಾರ್ಜುನನ್ನು ಮರೆತು ಶರಣರೆಲ್ಲರ ಜೊತೆ ಬೆರೆತು ಹೋಗುತ್ತಾಳೆ.
ಆಡುವುದು ಹಾಡುವುದು ಹೇಳುವುದು ಕೇಳುವುದು
ನಡೆವುದು ನುಡಿವುದು ಸರಸ ಸಮ್ಮೇಳವಾಗಿಪ್ಪುದಯ್ಯಾ ಶರಣರೊಡನೆ
ಚೆನ್ನಮಲ್ಲಿಕಾರ್ಜುನಯ್ಯಾ , ನೀ ಕೊಟ್ಟ ಆಯುಷ್ಯವುಳ್ಳನಕ್ಕರ
ಲಿಂಗ ಸುಖಿಗಳ ಸಂಗದಲ್ಲಿ ದಿನಗಳ ಕಳೆವೆನು
ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲಗೊರವನ ಮರೆತು ಕಲ್ಯಾಣದ ಶರಣರ ಜೊತೆ ಆನಂದಿAದ ಉಳಿದ ಆಯುಷ್ಯ ಕಳೆಯಲು ಇಚ್ಛಿಸುತ್ತಾರೆ. ಲೋಕ ಸಂಚಾರಿಯಾದ ಅಲ್ಲಮ ಸೊಲ್ಲಾಪುರದ ಸಿದ್ಧರಾಮ ಶರಣರನ್ನು ಕರೆತಂದು ಬಸವಣ್ಣನವರ ವ್ಯಕ್ತಿತ್ವದೆದುರು ಮುಖಾಮುಖಿಯಾಗಿಸುತ್ತಾರೆ. ವ್ಯಕ್ತಿಯ ಸಾಧನೆಗಿಂತ ಮುಖ್ಯ ಸಾಮಾಜಿಕ ಪ್ರಜ್ಞೆ ಎಂಬುದನ್ನು ಮತ್ತೆ ಮತ್ತೆ ಸಾಬೀತು ಪಡಿಸುತ್ತಾರೆ. ಬಸವಣ್ಣನವರು ಬರುವುದಕ್ಕಿಂತ ಮುಂಚಿನ ಆಧ್ಯಾತ್ಮ- ಭಕ್ತಿ ಜನ ಸಾಮಾನ್ಯರ ಕೈಗೆಟುಕದ ಆಕಾಶದ ನಕ್ಷತ್ರವಾಗಿತ್ತು. ಆ ನಕ್ಷತ್ರವನ್ನು ಬಡವರ ಗುಡಿಸಲಿಗೆ ತಂದ ಶ್ರೇಯಸ್ಸು ಅಪ್ಪ ಬಸವಣ್ಣನವರಿಗೆ ಸಲ್ಲುತ್ತದೆ.
ಬಿಜ್ಜಳ ರಾಜನ ಆಡಳಿತದಲ್ಲಿ ಮಂತ್ರಿಯಾಗಿಯೂ ಬಸವಣ್ಣನವರು ಆನೀ ಭವಿ ಬಿಜ್ಜಳಂಗAಜ್ಜುವೆನೆ ? ಎಂದು ಪ್ರಶ್ನಿಸಿ ಆ ರಾಜಾಡಳಿತವನ್ನು ಮೆತ್ತಗೆ ಮಾಡಿ ಜನ ಸಾಮಾನ್ಯರೆಲ್ಲ ಮುಕ್ತವಾಗಿ ಮಾತನಾಡುವಂಥ, ಬದುಕುವಂಥ, ಪ್ರಶ್ನಿಸುವಂಥ ತಿಳಿಯಾದ ವಾತಾವರಣವನ್ನು ಸೃಷ್ಟಿಸುತ್ತಾರೆ. ರಾಜಾಡಳಿತದ ಆ ದಿನಗಳಲ್ಲೂ ಬಸವ ಪ್ರಜಾಪ್ರಭುತ್ವದ ಬೀಜಗಳನ್ನು ಭರಪೂರವಾಗಿ ಬಿತ್ತಿ ಬೆಳೆಯುತ್ತಾರೆ. ಹಾಗಂತಲೆ ಮಡಿವಾಳ ಮಾಚಿದೇವರು ಭವಿಗಳ ಬಟ್ಟೆಯನ್ನು ತೊಳೆಯಲಾರೆ ಎಂಬ ಪ್ರತಿಜ್ಞೆಯನ್ನು ಮಾಡಲು ಸಾಧ್ಯವಾಗುತ್ತದೆ. ನಿಜ ಶರಣ ಅಂಬಿಗರ ಚೌಡಯ್ಯರು ಭವಿಗಳು ತ್ರಿಪುರಾಂತಕ ಕೆರೆಯಲ್ಲಿ ಬೋಂಕನೆ ಮುಳುಗಿಸುವ ಆಲೋಚನೆ ಮಾಡುತ್ತಾರೆ. ಮಧುವರಸರು ತಮ್ಮ ಮಗಳು ಕಲ್ಯಾಣವತಿಯನ್ನು, ಶರಣ ಹರಳಯ್ಯನ ಮಗ ಶೀಲವಂತನಿಗೆ ಕೊಡುವ ನಿರ್ಧಾರ ಮಾಡುತ್ತಾರೆ. ಮಾದಾರ ಚೆನ್ನಯ್ಯ ಡೋಹರ ಕಕ್ಕಯ್ಯಾ, ಸಮಗಾರ ಹರಳಯ್ಯಾ, ಮುಂತಾದ ಶರಣರೆಲ್ಲ ಅಂದಿನ ಕಲ್ಯಾಣದ ಬೀದಿ ಬೀದಿಗಳಲ್ಲಿ ನಿರ್ಭಯವಾಗಿ ತಿರುಗಾಡಲು ಸಾಧ್ಯವಾಗುತ್ತದೆ. ಈ ಮುಕ್ತವಾದ ಸಾಮಾಜಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ, ಬದಲಾವಣೆಯ ಹಿಂದೆ ಬಸವಣ್ಣನವರ ದಟ್ಟವಾದ ಛಾಯೆ ಇದ್ದೇ ಇದೆ.
ಬಸವಣ್ಣನವರು ಬಿಜ್ಜಳನ ಅರಮನೆಗೆ ಹೋಗುವುದಕ್ಕಿಂತ ಪೂರ್ವದಲ್ಲಿ – ಬಂದ ನಂತರ ಅವರು ಪರುಷ ಕಟ್ಟೆಯ ಮೇಲೆ ಕೂಡ್ರುತ್ತಿದ್ದರು. ಆ ಕಟ್ಟೆಯನ್ನು ಪರುಷ ಕಟ್ಟೆ ಎಂದು ಕರೆಯಲು ಮುಖ್ಯ ಕಾರಣ ಬಸವಣ್ಣನವರ ಸರಳ ಸಜ್ಜನಿಕೆಯ ನಡೆ ನುಡಿಗಳು.
ಬಸವಣ್ಣಾ, ನೀವು ಮರ್ತ್ಯಕ್ಕೆ ಬಂದು ನಿಂದಡೆ
ಭಕ್ತಿಯ ಬೆಳವಿಗೆ ದೆಸೆದೆಸೆಗೆಲ್ಲಾ ಪಸರಿಸಿತ್ತಲ್ಲಾ !
ಅಯ್ಯಾ ಸ್ವರ್ಗ ಮರ್ತ್ಯ ಪಾತಾಳದೊಳಗೆಲ್ಲಾ
ನಿಮ್ಮ ಭಕ್ತಿಯ ಬೆಳವಿಗೆಯ ಘನವನಾರು ಬಲ್ಲರು ?
ಎಂಬ ಕ್ರಾಂತಿ ಮಾತೆ ಅಕ್ಕನಾಗಲಾಂಬಿಕೆಯ ವಚನ ಕೇವಲ ವಚನವಲ್ಲ. ಅಂದಿನ ಕಲ್ಯಾಣದ ಪರಿಸರಕ್ಕೆ ಬಸವಣ್ಣನವರು ಹೇಗೆ ಬೆಳಕಾದರು ? ಎಂಬುದನ್ನು ವಿವರಿಸುತ್ತದೆ. ಮರುಜವಣಿಯಂತೆ ಬಸವಣ್ಣನವರು ಕಂಡ ಮೇಲೆ ಅವರೆಲ್ಲ ಮರಣ ಹಂಗಿಗರಾಗಲಿಲ್ಲ. ಪರುಷವುಳ್ಳ ಅಪ್ಪ ಬಸವಣ್ಣನವರನ್ನು ಕಂಡುಕೊAಡಾದ ಮೇಲೆ ಪಾಷಾಣದ ಹತ್ತಿರ ಸುಳಿಯಲಿಲ್ಲ. ಜ್ಯೋತಿಯ ಬೆಳಗಿನಲ್ಲಿದ್ದವಂಗೆ ಕತ್ತಲೆಯ ಹಂಗುಂಟೆ ? ಸಂಪೂರ್ಣ ಲಿಂಗವೇ ತಾನಾದವಂತೆ ಲಿಂಗದ ಹಂಗುಂಟೆ ? ಎಂದೆಲ್ಲ ಶರಣರು ತಮ್ಮ ತಮ್ಮಲ್ಲಿಯೆ ಚರ್ಚಿಸಿದರು.
ಅಂದರೆ ಅಂದಿನ ಪರುಷ ಕಟ್ಟೆ ಬಸವಣ್ಣನವರು ಸಕಲರೊಂದಿಗೆ ಬೆರೆಯುತ್ತಿದ್ದ ಅವರ ಕಷ್ಟ ಸುಖಗಳೊಂದಿಗೆ ಮಿಳಿತವಾಗುತ್ತಿದ್ದ ಕಟ್ಟೆ. ಬಸವಣ್ಣನವರು ನುಡಿದರೆ ಮುತ್ತಿನ ಹಾರದಂತೆ, ನುಡಿದರೆ ಮಾಣಿಕ್ಯದ ದೀಪ್ತಿಯಂತೆ. ನುಡಿದರೆ ಸ್ಪಟಿಕದ ಸಲಾಕೆಯಂತೆ. ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು ಎಂಬ ರೀತಿ ಎಲ್ಲರನ್ನೂ ಆಕರ್ಷಿಸಿ ಬಿಟ್ಟಿತ್ತು. ಬಸವಣ್ಣನವರು ಮಾತನಾಡುತ್ತಿದ್ದರೆ ಅವರ ಮಾತನ್ನೇ ತದೇಕ ಚಿತ್ತರಾಗಿ ಕೇಳಬೇಕೆಂಬ ಹಂಬಲ. ಅವರ ಕೈ ಮೈಗೆ ತಾಗಿದರೆ ಅದು ಪರುಷ ಸ್ಪರ್ಶ. ಇಡೀ ಮೈ ರೋಮಾಂಚನ. ಅನಿರ್ವಚನೀಯ ಪುಳಕ. ವಿವರಿಸಲಾಗದ ಖುಷಿ. ತಲೆಯ ತಗ್ಗಿಸಿ, ನೆಲನ ಬರೆಯುತ್ತಿದ್ದ ತಳ ವರ್ಗದ ಜನ ಮೈ ಕೊಡವಿ ಮೇಲೇಳುವ ಉತ್ಸಾಹ. ಬಸವಣ್ಣನೆಂಬ ಪರುಷದ ಬಲದಿಂದ ಅವಲೋಹದ ಕೇಡು. ಅವರ ಅನುಭಾವದ ಬಲದಿಂದ ಜನ ಸಾಮಾನ್ಯರ ಭವದ ಕೇಡು ಉಂಟಾಗುತ್ತಿತ್ತು.
ಮೋಳಿಗೆಯ ಮಹಾದೇವ ಅರಸು ಕಾಶ್ಮೀರ ತೊರೆದು ಕಲ್ಯಾಣಕ್ಕೆ ಬರುವುದಕ್ಕೆ ಮುಖ್ಯ ಆಕರ್ಷಣೆಯೆ ಬಸವಣ್ಣನವರೆಂಬ ಚುಂಬಕ ಶಕ್ತಿ. ಆ ಕಲ್ಯಾಣದ ಪರುಷ ಕಟ್ಟೆಯ ಹತ್ತಿರ ಕಳ್ಳರು, ಸುಳ್ಳರು,ವ್ಯಭಿಚಾರಿಗಳು, ಮೈಗಳ್ಳರು, ಪುಣ್ಯಾಂಗನೆಯರೂ ಹಲವಾರು ವ್ಯಸನಿಗಳು ಇರುತ್ತಿದ್ದರು. ಬಸವಣ್ಣ ಅವರೆಲ್ಲರಿಗೂ ಆಕರ್ಷಣೆಯ ಕೇಂದ್ರವಾದರು. ಅವರೊಂದಿಗೆ ಮುಕ್ತವಾಗಿ ಬೆರೆತರು. ತಾವು ಬಿಜ್ಜಳನ ಅರಮನೆಯಲ್ಲಿ ಪ್ರಧಾನಿಯಾಗಿಯೂ ಅದನ್ನವರು ಹೊತ್ತು ಕೊಂಡು ಇಲ್ಲಿ ಬರುತ್ತಿರಲಿಲ್ಲ. ಆ ಮಂತ್ರಿ ಕಾರ್ಯವನ್ನು ಅಲ್ಲಿದಲ್ಲಿಗೆ ಮುಗಿಸಿ, ಜನ ಸಾಮಾನ್ಯರೊಂದಿಗೆ ಮಿಳಿತವಾಗಲು ಈ ಕಟ್ಟೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಮಂತ್ರಿಯೆಂಬ ಅಧಿಕಾರದಿಂದ ಎಂದೂ ಬಸವಣ್ಣನವರು ಈ ಕಟ್ಟೆಗೆ ಬರುತ್ತಿರಲಿಲ್ಲ. ಮಂತ್ರಿ ಬಸವಣ್ಣನವರಾಗಿ ಇಲ್ಲಿ ಬಂದು ಹೋಗುವುದು ಮಾಡುತ್ತಿದ್ದರೆ ಎಲ್ಲಾ ಜನ ವರ್ಗದವರು ಇಲ್ಲಿ ಸೇರಲು , ಚರ್ಚಿಸಲು ಸಾಧ್ಯಾಗುತ್ತಿರಲಿಲ್ಲ ಎಂದೆ ನನ್ನ ಅಂಬೋಣ.
ಜನ ಸಾಮಾನ್ಯರೊಂದಿಗೆ ಬಸವಣ್ಣನವರು ಬೆರೆಯುತ್ತಿದ್ದರು ಎಂತಲೆ ಅವರಿಗೆ ಇಕ್ಕುಳ ಕೈ ಮುಗಿದಂತೆ ಬಿದ್ದಿರುವುದು ಗೊತ್ತಾಯಿತು. ಏತ ತಲೆಬಾಗಿದ ಸಂಗತಿಯೂ ತಿಳಿಯಿತು. ಚೇಳು ಬಸಿರಾಯಿತ್ತೆ ಕಡೆ, ಬಾಳೆಗೆ ಫಲವಾಯಿತ್ತೆ ಕಡೆ ಎಂಬ ವೈಜ್ಞಾನಿಕ ಸತ್ಯ ಅವರಿಗೆ ಕಂಡಿತು. ಜನ ಸಾಮಾನ್ಯರೊಂದಿಗೆ ಸಾಮಾನ್ಯರಾಗಿ ಬೆರೆಯದೆ ಹೋಗಿದ್ದರೆ ಬಸವಣ್ಣನವರ ಸಮಕಾಲೀನ ಶರಣರು ಬಸವಣ್ಣನವರನ್ನು ಹಾಡಿ ಹೊಗಳಲು ಸಾಧ್ಯವಿರಲಿಲ್ಲ. ಕಲ್ಯಾಣದ ಪರುಷ ಕಟ್ಟೆ , ಕಲ್ಯಾಣದ ಜನಕ್ಕೆ ಜೀವದಲ್ಲಿ ಉತ್ಸಾಹ ತುಂಬುತ್ತಿದ್ದ, ಅವರೊಳಗೆ ಕನಸುಗಳನ್ನು ಬಿತ್ತುತ್ತಿದ್ದ, ಅವರಲ್ಲಿನ ಅಜ್ಞಾನವನ್ನು ಕಳೆದು ಜ್ಞಾನದ ದೀವಿಗೆಯನ್ನು ಮುಡಿಸುತ್ತಿದ್ದ ಕಟ್ಟೆಯಾಗಿತ್ತು. ಬಸವಣ್ಣನವರೊಂದಿಗೆ ಯಾರೇ ಮಾತಾಡಿದರೂ ಸಾಕು ಅವರೆಲ್ಲ ಉಲ್ಲಾಸಭರಿತರಾಗಿ ಎದ್ದು ಹೋಗುತ್ತಿದ್ದರು. ಬಸವಣ್ಣವರ ಹಸ್ತ ಪರುಷ, ಭಾವ ಪರುಷ,ವಾಕ್ ಪರುಷ, ದೃಷ್ಟಿ ಪರುಷ ಮುಂತಾದವುಗಳು ಚಮತ್ಕಾರಿಕ ಪರಿಣಾಮವನ್ನುಂಟು ಮಾಡುತ್ತಿದ್ದವು.
ನಾವು ನೀವೆಲ್ಲ ಭಾವಿಸುವಂತೆ ಪರುಷ ಕಟ್ಟೆ ಕೇವಲ ಕಲ್ಲು ಮಣ್ಣುಗಳಿಂದ ಒಡಗೂಡಿದ ಕಟ್ಟೆಯಲ್ಲ. ಬಸವಣ್ಣನವರು ಜನ ಸಾಮಾನ್ಯರೊಂದಿಗೆ ಬೆರೆತು ಮಾತು ಕತೆ ಆಡಿದ ಅವರ ಬದುಕಿನಲ್ಲಿ ಅನುಭವ ಮಂಟಪದ ಬೀಜ ಬಿತ್ತಿದ ಕೇಂದ್ರ ಸ್ಥಳ. ಅನುಭವ ಮಂಟಪ ಅನುಭಾವಿಗಳಿಗೆ ಮಾತ್ರ ಸ್ವಾಗತಿಸಿದರೆ ಇಲ್ಲಿ ಅದಕ್ಕೂ ಪೂರ್ವದ ಅನುಭವಗಳ ಚರ್ಚೆ ನಡೆಯುತ್ತಿತ್ತು. ಒಂದರ್ಥದಲ್ಲಿ ಆ ಅನುಭವ ಮಂಟಪಕ್ಕೆ ಭದ್ರ ಬುನಾದಿಯೆ ಪರುಷ ಕಟ್ಟೆ.
ಸಿರಿಯಾಳಚಂಗಳೆಯರಂತೆ ಶಿಶುವಧೆಯ ಮಾಡಿದವನಲ್ಲ
ನಂಬಿ ಬಲ್ಲಾಳರಂತೆ ಕಾಮುಕತನವ ಮಾಡಿದವನಲ್ಲ
ಬೊಮ್ಮಯ್ಯ ಕಣ್ಣಪ್ಪನವರಂತೆ ಜೀವ ಹಿಂಸೆಯ ಮಾಡಿದವನಲ್ಲ
ಗುಹೇಶ್ವರಾ ನಿಮ್ಮ ಶರಣರಿಗಿಕ್ಕಿದ ತೊಡವು ಸಂಗನ ಬಸವಣ್ಣ
ಎಂಬ ವಚನವನ್ನು ಅಲ್ಲಮ ಪ್ರಭುಗಳು ಬರೆಯಬೇಕಾದರೆ ಬಸವಣ್ಣನವರ ವ್ಯಕ್ತಿತ್ವ ಎಂಥದ್ದಿತ್ತು ಎಂದು ನಾವು ಇಂದು ಊಹಿಸುವುದಕ್ಕೂ ಕಷ್ಟವಾಗುತ್ತದೆ. ಕಲ್ಯಾಣದ ಅಂದಿನ ಪರುಷ ಕಟ್ಟೆಯ ಮೂಲಕವೆ ಬಸವಣ್ಣನವರು ಕಲ್ಯಾಣ ಪಟ್ಟಣವನ್ನು ಬೇಡುವವರಿಲ್ಲದೆ ಬಡವನಾದೆ ಎಂಬಂತೆ ಮಾಡಿದರು. ತಮ್ಮೊಂದಿಗೆ ಅಂದು ಬಂದು ಚರ್ಚಿಸುತ್ತಿದ್ದ ಜನತೆಗೆ ದುಡಿಯುವ ಮಹಿಮೆಯನ್ನು ಹೇಳಿಕೊಟ್ಟು ಅವರೆಲ್ಲರಿಗೆ ಕಣ್ಣಾದರು. ಅವರ ಬಾಳಿಗೆ ಆಸರೆಯಾದರು. ತಾವು ಮುಂದೆ ಕಟ್ಟಿದ ಅನುಭವ ಮಂಟಪಕ್ಕೆ ಪರುಷ ಕಟ್ಟೆ ಆರಂಭಿಕ ಹಂತದ ಅಡಿಗಲ್ಲಾಯಿತು. ಇಷ್ಟಲಿಂಗ ಪೂಜೆಗೆ ಹೇಗೋ ಅರಿವಿನ ಮನೆಯ ಕದ ತೆರೆದಿತ್ತು.
ಈ ಎಲ್ಲಾ ಇತಿಹಾಸವನ್ನು ಅರಿತು ಇಂದಿನ ಪರುಷ ಕಟ್ಟೆಯನ್ನು ಸರಕಾರ ಪುನರ್ ಸೃಷ್ಟಿಸಬೇಕಿದೆ. ಅಲ್ಲಿ ಬಸವಣ್ಣನವರು ಪ್ರಧಾನಿ ಪೋಷಾಕಿನಲ್ಲಿ, ಕಿರೀಟ ಧರಿಸಲು ಸಾಧ್ಯವಿಲ್ಲ. ಇಷ್ಟಲಿಂಗ ಪೂಜೆಯನ್ನೂ ಅಲ್ಲಿ ಮಾಡಿರಲಾರರು. ಸಾಮಾನ್ಯರೊಂದಿಗೆ ಸಾಮಾನ್ಯವಾಗಿ ಬೆರೆತಿರುವ ಬಸವಣ್ಣನವರ ಮೂರ್ತಿ ಅಲ್ಲಿ ಪ್ರತಿಷ್ಟೆಗೊಂಡುದ್ದೇ ಆದರೆ ಅದು ಅತ್ಯಂತ ಸೂಕ್ತವಾಗಬಹುದು ಎಂಬ ಬಯಕೆ ನನ್ನದು.
೦ ವಿಶ್ವಾರಾಧ್ಯ ಸತ್ಯಂಪೇಟೆ, ಶಹಾಪುರ